

ನವದೆಹಲಿ: ಕರೊನಾ ಪ್ರಕರಣಗಳು ಗಣನೀಯವಾಗಿ ಇಳಿಕೆಯಾಗುತ್ತಿರುವ ಕಾರಣ ಹಂತಹಂತವಾಗಿ ಹಲವು ನಿರ್ಬಂಧಗಳನ್ನು ಸಡಿಲಗೊಳಿಸುತ್ತಿರುವ ದೆಹಲಿ ಸರ್ಕಾರ, ಇದೀಗ ಹೋಟೆಲ್ ಹಾಗೂ ರೆಸ್ಟೋರಂಟ್ಗಳಲ್ಲಿ ಮದ್ಯ ಸರಬರಾಜಿಗೆ ಅವಕಾಶ ನೀಡಿದೆ.
ಜೂನ್ 8ರಿಂದ ಹೋಟೆಲ್, ರೆಸ್ಟೋರಂಟ್ಗಳನ್ನು ತೆರೆಯಲು ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಅವಕಾಶ ನೀಡಿವೆ. ಆದರೆ, ಮದ್ಯ ಸರಬರಾಜಿಗೆ ನಿರ್ಬಂಧ ವಿಧಿಸಲಾಗಿತ್ತು. ಆದರೆ, ಸರ್ಕಾರಕ್ಕೆ ಆದಾಯವೂ ಮುಖ್ಯವಾಗಿರುವುದರಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ.
ಈ ಬಗ್ಗೆ ಅಗತ್ಯ ಅನುಮತಿಗಳನ್ನು ನೀಡುವಂತೆ ಅಬಕಾರಿ ಇಲಾಖೆಗೆ ದೆಹಲಿ ಉಪಮುಖ್ಯಮತ್ರಿ ಮನೀಶ್ ಸಿಸೋಡಿಯಾ ಸೂಚನೆ ನೀಡಿದ್ದಾರೆ. ಇದಕ್ಕಾಗಿ ಅಧಿಕೃತ ಆದೇಶವನ್ನು ಹೊರಡಿಸಿದ್ದಾರೆ.
ಅಸ್ಸಾಂ, ಪಂಜಾಬ್, ರಾಜಸ್ಥಾನ ಮೊದಲಾದ ರಾಜ್ಯಗಳಲ್ಲಿ ಪರವಾನಗಿ ಪಡೆದಿರುವ ರೆಸ್ಟೋರಂಟ್, ಕ್ಲಬ್, ಹೋಟೆಲ್ ರೂಮ್ಗಳಲ್ಲಿ ಮದ್ಯ ಪೂರೈಸಲು ಅನುಮತಿ ನೀಡಲಾಗಿದೆ.
ದೆಹಲಿಯಲ್ಲಿ ಹೋಟೆಲ್ ಹಾಗೂ ವಾರದ ಸಂತೆಗಳನ್ನು ನಡೆಸಲು ಅವಕಾಶ ನೀಡಿದ ಮರುದಿನವೇ ಈ ಆದೇಶ ಹೊರಬಿದ್ದಿದೆ. ಹೋಟೆಲ್ಗಳನ್ನು ತೆರೆಯಲು ಅವಕಾಶ ನೀಡಿದ ಕ್ರಮಕ್ಕೆ ಕೇಂದ್ರ ಸಚಿವರು ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.