

ಸೊರಬ: ಪಟ್ಟಣದ ನರ್ಸಿಂಗ್ ಕಾಲೇಜು, ಅರೆವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಪ್ರಾಚಾರ್ಯ ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ಕಿರುಕುಳ ಕೊಟ್ಟಿದ್ದಾರೆ. ಆರೋಪಿ ವಿರುದ್ಧ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿ ವಿದ್ಯಾರ್ಥಿನಿಯರು ಕಾಲೇಜು ಬಳಿ ಶುಕ್ರವಾರ ಪ್ರತಿಭಟನೆ ನಡೆಸಿ, ಸಚಿವ ಮಧು ಬಂಗಾರಪ್ಪ ಅವರಿಗೆ ಮನವಿ ಸಲ್ಲಿಸಿದರು.
ಮನವಿಗೆ ಸ್ಪಂದಿಸಿದ ಸಚಿವರು ಹಿರಿಯ ಪೊಲೀಸ್ ಅಧಿಕಾರಿಗಳಿಗೆ ದೂರವಾಣಿ ಮೂಲಕ ಮಾತನಾಡಿ, ತಕ್ಷಣ ಸ್ಥಳಕ್ಕೆ ಭೇಟಿನೀಡಿ ತನಿಖೆ ನಡೆಸಿ ಕಾನೂನು ಕ್ರಮ ಕೈಗೊಳ್ಳುವಂತೆ ಸೂಚಿಸಿದರು.
ಪ್ರಾಚಾರ್ಯ ವಿದ್ಯಾರ್ಥಿನಿಯರ ಬಳಿ ಅಸಭ್ಯವಾಗಿ ನಡೆದುಕೊಳ್ಳುವುದಲ್ಲದೆ ಬಯ್ಯುವುದು, ಲೈಂಗಿಕ ಕಿರುಕುಳ ನೀಡುತ್ತಾರೆ. ಕಾಲೇಜಿನ ವಿದ್ಯಾರ್ಥಿನಿ ಒಬ್ಬಳನ್ನು ಸಲುಗೆಯಿಂದ ನಡೆದುಕೊಳ್ಳುವಂತೆ ಒತ್ತಾಯಿಸಿದ್ದಾರೆ. ಈ ಬಗ್ಗೆ ವಿದ್ಯಾರ್ಥಿನಿ ಇತರ ವಿದ್ಯಾರ್ಥಿಗಳ ಬಳಿ ಹೇಳಿಕೊಂಡಿದ್ದಳು. ವಿದ್ಯಾರ್ಥಿಗಳ ದಾಖಲೆ ನೀಡಲು ವಿನಾಕಾರಣ ಅಲೆದಾಡಿಸುತ್ತಾರೆ ಎಂದು ಆರೋಪಿಸಿದರು.
ಇತ್ತೀಚೆಗೆ ಕಾಲೇಜಿನ ಸಾಂಸ್ಕೃತಿಕ ಕಾರ್ಯಕ್ರಮದಲ್ಲೂ ನುಚಿತವಾಗಿ ವರ್ತಿಸಿದ್ದಾರೆ. ಈ ಬಗ್ಗೆ ಅವರ ಮೇಲೆ ದೂರು ದಾಖಲಾಗಿತ್ತು. ತಿದ್ದಿಕೊಳ್ಳುವಂತೆ ಪೊಲೀಸರು ತಿಳಿಸಿದರೂ ಮತ್ತೆ ವಿದ್ಯಾರ್ಥಿಗಳ ಮೇಲೆ ದಬ್ಬಾಳಿಕೆ ನಡೆಸುತ್ತಿದ್ದಾರೆ ಎಂದು ಆರೋಪಿಸಿದರು.
ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕಾರಿಯಪ್ಪ, ಡಿವೈಎಸ್ಪಿ ಕೇಶವ್, ಸಿಪಿಐ ಎಲ್.ರಾಜಶೇಖರ್, ಪಿಎಸ್‌ಐ ನಾಗರಾಜ್ ಇದ್ದರು.