

ರಿಪ್ಪನ್‌ಪೇಟೆ: ಡೇರಿಗೆ ಹಾಲು ಹಾಕಲು ಹೋಗಿಬರುತ್ತಿದ್ದ ಮತ್ತಲಿಜೆಡ್ಡಿನ ರೈತ ದೇವೇಂದ್ರಪ್ಪ ರಸ್ತೆ ಅವ್ಯವಸ್ಥೆಯಿಂದ ಬೈಕ್ ಸಹಿತ ಕಂದಕಕ್ಕೆ ಉರುಳಿಬಿದ್ದು ಮೃತಪಟ್ಟಿರುವುದಕ್ಕೆ ರಾಜ್ಯ ಸರ್ಕಾರ ಹಾಗೂ ಅರಣ್ಯ ಇಲಾಖೆ ಕಾರಣ. ಅವರ ಕುಟುಂಬಕ್ಕೆ ಸರ್ಕಾರ ಸೂಕ್ತ ಪರಿಹಾರ ನೀಡಬೇಕು ಹಾಗೂ ಸಂಚಾರಕ್ಕೆ ರಸ್ತೆ ನಿರ್ಮಿಸಬೇಕೆಂದು ಮಾಜಿ ಸಚಿವ ಹರತಾಳು ಹಾಲಪ್ಪ ಆಗ್ರಹಿಸಿದರು.
ಅಡ್ಡೇರಿ-ಮತಲಿಜೆಡ್ಡು ಮಾರ್ಗದಲ್ಲಿ ರೈತ ಮೃತಪಟ್ಟ ಸ್ಥಳಕ್ಕೆ ಭೇಟಿ ನೀಡಿ ಮಾತನಾಡಿದ ಅವರು, ಮಳೆಗಾಲದಲ್ಲಿ ನೀರಿನ ಹರಿವಿನಿಂದ ಗುಂಡಿಗಳಾಗುವುದು ಸಹಜ. ಕೂಡಲೇ ಮಾಡಿಸುವುದು ಜನಪ್ರತಿನಿಧಿಗಳ ಜವಾಬ್ದಾರಿ ಎಂದರು.
ವಿದ್ಯಾರ್ಥಿಗಳು, ಸಾರ್ವಜನಿಕರು ನಿತ್ಯ ಇದೇ ರಸ್ತೆಯನ್ನು ಬಳಸುತ್ತಿದ್ದರೂ ದುರಸ್ತಿಗೆ ನಿರ್ಲಕ್ಷೃ ತೋರಲಾಗಿದೆ. ಎರಡು ಮಳೆಗಾಲ ಕಳೆದರೂ ದುರಸ್ತಿ ಮಾಡದೇ ಇದ್ದುದ್ದರಿಂದ ಅವಘಡ ಸಂಭವಿಸಿದೆ. ಮೃತಪಟ್ಟಾಗ ಜನ ಸಿಟ್ಟಿಗೇಳುವುದು ಸಹಜ. ಹಾಗಾಗಿ ರಸ್ತೆ ನಿರ್ಮಾಣಕ್ಕೆ ಅಡಚಣೆಯಾಗಿದ್ದ ಮೂರ‌್ನಾಲ್ಕು ಮರಗಳನ್ನು ಕಡಿದಿದ್ದಾರೆ. ಆದರೆ ಮರಗಳನ್ನು ಕಡಿದಿರುವುದಕ್ಕೆ ಅರಣ್ಯ ಇಲಾಖೆ ಪ್ರಕರಣ ದಾಖಲಿಸಿರುವುದು ಖಂಡನೀಯ. ಕೂಡಲೇ ರೈತರ ಮೇಲೆ ದಾಖಲಿಸಿರುವ ಪ್ರಕರಣ ಹಿಂಪಡೆದು ರೈತನ ಕುಟುಂಬಕ್ಕೆ ಪರಿಹಾರ ನೀಡಿ. ಇಲ್ಲವಾದಲ್ಲಿ ಹೋರಾಟ ನಡೆಸುವುದು ಅನಿವಾರ್ಯ ಎಂದು ಎಚ್ಚರಿಸಿದರು.
ತಾಪಂ ಮಾಜಿ ಅಧ್ಯಕ್ಷ ವೀರೇಶ ಆಲುವಳ್ಳಿ, ಮುಖಂಡರಾದ ಎನ್.ಸತೀಶ್, ಅರುಣ್, ಉಮೇಶ, ಗಂಗಾಧರ, ರಾಜೇಶ್ ಜೈನ್, ಎ.ಟಿ.ನಾಗರತ್ನಮ್ಮ, ರಾಮು, ಉಮೇಶ ಮಳಿಮಠ್ ಇತರರಿದ್ದರು.