ರಫೇಲ್ ಸಮರ ಪಡೆ ರೆಡಿ; 6 ವರ್ಷಗಳಲ್ಲಿ ಎಲ್ಲ 36 ಯುದ್ಧ ವಿಮಾನ ಹಸ್ತಾಂತರ

raffel
Published on

ನವದೆಹಲಿ: ಫ್ರಾನ್ಸ್​ನಿಂದ 36 ರಫೇಲ್ ಯುದ್ಧ ವಿಮಾನಗಳ ಪೈಕಿ ಕೊನೆಯ ವಿಮಾನ ಭಾರತಕ್ಕೆ ಗುರುವಾರ ಬಂದಿಳಿಯಿತು. ಈಗಾಗಲೇ ಭಾರತದ ವಾಯುಪಡೆಯ (ಐಎಎಫ್)ಬತ್ತಳಿಕೆಯಲ್ಲಿ 35 ರಫೇಲ್ ಯುದ್ಧ ವಿಮಾನಗಳಿವೆ. ಭಾರತದ ಒಟ್ಟಾರೆ ಸೈನ್ಯ ಸಾಮರ್ಥ್ಯ ಹೆಚ್ಚಳ ಹಾಗೂ ಚೀನಾ ಗಡಿ ತಗಾದೆ ಹಿನ್ನೆಲೆಯಲ್ಲಿ ರಫೇಲ್ ಸೇರ್ಪಡೆ ಮಹತ್ವ ಪಡೆದಿದೆ.

ಭಾರತಕ್ಕೆ ತಲು ಪಲು ಟೇಕಾಫ್ ಆದ ನಂತರ ರಫೇಲ್ ಯುಎಇ ವಾಯುಪಡೆಯ ಟ್ಯಾಂಕರ್ ವಿಮಾನ ದಿಂದ ತ್ವರಿತವಾಗಿ ವಾಯುಮಾರ್ಗದಲ್ಲಿ ಇಂಧನ ತುಂಬಿಸಿಕೊಂಡು 36ನೇ ವಿಮಾನ ಭಾರತಕ್ಕೆ ಆಗಮಿಸಿತು ಎಂದು ಭಾರತೀಯ ವಾಯುಪಡೆ ಮಾಹಿತಿ ನೀಡಿದೆ. 2016 ಸೆಪ್ಟೆಂಬರ್ 23ರಂದು ಭಾರತ ಮತ್ತು ಫ್ರಾನ್ಸ್ ನಡುವೆ 36 ರಫೇಲ್ ಯುದ್ಧ ವಿಮಾನಗಳನ್ನು ಖರೀದಿಸುವ ಒಪ್ಪಂದವಾಗಿತ್ತು.

ಫ್ರಾನ್ಸ್​ನ ಡಸಾಲ್ಟ್ ಏವಿಯೇಷನ್ ಕಂಪನಿಯು 59 ಸಾವಿರ ಕೋಟಿ ರೂ.ಗಳಿಗೆ ವಿಮಾನಗಳನ್ನು ಭಾರತಕ್ಕೆ ಪೂರೈಕೆ ಮಾಡಿದೆ. ಜಂಟಿ ಸಮರಾಭ್ಯಾಸ ಅರುಣಾಚಲ ಪ್ರದೇಶದಲ್ಲಿ ಚೀನಾ ಜತೆಗಿನ ಸಂಘರ್ಷದ ನಡುವೆಯೇ ಕೊನೆಯ ರಫೇಲ್ ಯುದ್ಧ ವಿಮಾನವನ್ನು ತನ್ನ ತೆಕ್ಕೆಗೆ ತೆಗೆದು ಕೊಂಡಿರುವ ಭಾರತೀಯ ವಾಯುಪಡೆ ಎರಡು ದಿನಗಳ ಜಂಟಿ ಸಮರಾಭ್ಯಾಸವನ್ನು ಗುರುವಾರ ಆರಂಭಿಸಿತು. ಈಶಾನ್ಯ ರಾಜ್ಯಗಳಲ್ಲಿ ಐಎಎಫ್​ನ ಮುಂಚೂಣಿ ಫೈಟರ್ ಜೆಟ್​ಗಳು ಸೇರಿ ಇತರೆ ಯುದ್ಧ ವಿಮಾನಗಳ ಸಮರಾಭ್ಯಾಸ ನಡೆಯಲಿದೆ.

