

ಚಿನ್ನದ ದರದ ನಾಗಾಲೋಟ ಮಾರುಕಟ್ಟೆ ವಿಶ್ಲೇಷಕರನ್ನೂ ಅಚ್ಚರಿಗೆ ತಳ್ಳಿದೆ. 2025ರ ಆರಂಭದಲ್ಲಿ 79,300ರ ಆಸುಪಾಸಿನಲ್ಲಿ ಇದ್ದ 10 ಗ್ರಾಂ ಚಿನ್ನದ ದರ 100 ದಿನಗಳ ಅಲ್ಪಾವಧಿಯಲ್ಲೇ 90 ಸಾವಿರದ ಗಡಿಯನ್ನು ದಾಟಿದೆ. ಅಂದರೆ, ಮೂರೇ ತಿಂಗಳ ಅವಧಿಯಲ್ಲಿ ಚಿನ್ನ ಶೇಕಡ 14.31ರಷ್ಟು ಹೆಚ್ಚಳ ದಾಖಲಿಸಿದೆ. ಬೆಂಗಳೂರಿನಲ್ಲಿ ಈಗಾಗಲೇ 10 ಗ್ರಾಂ ಸ್ಟಾಂಡರ್ಡ್ ಚಿನ್ನದ ದರ 92 ಸಾವಿರ ರೂ.ಗೆ ತಲುಪಿದೆ.
ಬೆಳ್ಳಿಯ ದರ ಕೆ.ಜಿಗೆ ಕಳೆದ ವಾರವೇ 1 ಲಕ್ಷ ರೂ. ದಾಟಿದ್ದು, ಪ್ರಸ್ತುತ 1,02,500 ರೂ.ಗೆ ತಲುಪಿದೆ. ಅಲ್ಲದೆ, ಏರಿಕೆಯ ಈ ಗ್ರಾಫ್ ಇಲ್ಲಿಗೆ ನಿಲ್ಲುವುದಿಲ್ಲ. ಮೂರು ತಿಂಗಳಲ್ಲಿ ಶೇ.14ಕ್ಕೂ ಅಧಿಕ ಜಿಗಿತ ಕಂಡಿರುವ ಚಿನ್ನದ ಬೆಲೆ, ಇನ್ನಷ್ಟು ಹೆಚ್ಚಾಗಲಿದೆ. ಅಂದರೆ, 2025ರ ವರ್ಷಾಂತ್ಯದಲ್ಲೇ 10 ಗ್ರಾಂ ಬಂಗಾರ ಖರೀದಿಸಲು 1 ಲಕ್ಷ ರೂ. ಪಾವತಿಸುವ ಸನ್ನಿವೇಶ ಸೃಷ್ಟಿಯಾಗಬಹುದು ಎನ್ನುತ್ತಾರೆ ಮಾರುಕಟ್ಟೆ ತಜ್ಞರು. ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ದೇಶದಲ್ಲಿ ಲಕ್ಷಾಂತರ ಮದುವೆಗಳು ನಡೆಯಲಿದ್ದು, ಚಿನ್ನ ಖರೀದಿ ಪ್ರಮಾಣ ಹೆಚ್ಚಲಿದೆ. ಅಕ್ಟೋಬರ್-ನವೆಂಬರ್ನಲ್ಲಿ ದಸರಾ ಮತ್ತು ದೀಪಾವಳಿ ಹಬ್ಬದ ಋತುವಿನಲ್ಲೇ ಚಿನ್ನದ ದರ 1 ಲಕ್ಷ ರೂ.ಗೆ ಏರಿದರೆ ಆಶ್ಚರ್ಯ ಪಡಬೇಕಿಲ್ಲ ಎಂಬುದು ವಿಶ್ಲೇಷಕರ ಅಭಿಪ್ರಾಯ. ದೇಶೀಯ ಆಭರಣ ತಯಾರಕರಿಂದ ಮತ್ತು ಗ್ರಾಹಕರಿಂದ ಖರೀದಿ ಪ್ರಮಾಣ ಹೆಚ್ಚಾಗಿದ್ದರಿಂದ ನವದೆಹಲಿ, ಮುಂಬೈ ಚಿನಿವಾರ ಪೇಟೆಯಲ್ಲಿ ಚಿನ್ನದ ಧಾರಣೆ ಏರಿಕೆ ಯಾಗುತ್ತಲೇ ಇದೆ.
