ವಿದ್ಯಾರ್ಥಿವೇತನ ಬಿಡುಗಡೆಗೆ ಒತ್ತಾಯ

HUN-OCT-27-5(ABVP STRIKE)
Published on

ಹುಣಸೂರು: ರಾಜ್ಯ ಸರ್ಕಾರ ವಿದ್ಯಾರ್ಥಿಗಳ ವಿದ್ಯಾರ್ಥಿವೇತನವನ್ನು ತಡೆಹಿಡಿಯುವ ಮೂಲಕ ಶೈಕ್ಷಣಿಕ ಭವಿಷ್ಯಕ್ಕೆ ಕೊಡಲಿಪೆಟ್ಟು ನೀಡಿದೆ ಎಂದು ಆರೋಪಿಸಿ ಅಖಿಲ ಭಾರತ ವಿದ್ಯಾರ್ಥಿ ಪರಿಷತ್(ಎಬಿವಿಪಿ)ನ ಹುಣಸೂರು ಶಾಖೆಯಿಂದ ಶುಕ್ರವಾರ ಪ್ರತಿಭಟನೆ ನಡೆಯಿತು.


ನಗರದ ಜ್ಞಾನಧಾರ ಕಾಲೇಜಿನ ಆವರಣದಿಂದ ಪ್ರತಿಭಟನಾ ಮೆರವಣಿಗೆ ಹೊರಟ ಕಾರ್ಯಕರ್ತರು, ವಿದ್ಯಾರ್ಥಿಗಳು ತಾಲೂಕು ಕಚೇರಿ ಮುಂಭಾಗ ಜಮಾವಣೆಗೊಂಡು ರಾಜ್ಯ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.


ಎಬಿವಿಪಿ ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯ ಶ್ರೀಕಂಠಮೂರ್ತಿ ಮಾತನಾಡಿ, ಎಸ್‌ಎಸ್‌ಪಿ ತಂತ್ರಾಂಶದ ಮೂಲಕ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಸಮಾಜ ಕಲ್ಯಾಣ, ತಾಂತ್ರಿಕ ಶಿಕ್ಷಣ ಹಾಗೂ ಇತರ ಇಲಾಖೆಗಳ ಅಡಿಯಲ್ಲಿ ಲಕ್ಷಾಂತರ ವಿದ್ಯಾರ್ಥಿಗಳು ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಆದರೆ, ರಾಜ್ಯ ಸರ್ಕಾರ ಸರಿಯಾದ ಸಮಯಕ್ಕೆ ವಿದ್ಯಾರ್ಥಿವೇತನ ನೀಡದೆ ಭವಿಷ್ಯದ ಜತೆ ಚೆಲ್ಲಾಟವಾಡುತ್ತಿದೆ ಎಂದು ಆರೋಪಿಸಿದರು.


ರಾಜ್ಯ ಸರ್ಕಾರ 2022-23ನೇ ಸಾಲಿಗಾಗಿ ನೀಡಬೇಕಿದ್ದ ವಿದ್ಯಾರ್ಥಿ ವೇತನವನ್ನು ತಡೆ ಹಿಡಿದಿದೆ. ತಂತ್ರಾಂಶದಲ್ಲಿ ಮಂಜೂರಾಗಿರುವುದಾಗಿ ತೋರಿದರೂ ಖಾತೆಗೆ ಹಣ ಜಮೆ ಆಗಿಲ್ಲ. ಹಣ ಜಮೆ ಆಗುವ ಮೊದಲೇ ಮುಂದಿನ ಶೈಕ್ಷಣಿಕ ಸಾಲಿಗೆ ಅರ್ಜಿ ಆಹ್ವಾನಿಸಿರುವುದು ಗೊಂದಲ ಉಂಟು ಮಾಡಿದೆ. ಹಾಗಿದ್ದರೆ ಪ್ರಸ್ತುತ ಸಾಲಿನ ವಿದ್ಯಾರ್ಥಿ ವೇತನ ಏನಾಯಿತು ಎಂಬುದೇ ತಿಳಿದಿಲ್ಲ. ರೈತರ ಮಕ್ಕಳ ಶಿಕ್ಷಣಕ್ಕಾಗಿ ಹಿಂದಿನ ಸರ್ಕಾರ ರೈತ ವಿದ್ಯಾನಿಧಿ ಯೋಜನೆ ಪ್ರಾರಂಭಿಸಿತ್ತು. ಇದೀಗ ಸರ್ಕಾರ ಆ ಯೋಜನೆ ರದ್ದುಪಡಿಸುವ ಮೂಲಕ ರೈತರ ಮಕ್ಕಳ ಶಿಕ್ಷಣವನ್ನು ಕಸಿದುಕೊಳ್ಳುವ ಕೆಲಸವನ್ನು ಮಾಡುತ್ತಿದೆ ಎಂದು ದೂರಿದರು.


ಬಳಿಕ ತಹಸೀಲ್ದಾರ್ ಡಾ.ಎಸ್.ಯು.ಅಶೋಕ್‌ಗೆ ಮನವಿ ಸಲ್ಲಿಸಿ ಪ್ರತಿಭಟನೆ ಅಂತ್ಯಗೊಳಿಸಿದರು. ಜಿಲ್ಲಾ ಸಂಘಟನಾ ಕಾರ್ಯದರ್ಶಿ ಚಂದ್ರಶೇಖರ, ಕಾರ್ಯಕರ್ತರಾದ ವರುಣ್, ಸಾಗರ್, ರಕ್ಷಿತಾ, ಚಾಂದಿನಿ, ಮಧು, ಸೂರ್ಯ ಇತರರು ಹಾಜರಿದ್ದರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net