ರಫೇಲ್ ಯುದ್ಧ ವಿಮಾನ ಸಾಮರ್ಥ್ಯ

  • ಆಗಸ, ನೌಕಾನೆಲೆ ಎರಡರಿಂದಲೂ ಕಾರ್ಯಾಚರಣೆ ನಡೆಸುವ ಸಾಮರ್ಥ್ಯ, ಅಣ್ವಸ್ತ್ರ ಸಿಡಿತಲೆ ಕ್ಷಿಪಣಿಯನ್ನು ಉಡ್ಡಯನ ಮಾಡುವ ಶಕ್ತಿ.
  • ಹವಾಮಾನ ವೈಪರೀತ್ಯಗಳ ನಡುವೆ ಏಕಕಾಲದಲ್ಲಿ ನಾನಾ ಗುರಿಗಳನ್ನು ಗುರುತಿಸುವ ಕ್ಷಮತೆ
  • ರಾಡಾರ್ ವಾರ್ನಿಂಗ್ ರಿಸೀವರ್, ಹತ್ತು ತಾಸುಗಳ ಕಾಲ ಫ್ಲೈಟ್ ಡೇಟಾ ರೆಕಾರ್ಡಿಂಗ್, ಇನ್​ಫ್ರಾರೆಡ್ ಸರ್ಚ್ ಮತ್ತು ಟ್ರ್ಯಾಕಿಂಗ್ ವ್ಯವಸ್ಥೆ ಹೊಂದಿದೆ. 50 ಸಾವಿರ ಅಡಿ ಎತ್ತರದವರೆಗೆ ಹಾರಾಟ ನಡೆಸುವ ಸಾಮರ್ಥ್ಯ.
  • ಲೇಸರ್ ವಾರ್ನಿಂಗ್, ರೇಡಾರ್ ಜಾಮರ್ ಹಾಗೂ 1,800 ಕಿ.ಮೀ. ದೂರದವರೆಗೆ ವೈರಿಪಡೆಯನ್ನು ಗ್ರಹಿಸಲು ಶಕ್ತವಾಗಿದೆ.
  • 9.5 ಟನ್ ತೂಕದ ಶಸ್ತ್ರಾಸ್ತ್ರ ಹೊತ್ತೊಯ್ಯಬಲ್ಲದು.
  • ಗಂಟೆಗೆ 2,222 ಕಿ.ಮೀ ವೇಗದಲ್ಲಿ ಹಾರಾಟ ನಡೆಸಬಲ್ಲದು. ಆಗಸದಲ್ಲೇ ಇಂಧನ ತುಂಬಿಸಿಕೊಳ್ಳುವ ಶಕ್ತಿ, ಏಕಕಾಲದಲ್ಲಿ ಶೇ.75ರಷ್ಟು ವಿಮಾನಗಳು ದಾಳಿಗೆ ಸಜ್ಜು.
  • ಆಗಸದಲ್ಲಿ ಹಾರಾಡುತ್ತಲ್ಲೇ ತೀರಾ ಕೆಳಮಟ್ಟದವರೆಗೆ ನಿಖರವಾಗಿ ದಾಳಿ ಮಾಡಬಲ್ಲ ಹ್ಯಾಮರ್ ಕ್ಷಿಪಣಿ ಇದರಲ್ಲಿದೆ. 300 ಕಿ.ಮೀ. ದೂರದವರೆಗೆ ದಾಳಿ ನಡೆಸುವ ಸಾಮರ್ಥ್ಯ ಹೊಂದಿದೆ.
  • ಆಕ್ಸಿಜನ್ ಜನರೇಷನ್ ಸಿಸ್ಟಂ ಹೊಂದಿದ್ದು, ಯುದ್ಧ ವಿಮಾನಕ್ಕೆ ಬೇಕಾದ ದೃವೀಕೃತ ಆಮ್ಲಜನಕವನ್ನು ಹೊತ್ತೊಯ್ಯುವ ಅಗತ್ಯ ಇದಕ್ಕೆ ಇಲ್ಲ.
  • 100 ಕಿ.ಮೀ ದೂರದಲ್ಲಿರುವ ಶತ್ರುವಿನ ವಿಮಾನವನ್ನು ಹೊಡೆದುರುಳಿಸಬಲ್ಲುದು.
  • ಯುರೋಪ್​ನ ಕ್ಷಿಪಣಿ ತಯಾರಕ ಎಂಬಿಡಿಎನ್​ನ ಮೀಟಿಯಾರ್ ಬಿಯಾಂಡ್ ವಿಷ್ಯುವಲ್ ರೇಂಜ್ ಏರ್ ಟು ಏರ್ ಮಿಸೈಲ್ ಸ್ಕಾಲ್ಪ್ ಕ್ರೂಸ್ ಮಿಸೈಲ್ ಮತ್ತು ಎಂಐಸಿಎ ಶಸ್ತ್ರಾಸ್ತ್ರ ವ್ಯವಸ್ಥೆ ಒಳಗೊಂಡಿದೆ.
  • ಹಡಗಿನ ಮೇಲೆ ಗುರಿ ಇಡುವ ಎಎಂ 30 ಎಕ್ಸೋಸೆಟ್ ಕೂಡ ಇದರಲ್ಲಿದೆ. ಲೇಸರ್ ಆಧಾರಿತ 2 ಸಾವಿರ ಕೆಜಿ ತೂಕದ ಬಾಂಬ್, 2,500 ರೌಂಡ್ ಗುಂಡು ಹಾರಿಸಬಲ್ಲ ಗನ್ (ನೆಕ್ಸಟೆರ್ 30ಎಂ791) ಅಳವಡಿಸಲಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net