ಷೇರುಪೇಟೆಯಲ್ಲಿ ಏರಿಳಿತ ಮುಂದುವರಿದಿರುವಂತೆಯೇ ಹೂಡಿಕೆಗಾಗಿ ಬಹುತೇಕರ ಗಮನ ಬಂಗಾರದ ಮೇಲಿದೆ. ಚಿನ್ನಾಭರಣ ಖರೀದಿ ಒಂದೆಡೆಯಾದರೆ, ಚಿನ್ನದ ಗಟ್ಟಿ ಖರೀದಿ ಮಾಡಿಟ್ಟು ಕೊಳ್ಳವವರು ಇನ್ನೊಂದಿಷ್ಟು ಜನ. ಈ ನಡುವೆ ಬಂಗಾರದ ಬೆಲೆ ಗಗನಮುಖಿಯಾಗಿದ್ದು, ಇದು ಮುಂದಿನ ದಿನಗಳಲ್ಲಿ ಮತ್ತಷ್ಟು ಹೆಚ್ಚಲಿದೆ ಎನ್ನುತ್ತಾರೆ ಮಾರುಕಟ್ಟೆ ತಜ್ಞರು. ಭಾರತದ ಮಟ್ಟಿಗೆ ಹೇಳುವುದಾದರೆ ದೇಶದ ಒಟ್ಟಾರೆ ಚಿನ್ನದ ಬೇಡಿಕೆಯಲ್ಲಿ ಶೇಕಡ 60ರಷ್ಟು ಬೇಡಿಕೆ ಗ್ರಾಮೀಣ ಪ್ರದೇಶದಿಂದ ಬರುತ್ತದೆ. ಕಳೆದ ಎರಡು ದಶಕಗಳಲ್ಲಿ ಗ್ರಾಮೀಣ ಜನರ ಆದಾಯ ಮತ್ತು ಅವರು ಮಾಡುವ ವೆಚ್ಚದಲ್ಲಿ ಏರಿಕೆಯಾಗಿದೆ. ಇದರಿಂದ ಅವರು ಹೆಚ್ಚು ಹೆಚ್ಚು ಚಿನ್ನ ಖರೀದಿಗೆ ಮುಂದಾಗುತ್ತಿದ್ದಾರೆ. ಇನ್ನು, ಮೇಲ್ಮಧ್ಯಮ ವರ್ಗದವರು ಸುರಕ್ಷಿತ ಹೂಡಿಕೆ ಎಂದು ಚಿನ್ನದ ಕಡೆ ಮುಖ ಮಾಡಿದ್ದಾರೆ.
ದೇಶಕ್ಕೆ ಸ್ವಾತಂತ್ರ್ಯ ಬಂದಾಗ ಅಂದರೆ 1947ರಲ್ಲಿ 24 ಕ್ಯಾರೆಟ್ನ 10 ಗ್ರಾಂ ಚಿನ್ನದ ಬೆಲೆ ಬರೀ 32 ರೂ. ಇತ್ತು. 1964ರಲ್ಲಿ 63 ರೂ., 1974ರಲ್ಲಿ 506 ರೂ., 1984ರಲ್ಲಿ 1,970 ರೂ., 1990-3,200 ರೂ. ಇತ್ತು.
2023ರ ಉದಾಹರಣೆಯನ್ನೇ ತೆಗೆದುಕೊಂಡರೆ ಚಿನ್ನದ ಬೆಲೆ ಒಂದೇ ವರ್ಷದಲ್ಲಿ 10 ಗ್ರಾಂಗೆ 8 ಸಾವಿರಕ್ಕಿಂತ ಅಧಿಕ ಹೆಚ್ಚಳ ಕಂಡಿತ್ತು. 2023ರ ಜನವರಿಯಲ್ಲಿ 54,867 ರೂ. ಇದ್ದ ದರ 2023ರ ಡಿಸೆಂಬರ್ನಲ್ಲಿ 63,246 ರೂ.ಗೆ ತಲುಪಿತು. ಅಂದರೆ, 8,379 (ಶೇಕಡ 16) ರೂ.ಗಳಷ್ಟು ಹೆಚ್ಚಳ ಕಂಡುಬಂತು. 2023ರ ಜನವರಿಯಲ್ಲಿ 1 ಕೆಜಿ ಬೆಳ್ಳಿಯ ಬೆಲೆ 68,092 ರೂ. ಇದ್ದದ್ದು 2023ರ ಡಿಸೆಂಬರ್ನಲ್ಲಿ 73,395 ರೂ.ಗೆ ತಲುಪಿ, 5,303 ರೂ.ಗಳ ಏರಿಕೆ ದಾಖಲಿಸಿತು. 2024ರಲ್ಲಿ ಶೇಕಡ 27ರಷ್ಟು ಹಾಗೂ 2025ರ ಆರಂಭದ ಮೂರು ತಿಂಗಳಲ್ಲೇ ಶೇ.14ರಷ್ಟು ಏರಿಕೆ ಕಂಡಿದೆ.