

ಲಖನೌ: ಉತ್ತರ ಪ್ರದೇಶದ ರಾಜಧಾನಿ ಲಕ್ನೋದ ಚಿನ್‌ಹತ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಐಫೋನ್‌ಗಾಗಿ (IPhone) ಫ್ಲಿಪ್‌ಕಾರ್ಟ್ ಡೆಲಿವರಿ ಹುಡುಗನನ್ನು (Delivery Boy) ಬರ್ಬರವಾಗಿ ಕೊಲೆ ಮಾಡಿದ ಘಟನೆ ಇದೀಗ ಬೆಳಕಿಗೆ ಬಂದಿದ್ದು, ನಗರ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಎಂದಿನಂತೆ ಕೆಲಸ ನಿರ್ವಹಿಸುವ ಸಲುವಾಗಿ ಹೋದ ಹುಡುಗ ದಿನಕಳೆದರೂ ವಾಪಾಸ್ ಮನೆಗೆ ಹಿಂತಿರುಗದೆ ಇದ್ದದ್ದನ್ನು ಕಂಡು ಕುಟುಂಬಸ್ಥರು ನೀಡಿದ ದೂರಿನ ಬಳಿಕ ಈ ಘಟನೆಯ ಸಂಪೂರ್ಣ ವಿವರ ಹೊರಬಿದ್ದಿದೆ.
"ಫ್ಲಿಪ್ಕಾರ್ಟ್ನಲ್ಲಿ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದ ಭರತ್ ಕುಮಾರ್ ಮನೆಗೆ ಹಿಂತಿರುಗದಿದ್ದಾಗ, ಅವರ ಅಣ್ಣ ಚಿನ್ಹಾಟ್ ಪೊಲೀಸ್ ಠಾಣೆಯಲ್ಲಿ ತಮ್ಮ ಸಹೋದರ ನಾಪತ್ತೆಯಾಗಿರುವುದಾಗಿ ಎಫ್ಐಆರ್ ದಾಖಲಿಸಿದರು. ಘಟನೆಯ ಕುರಿತು ಮಾಹಿತಿ ಪಡೆದ ನಮ್ಮ ಪೊಲೀಸರ ತಂಡ, ತನಿಖೆ ಚುರುಕುಗೊಳಿಸಿ, ಸ್ಥಳೀಯ ಸಿಸಿಟಿವಿ ದೃಶ್ಯಗಳು ಮತ್ತು ಪ್ರಾಥಮಿಕ ವರದಿಗಳನ್ನು ಸೂಕ್ಷ್ಮವಾಗಿ ಗಮನಿಸಿದ ನಂತರ ಈ ಘಟನೆ ಬೆಳಕಿಗೆ ಬಂದಿದೆ. ಸಾಕ್ಷ್ಯಾಧಾರಗಳನ್ನು ಪಡೆದ ನಂತರ ನಮ್ಮ ಪೊಲೀಸರು ಘಟನೆಗೆ ಸಂಬಂಧಿಸಿದಂತೆ ಆಕಾಶ್ ಎಂಬ ವ್ಯಕ್ತಿಯನ್ನು ಬಂಧಿಸಿದ್ದಾರೆ”ಎಂದು ಡಿಸಿಪಿ ಮಾಹಿತಿ ಹಂಚಿಕೊಂಡಿದ್ದಾರೆ.
ಬಂಧಿತ ಆರೋಪಿಯನ್ನು ವಿಚಾರಿಸಿದಾಗ ಆತ, ನಾನು ಮತ್ತು ನನ್ನ ಸ್ನೇಹಿತ ಗಜಾನನ ಡೆಲಿವರಿ ಬಾಯ್ ಆಗಿದ್ದ ಭರತ್ ಕುಮಾರ್ನನ್ನು ಐಫೋನ್‌ಗಾಗಿ ಕೊಲೆ ಮಾಡಿದೆವು. ಶವವನ್ನು ಗೋಣಿ ಚೀಲದಲ್ಲಿ ತುಂಬಿ ಕಾಲುವೆಗೆ ಎಸೆದು ಸ್ಥಳದಿಂದ ಪರಾರಿಯಾದೆವು ಎಂದು ತಪ್ಪೊಪ್ಪಿಕೊಂಡಿದ್ದಾನೆ. ಪೊಲೀಸರು ಮತ್ತು ಎಸ್‌ಡಿಆರ್‌ಎಫ್ ತಂಡವು ಕಾಲುವೆಯಿಂದ ಶವವನ್ನು ಪತ್ತೆಹಚ್ಚಲು ನಿರಂತರ ಕಾರ್ಯಾಚರಣೆ ನಡೆಸುತ್ತಿದ್ದು, ಭರತ್ ಕುಮಾರ್ ಕುಟುಂಬದವರಿಗೆ ಮುಂದಿನ ಕ್ರಮದ ಬಗ್ಗೆ ಮಾಹಿತಿ ನೀಡಲಾಗಿದೆ ಎಂದು ಹಿರಿಯ ಪೊಲೀಸರು ತಿಳಿಸಿದ್ದಾರೆ,(ಏಜೆನ್ಸೀಸ್).