ಭಗವಾನ್ ಗಡಿಪಾರಿಗೆ ಆಗ್ರಹ

16M.D.R.1
Published on

ಮದ್ದೂರು: ರಾಜ್ಯ ಸರ್ಕಾರ ಭ್ರಷ್ಟಾಚಾರದಲ್ಲಿ ನಿರತವಾಗಿದೆ ಎಂದು ವಿರೋಧಿಸಿ ಹಾಗೂ ಸಾಹಿತಿ ಕೆ.ಎಸ್.ಭಗವಾನ್ ಒಕ್ಕಲಿಗರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವುದನ್ನು ಖಂಡಿಸಿ ತಾಲೂಕು ಬಿಜೆಪಿ ಘಟಕದ ಪದಾಧಿಕಾರಿಗಳು ಸೋಮವಾರ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ವಾಹನ ಸಂಚಾರ ತಡೆದು ಪ್ರತಿಭಟಿಸಿದರು.


ಹೆದ್ದಾರಿಯಲ್ಲಿ ಕೆ.ಎಸ್.ಭಗವಾನ್ ಪ್ರತಿಕೃತಿ ದಹಿಸಿ ಘೋಷಣೆಗಳನ್ನು ಕೂಗಿದರು. ಇದರಿಂದ ಕೆಲಕಾಲ ಸಂಚಾರ ಅಸ್ತವ್ಯಸ್ತಗೊಂಡಿತ್ತು. ಬಿಜೆಪಿ ತಾಲೂಕು ಘಟಕದ ಅಧ್ಯಕ್ಷ ಸಿ.ಕೆ.ಸತೀಶ್ ಮಾತನಾಡಿ, ಸಾಹಿತಿ ಕೆ.ಎಸ್.ಭಗವಾನ್ ಅವರು ಒಕ್ಕಲಿಗರ ಬಗ್ಗೆ ಲಘುವಾಗಿ ಮಾತನಾಡಿರುವುದು ಒಕ್ಕಲಿಗ ಜನಾಂಗಕ್ಕೆ ಮಾಡಿದ ಅವಮಾನವಾಗಿದೆ. ಕೂಡಲೇ ಕ್ಷಮೆ ಕೇಳಬೇಕು. ದೇಶದಿಂದಲೇ ಇಂತವರನ್ನು ಗಡಿಪಾರು ಮಾಡಬೇಕು. ಸಮಾಜದ ಸಾಮರಸ್ಯ ಹಾಳು ಮಾಡುವ ಉದ್ದೇಶದಿಂದ ಕಾಂಗ್ರೆಸ್ ಸರ್ಕಾರ ಇಂತಹ ಹೇಳಿಕೆಗಳನ್ನು ಕೊಡಿಸುತ್ತಿದೆ. ಜಾತಿ, ಧರ್ಮಗಳ ನಡುವೆ ಸಂಘರ್ಷ ಮೂಡಿಸುತ್ತಿರುವ ಸರ್ಕಾರಕ್ಕೆ ಮುಂದಿನ ದಿನಗಳಲ್ಲಿ ಜನರೇ ತಕ್ಕ ಪಾಠ ಕಲಿಸುತ್ತಾರೆ ಎಂದು ಎಚ್ಚರಿಕೆ ನೀಡಿದರು.


ರಾಜ್ಯದಲ್ಲಿ ಅಧಿಕಾರ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರ ಬ್ರಹ್ಮಾಂಡ ಭ್ರಷ್ಟಚಾರದಲ್ಲಿ ತೊಡಗಿದ್ದು, ಗುತ್ತಿಗೆದಾರರ ಮೂಲಕ ಪಂಚ ರಾಜ್ಯ ಚುನಾವಣೆಗೆ ಅಕ್ರಮವಾಗಿ ಹಣ ಸಂಗ್ರಹ ಮಾಡಲು ಮುಂದಾಗಿದೆ. ಇವರಿಗೆ ರಾಜ್ಯದ ಜನರ ಹಿತ ಬೇಕಾಗಿಲ್ಲ. ರಾಜ್ಯದಲ್ಲಿ ಅಭಿವೃದ್ಧಿ ಮರೀಚಿಕೆಯಾಗಿದೆ ಎಂದು ಆರೋಪಿಸಿದರು.


ಚುನಾವಣಾ ಪೂರ್ವದಲ್ಲಿ ಐದು ಉಚಿತ ಭಾಗ್ಯಗಳ ಭರವಸೆ ನೀಡಿ ಈಗ ಪ್ರತಿಯೊಂದಕ್ಕೂ ಷರತ್ತು ವಿಧಿಸುವ ಮೂಲಕ ಯೋಜನೆಗಳು ಸಮರ್ಪಕವಾಗಿ ಜನರಿಗೆ ತಲುಪದಂತೆ ಮಾಡಿದ್ದಾರೆ. ಇವರ ಜನ ವಿರೋಧಿ ನೀತಿ 3 ತಿಂಗಳಲ್ಲಿ ರಾಜ್ಯದ ಜನರಿಗೆ ಗೊತ್ತಾಗಿದೆ ಎಂದು ಸರ್ಕಾರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.


ಸತೀಶ್, ಎಂ.ಸಿ.ಸಿದ್ದು, ತೀರ್ಥಾವಾರ್, ಕೃಷ್ಣೇಗೌಡ, ಗುರುಮಲ್ಲಯ್ಯ, ಮಹೇಂದ್ರ, ಪ್ರಕಾಶ್, ಅಕ್ಷರಂ ವೆಂಕಟೇಶ್, ಅಭಿಷೇಕ್, ಮನು, ಬೆಸಗರಹಳ್ಳಿ ಶಶಿ, ಮಧು, ಶ್ವೇತಾ, ಹೇಮಾ, ಬ್ಯಾಡರಹಳ್ಳಿ ಶಿವಕುಮಾರ್, ಕೆಂಪುಬೋರಯ್ಯ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net