

ಸರಗೂರು: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರು ಹಾಗೂ ಬಿಸಿಯೂಟ ತಯಾರಕರು ಸಿಐಟಿಯು ನೇತೃತ್ವದಲ್ಲಿ ಬುಧವಾರ ಪಟ್ಟಣ ಪಂಚಾಯಿತಿ ಎದುರು ಪ್ರತಿಭಟನೆ ನಡೆಸಿದರು.
ಸಿಐಟಿಯು ತಾಲೂಕು ಘಟಕದ ಅಧ್ಯಕ್ಷ ಬಿ.ಎಂ.ಶಿವಣ್ಣ ಮಾತನಾಡಿ, ರಾಜ್ಯದಲ್ಲಿರುವ ಕಾರ್ಮಿಕರು, ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರು ಹಾಗೂ ಶಾಲಾ ಬಿಸಿಯೂಟ ತಯಾರಕರಿಗೆ ರಾಜ್ಯ ಸರ್ಕಾರ ಅನ್ಯಾಯ ಮಾಡುತ್ತಿದೆ. ಕನಿಷ್ಠ ವೇತನ ಸಿಗದೆ ಜೀವನ ಸಾಗಿಸಲು ಕಷ್ಟಪಡುತ್ತಿದ್ದಾರೆ. ಬೇಡಿಕೆ ಈಡೇರಿಸುವ ಭರವಸೆ ನೀಡಿದ್ದ ರಾಜ್ಯ ಸರ್ಕಾರ ಮಾತು ತಪ್ಪಿದೆ ಎಂದು ಆರೋಪಿಸಿದರು.
ಕಾರ್ಮಿಕರಿಗೆ ಕನಿಷ್ಠ 24 ಸಾವಿರ ರೂ. ವೇತನ ನಿಗದಿಪಡಿಸಬೇಕು. ಅಸಂಘಟಿತ ಕಾರ್ಮಿಕರ ಅಭಿವೃದ್ಧಿಗಾಗಿ ಸ್ಥಾಪಿಸಿರುವ ಕಾರ್ಮಿಕರ ಕಲ್ಯಾಣ ಮಂಡಳಿಗೆ 500 ಕೋಟಿ ರೂ. ಅನುದಾನ ನೀಡಬೇಕು. ಅನುಕಂಪದ ಆಧಾರದಲ್ಲಿ ಮಗಳಿಗೆ ಕೆಲಸ ನೀಡಲಾಗುತ್ತಿದ್ದು, ಸೊಸೆಯಂದಿರನ್ನೂ ಪರಿಗಣಿಸಬೇಕು ಎಂದು ಮನವಿ ಮಾಡಿದರು.
ಅಂಗನವಾಡಿ ಕಾರ್ಯಕರ್ತೆಯರ ಸಂಘದ ಅಧ್ಯಕ್ಷೆ ನೀಲಮ್ಮ ಮಾತನಾಡಿ, ಗುತ್ತಿಗೆ ನೌಕರರನ್ನು ಕಾಯಂ ಮಾಡಿ ಸಮಾನ ಕೆಲಸಕ್ಕೆ ಸಮಾನ ವೇತನ ಜಾರಿ ಮಾಡಬೇಕು. ಅಂಗನವಾಡಿ ನೌಕರರು, ಬಿಸಿಯೂಟ ಸಿಬ್ಬಂದಿಗೆ 31 ಸಾವಿರ ರೂ. ಕನಿಷ್ಠ ವೇತನ ಜಾರಿ ಮಾಡಬೇಕು. ಸಾರ್ವಜನಿಕ ವಲಯಗಳ ಖಾಸಗಿ ಕಾರಣ ನಿಲ್ಲಬೇಕು. ಕೇಂದ್ರ ಸರ್ಕಾರ ಕಾರ್ಮಿಕ ಪರವಾದ ನೀತಿಗಳನ್ನು ಜಾರಿ ಮಾಡಬೇಕು. ಈ ಎಲ್ಲ ಬೇಡಿಕೆಗಳ ಈಡೇರಿಕೆಗಾಗಿ ಜ.23ರಂದು ಸಂಸದರ ಕಚೇರಿ ಚಲೋ ನಡೆಸಲಾಗುತ್ತಿದೆ ಎಂದರು.
ಕಾರ್ಯದರ್ಶಿ ಶಾಂತಮಣಿ, ಖಜಾಂಚಿ ದೇವರಾಜಮ್ಮ, ಮಹದೇವಮ್ಮ, ಸುಮಾ, ಶಿವಕುಮಾರಿ, ಎಚ್.ಎಸ್.ರೂಪಾ, ಚಿಕ್ಕತಾಯಮ್ಮ, ಜ್ಯೋತಿ, ಕೆಂಪದೇವಮ್ಮ, ಸುಕನ್ಯಾಕುಮಾರಿ ಇತರರು ಪಾಲ್ಗೊಂಡಿದ್ದರು.