

ಬೆಂಗಳೂರು: ಮಸೀದಿ-ಮದರಸಾಗಳ ರಕ್ಷಣೆಗಾಗಿ ವಕ್ಫ್ ಬೋರ್ಡ್ ಸ್ಥಾಪಿಸಿರುವ ರೀತಿ ದೇವಸ್ಥಾನಗಳ ರಕ್ಷಣೆ ಮತ್ತು ನಿರ್ವಹಣೆಗಾಗಿ ಸರಕಾರ ಹಿಂದು ಬೋರ್ಡ್‌ಅನ್ನು ಸ್ಥಾಪಿಸಿ ಅದರ ವ್ಯಾಪ್ತಿಗೆ ದೇವಸ್ಥಾನಗಳನ್ನು ತರಬೇಕು ಎಂದು ಸರ್ವೋಚ್ಚ ನ್ಯಾಯಾಲಯದ ನ್ಯಾಯವಾದಿ ವಿಷ್ಣು ಶಂಕರ್ ಜೈನ್ ಒತ್ತಾಯಿಸಿದ್ದಾರೆ.
ಈ ಬೋರ್ಡ್‌ನಲ್ಲಿ ಹಿಂದು ಧರ್ಮಕ್ಕೆ ಸಂಬಂಧಿಸಿದ ಶಂಕರಾಚಾರ್ಯರು, ಮಠಾಧಿಪತಿ ಮೊದಲಾದವರಿಗೆ ಸ್ಥಾನ ನೀಡಿ ಅವರಿಗೆ ಪಬ್ಲಿಕ್ ಸರ್ವೆಂಟ್ ಸ್ಥಾನಮಾನ ನೀಡಬೇಕು. ಇದರಿಂದ ಹಿಂದು ದೇವಾಲಯಗಳು ಭಕ್ತರ ಆಶಯದಂತೆ ಅಭಿವೃದ್ಧಿ ಹಾಗೂ ಜೀರ್ಣೋದ್ಧಾರ ಕಾರ್ಯಗಳನ್ನು ಸುಲಭವಾಗಿ ಕೈಗೆತ್ತಿಕೊಳ್ಳಬಹುದಾಗಿದೆ. ಹಿಂದುಗಳ ಈ ಮನವಿಯನ್ನು ಎಲ್ಲ ಸರ್ಕಾರಗಳು ಮಾನ್ಯ ಮಾಡಬೇಕು ಎಂದು ಅವರು ಆಗ್ರಹಿಸಿದರು.
ದೇವಾಲಯಗಳ ಸರಕಾರಿಕರಣ ಕೈಬಿಡಿ:
ಹಿಂದು ಜನಜಾಗೃತಿ ಸಮಿತಿ ರಾಷ್ಟ್ರೀಯ ವಕ್ತಾರ ರಮೇಶ ಶಿಂದೆ ಮಾತನಾಡಿ, ಸನಾತನ ಧರ್ಮದ ವಿರುದ್ಧ ಹಿಂದಿನಿಂದ ನಡೆದು ಬರುತ್ತಿರುವ ಆಘಾತಗಳ ಸರಣಿ ಇಂದಿಗೂ ಮುಂದುವರೆದಿದೆ. ದೇವಸ್ಥಾನಗಳು ಕೇವಲ ಧಾರ್ಮಿಕ ಕೇಂದ್ರವಾಗಿರದೆ ಶಾಲೆ, ಆಸ್ಪತ್ರೆಯಂತಹ ಸೇವಾ ಚಟುವಟಿಕೆಯನ್ನೂ ನಡೆಸುತ್ತಿವೆ. ಮೊಘಲ್ ಆಕ್ರಮಣಕಾರರು ದೇವಾಲಯಗಳ ಸಂಪತ್ತನ್ನು ನಾಶಪಡಿಸಿ ಲೂಟಿ ಮಾಡಿದರು. ದೇಗುಲಗಳು ಶ್ರೀಮಂತವಾಗಿ ಉಳಿದರೆ ಜ್ಞಾನದ ಸಂಪತ್ತು ಮುಂದುವರಿದು ಮಿಷನರಿಗಳ ಕಾನ್ವೆಂಟ್ ಶಾಲೆಗಳಿಗೆ ಹಿನ್ನಡೆ, ಹಿಂದೂಗಳನ್ನು ಮತಾಂತರಿಸಲು ಸಾಧ್ಯವಾಗದ ಸ್ಥಿತಿ ಬರಬಹುದು ಎಂಬ ಕಾರಣದಿಂದ ಬ್ರಿಟಿಷರು ದೇವಸ್ಥಾನಗಳ ಹಣದ ಮೇಲೆ ಹಿಡಿತ ಸಾಧಿಸಲು ಅವುಗಳನ್ನು ಸರಕಾರೀಕರಣಗೊಳಿಸಿದರು. ಭಾರತ ಸ್ವತಂತ್ರವಾದರೂ ದೇವಸ್ಥಾನಗಳು ಮಾತ್ರ ಸ್ವತಂತ್ರವಾಗಲೇ ಇಲ್ಲ ಎಂದು ಆಕ್ಷೇಪಿಸಿದ್ದಾರೆ.
ಪ್ರಸ್ತುತ ಸರ್ವೋಚ್ಚ ನ್ಯಾಯಾಲಯದ ಆದೇಶಕ್ಕೆ ವಿರುದ್ಧವಾಗಿ ಸರ್ಕಾರ ಲಕ್ಷಾಂತರ ಸಂಖ್ಯೆಯ ದೇಗುಲಗಳನ್ನು ತನ್ನ ಹಿಡಿತಕ್ಕೆ ತೆಗೆದುಕೊಂಡಿದೆ. ಒಂದೆಡೆ ಸರಕಾರ ಕೈಗಾರಿಕೆಗಳನ್ನು ಖಾಸಗೀಕರಣಗೊಳಿಸಿದಂತೆ ಹಿಂದೂ ದೇವಾಲಯಗಳನ್ನೂ ಸರಕಾರಿಕರಣ ಮಾಡುವ ಹುನ್ನಾರವನ್ನು ಕೈಬಿಡಬೇಕು ಎಂದು ರಮೇಶ ಶಿಂದೆ ಮನವಿ ಮಾಡಿದ್ದಾರೆ.