ರಾಜ್ಯ ಸರ್ಕಾರದ ಬಹುಚರ್ಚಿತ ಜಾತಿ ಗಣತಿ (ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ) ವರದಿಯನ್ನು ಮುಂಬರುವ ವಿಧಾನ ಮಂಡಲ ಅಧಿವೇಶನದಲ್ಲಿ ಮಂಡಿಸಿ, ವಿಸ್ತೃತ ಚರ್ಚೆಗೆ ಒಳಪಡಿಸಬೇಕು ಎಂದು ಬಿಜೆಪಿ ವಿಧಾನ ಪರಿಷತ್ ಸದಸ್ಯರಾದ ಕೇಶವ ಪ್ರಸಾದ್ ಹಾಗೂ ಕಿಶೋರ್ ಕುಮಾರ್ ಪುತ್ತೂರು ಆಗ್ರಹಿಸಿದ್ದಾರೆ.
ಮಂಗಳೂರು: ರಾಜ್ಯ ಸರ್ಕಾರದ ಬಹುಚರ್ಚಿತ ಜಾತಿ ಗಣತಿ (ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ) ವರದಿಯನ್ನು ಮುಂಬರುವ ವಿಧಾನ ಮಂಡಲ ಅಧಿವೇಶನದಲ್ಲಿ ಮಂಡಿಸಿ, ವಿಸ್ತೃತ ಚರ್ಚೆಗೆ ಒಳಪಡಿಸಬೇಕು ಎಂದು ಬಿಜೆಪಿ ವಿಧಾನ ಪರಿಷತ್ ಸದಸ್ಯರಾದ ಕೇಶವ ಪ್ರಸಾದ್ ಹಾಗೂ ಕಿಶೋರ್ ಕುಮಾರ್ ಪುತ್ತೂರು ಆಗ್ರಹಿಸಿದ್ದಾರೆ.
ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಂ.ಎಲ್.ಸಿ ಕೇಶವ ಪ್ರಸಾದ್, ಕಾಂಗ್ರೆಸ್ ಪಕ್ಷಕ್ಕೆ ಹಿಂದುಳಿದ ವರ್ಗಗಳ ಬಗ್ಗೆ ಎಂದಿಗೂ ನೈಜ ಕಾಳಜಿ ಇರಲಿಲ್ಲ. ಹಿಂದೆ ಕಾಕಾ ಕಾಲೇಲ್ಕರ್ ಮತ್ತು ಮಂಡಲ್ ಆಯೋಗದ ವರದಿಗಳನ್ನು ಜಾರಿಗೆ ತರುವಲ್ಲಿ ಕಾಂಗ್ರೆಸ್ ವಿಫಲವಾಗಿತ್ತು. ಡಿ. ದೇವರಾಜ ಅರಸು ಅವರು ಹಾವನೂರು ವರದಿ ಜಾರಿಗೊಳಿಸಿದಂತೆ ಸಿದ್ದರಾಮಯ್ಯ ಅವರಿಗೆ ಯಾಕೆ ಸಾಧ್ಯವಾಗುತ್ತಿಲ್ಲ?. ರೂ.165 ಕೋಟಿಗೂ ಅಧಿಕ ಸಾರ್ವಜನಿಕ ಹಣ ವ್ಯಯಿಸಿ ಸಿದ್ಧಪಡಿಸಿದ ಈ ವರದಿಯ ದತ್ತಾಂಶಗಳು ಹಳೆಯದಾಗಿವೆ ಎಂದು ಸ್ವತಃ ಆಯೋಗದ ಅಧ್ಯಕ್ಷರೇ ಒಪ್ಪಿಕೊಂಡಿದ್ದಾರೆ. 10 ವರ್ಷಗಳಷ್ಟು ಹಳೆಯ ದತ್ತಾಂಶಗಳಿಂದ ಹಿಂದುಳಿದ ವರ್ಗಗಳಿಗೆ ನ್ಯಾಯ ಸಿಗಲು ಸಾಧ್ಯವೇ? ಎಂದರು.
ಎಂ.ಎಲ್.ಸಿ ಕಿಶೋರ್ ಕುಮಾರ್ ಪುತ್ತೂರು ಮಾತನಾಡಿ, ರಾಜ್ಯ ಸರ್ಕಾರವು ಇದನ್ನು ಕೇವಲ ಜಾತಿಯ ಸಮೀಕ್ಷೆ ಎನ್ನದೆ, ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಾಗಿ ಪರಿಗಣಿಸಬೇಕು. ಸಿಎಂ ಸಿದ್ದರಾಮಯ್ಯ ಅವರಿಗೆ ನಿಜಕ್ಕೂ ಕಾಳಜಿ ಇದ್ದರೆ, ಮುಂಬರುವ ಅಧಿವೇಶನದಲ್ಲಿ ಕನಿಷ್ಠ 2 ರಿಂದ 3 ದಿನಗಳ ಕಾಲ ಈ ವರದಿಯ ಬಗ್ಗೆ ಸುದೀರ್ಘ ಚರ್ಚೆಗೆ ಅವಕಾಶ ಮಾಡಿಕೊಡಬೇಕು. ಕೇವಲ ವೋಟ್ ಬ್ಯಾಂಕ್ ರಾಜಕಾರಣಕ್ಕಾಗಿ ಸಾರ್ವಜನಿಕ ವೇದಿಕೆಗಳಲ್ಲಿ ಆರ್ಭಟಿಸುವುದನ್ನು ಬಿಟ್ಟು, ಹಿಂದುಳಿದ ವರ್ಗಗಳ ನೈಜ ಸುಧಾರಣೆಗೆ ಸರ್ಕಾರ ಮುಂದಾಗಬೇಕು ಎಂದರು.
ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಅಧ್ಯಕ್ಷ ಸತೀಶ್ ಕುಂಪಲ, ಒಬಿಸಿ ಮೋರ್ಚಾದ ಪ್ರಮುಖರಾದ ಆರ್.ಸಿ. ನಾರಾಯಣ್, ಮಹೇಶ್ ಜೋಗಿ, ಶಶಿಧರ ಕಲ್ಮಂಜ, ಮೋನಪ್ಪ ದೇವಸ್ಯ, ನಿತೀನ್ ಕುಮಾರ್, ರವಿಶಂಕರ್ ಮಿಜಾರ್ ಹಾಗೂ ಜಿಲ್ಲಾ ಮಾಧ್ಯಮ ಪ್ರಮುಖ್ ವಸಂತ್ ಪೂಜಾರಿ ಉಪಸ್ಥಿತರಿದ್ದರು.