

ದೆಹಲಿ: ಬಾಯ್ಫ್ರೆಂಡ್ ವಿರುದ್ಧ ಸೇಡು ತೀರಿಸಿಕೊಳ್ಳಲು 19 ವರ್ಷದ ಯುವತಿಯೊಬ್ಬಳು ನಕಲಿ ಇನ್ಸ್ಟಾಗ್ರಾಂ ಖಾತೆ ತೆರೆದು ಆತನ ಸಹೋದರಿ ಹಾಗೂ ಇತರ ಸಂಬಂಧಿಕರಿಗೆ ಆಶ್ಲೀಲ ಚಿತ್ರಗಳನ್ನು ಕಳುಹಿಸಿದ್ದಾಳೆ. ಇದೀಗ ಈಕೆಯನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ ಎಂದು ವರದಿಯಾಗಿದೆ.
ಯುವತಿ ದೂರವಾದ ಸ್ನೇಹಿತನ ವಿರುದ್ಧ ದ್ವೇಷ ಸಾಧಿಸಲು ಮುಂದಾಗಿದ್ದಾಳೆ. ಇದಕ್ಕಾಗಿ ನಕಲಿ ಇನ್ಸ್ಟಾಗ್ರಾಂ ಖಾತೆಯ ತೆರೆದು ಆತನ ಸಹೋದರಿ ಸೇರಿದಂತೆ ಕೆಲ ಸಂಬಂಧಿಕರಿಗೆ ಆಶ್ಲೀಲ ಚಿತ್ರಗಳು ಹಾಗೂ ಫೋಟೋಗಳನ್ನು ಕಳುಹಿಸುತ್ತಿದ್ದಳು. ಈ ಬಗ್ಗೆ ಯುವಕನ ಸಹೋದರಿ ಪೊಲೀಸ್ ದೂರು ನೀಡಿದ್ದಳು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆಗೆ ಇಳಿದಾಗ, 19 ವರ್ಷದ ಯುವತಿ ಈ ಕೃತ್ಯ ಎಸಗಿರುವುದು ಗೊತ್ತಾಗಿದೆ. ಕೂಡಲೇ ಆಕೆಯನ್ನು ಪೊಲೀಸರು ಬಂಧಿಸಿದ್ದಾರೆ.
ಸದ್ಯ ಯುವತಿಯನ್ನು ಹೆಚ್ಚಿನ ತನಿಖೆಗೆ ಒಳಪಡಿಸಿರುವ ಪೊಲೀಸರು, ಈ ಕೃತ್ಯ ಎಸಗಲು ಬಳಸಿದ್ದ ಮೊಬೈಲ್ ಫೋನ್ ಹಾಗೂ ಸಿಮ್ ಕಾರ್ಡ್ಗಳನ್ನು ವಶ ಪಡಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ.
ಘಟನೆಯ ಬಗ್ಗೆ ಉತ್ತರ ದೆಹಲಿ ಉಪ ಪೊಲೀಸ್ ಆಯುಕ್ತ ಸಾಗರ್ ಸಿಂಗ್ ಕಲ್ಸಿ ಪ್ರತಿಕ್ರಿಯಿಸಿ, ಯುವತಿ ಮತ್ತು ಯುವಕ ನಗ್ನವಾಗಿ ಇರುವಂತೆ ಫೋಟೋಗಳನ್ನು ರಚಿಸಿಕೊಂಡು ಆತನ ಸಹೋದರಿಗೆ ಇನ್ಸ್ಟಾಗ್ರಾಂ ಮೂಲಕ ಕಳುಹಿಸುತ್ತಿದ್ದಳು. ಇದಲ್ಲದೆ ಆಕೆ ಯುವಕನೊಂದಿಗಿರುವ ಅಶ್ಲೀಲ ಚಿತ್ರಗಳನ್ನು ನಕಲಿ ಖಾತೆಯಲ್ಲಿ ಪೋಸ್ಟ್ ಮಾಡುತ್ತಿದ್ದಳು. ಈ ಬಗ್ಗೆ ನಮಗೆ ದೂರು ಬಂದಿದ್ದು, ತನಿಖೆ ನಡೆಸಿ ಯುವತಿಯನ್ನು ಪತ್ತೆ ಮಾಡಿದ್ದೇವೆ ಎಂದು ಹೇಳಿದ್ದಾರೆ. (ಏಜೆನ್ಸೀಸ್)