ಈ ಸುಲಿಗೆಕೋರರಿಗೆ ಇವಿ ಸ್ಕೂಟರ್ ಬಳಸುವ ಡೆಲೆವರಿ ಬಾಯ್‌ಗಳೇ ಟಾರ್ಗೆಟ್..!

crime
Published on

ಬೆಂಗಳೂರು: ಎಲೆಕ್ಟ್ರಿಕಲ್ ದ್ವಿಚಕ್ರ ವಾಹನಗಳನ್ನು ಬಳಸುತ್ತಿದ್ದ ಡೆಲೆವರಿ ಬಾಯ್‌ಗಳನ್ನೇ ಟಾರ್ಗೆಟ್ ಮಾಡಿ ಸುಲಿಗೆ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಸುದ್ದಗುಂಟೆಪಾಳ್ಯ ಪೊಲೀಸರು ಬಂಧಿಸಿದ್ದಾರೆ.

ಓಡಿಶಾ ಮೂಲದ ದಿಲೀಪ್ ಮಲ್ಲಿಕ್, ರಾಕೇಶ್ ಪಾಸ್ವನ್ ಮತ್ತು ಅಸ್ಸಾಂ ಮೂಲದ ಟೋನಿ ಕುಮಾರ್ ಬಂಧಿತರು. ಆರೋಪಿಗಳಿಂದ 3.75 ಲಕ್ಷ ರೂ. ಬೆಲೆ ಬಾಳುವ 25 ಮೊಬೈಲ್‌ಗಳನ್ನು ಜಪ್ತಿ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಜುಲೈ 7ರ ರಾತ್ರಿ 12 ಗಂಟೆಯಲ್ಲಿ ಬಿಟಿಎಂ ಲೇಔಟ್ 1ನೇ ಹಂತದಲ್ಲಿ ಸ್ವಿಗ್ಗಿ ಡೆಲೆವರಿ ಬಾಯ್‌ನ್ನು ಅಡ್ಡಗಟ್ಟಿ ಮೊಬೈಲ್ ಸುಲಿಗೆ ಮಾಡಿದ್ದರು. ಪ್ರತಿರೋಧ ವ್ಯಕ್ತಪಡಿಸಿದಾಗ ಡೆಲೆವರಿ ಬಾಯ್ ಕೆಳಗೆ ಬಿದ್ದು ಕೈ ಮುರಿದುಕೊಂಡಿದ್ದ. ಈ ಬಗ್ಗೆ ಯುವಕ ಕೊಟ್ಟ ದೂರಿನ ಮೇರೆಗೆ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.

ಹೊರ ಜಿಲ್ಲೆ ಮತ್ತು ರಾಜ್ಯಗಳಿಂದ ಬಂದಿರುವ ಯುವಕರು ಎಲೆಕ್ಟ್ರಿಕಲ್ ದ್ವಿಚಕ್ರ ವಾಹನಗಳನ್ನು ಬಳಸಿಕೊಂಡು ಡೆಲೆವರಿ ಬಾಯ್ ಕೆಲಸ ಮಾಡುತ್ತಾರೆ. ಅವರನ್ನು ಸುಲಿಗೆ ಮಾಡಿದರೇ ಪೊಲೀಸರಿಗೆ ದೂರು ಕೊಡುವುದು ಕಡಿಮೆ ಎಂಬ ಉದ್ದೇಶಕ್ಕೆ ಇವಿ ಸ್ಕೂಟರ್ ಬಳಸುವ ಡೆಲೆವರಿ ಬಾಯ್‌ಗಳನ್ನು ಟಾರ್ಗೆಟ್ ಮಾಡಿದ್ದರು. ಇವರು ಸ್ಕೂಟರ್ ಮುಂಭಾಗ ಮೊಬೈಲ್‌ ಅಳವಡಿಸಿಕೊಂಡು ಗೂಗಲ್ ಮ್ಯಾಪ್ ನೋಡಿಕೊಂಡು ಹೋಗುತ್ತಿದ್ದಾಗ ಅಡ್ಡಗಟ್ಟಿ ಮೊಬೈಲ್ ಸುಲಿಗೆ ಮಾಡುತ್ತಿದ್ದರು.

ಮಾರಕಾಸಗಳಿಂದ ಬೆದರಿಸಿ ಸವಾರರ ಬಳಿ ಹಣ ಕಿತ್ತುಕೊಂಡು ಪರಾರಿ ಆಗುತ್ತಿದ್ದರು. ಕಳೆದ ಒಂದೂವರೆ ತಿಂಗಳಲ್ಲಿ 37 ಮೊಬೈಲ್‌ಗಳನ್ನು ಸುಲಿಗೆ ಮಾಡಿ ಮಾರಾಟ ಮಾಡಿದ್ದರು. ಆರೋಪಿತರಿಂದ 25 ಮೊಬೈಲ್‌ಗಳನ್ನು ಜಪ್ತಿ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net