ಮದುವೆಯಾಗುತ್ತೇನೆ ಎಂದವನ ನಂಬಿ ಕೆಟ್ಟ ವಿಚ್ಛೇದಿತ ಮಹಿಳೆ; ರಾಜ್ಯದಲ್ಲೂ ದಾಖಲಾಗಿವೆ 2 ಕೇಸ್​

Accused
Published on

ನವದೆಹಲಿ: ಮ್ಯಾಟ್ರಿಮನಿ ಸೈಟ್​ (ವೈವಾಹಿಕ ತಾಣ)ಮೂಲಕ ಮಹಿಳೆಯರಿಗೆ ವಂಚಿಸುತ್ತಿದ್ದವನನ್ನು ದೆಹಲಿ ಪೊಲೀಸರು ಬಂಧಿಸಿದ್ದು, ಆತನ ಬ್ಯಾಂಕ್​ ಅಕೌಂಟ್​​ನ್ನೂ ಜಪ್ತಿ ಮಾಡಿ, ಸ್ಥಗಿತಗೊಳಿಸಿದ್ದಾರೆ.

ವಂಚಕನ ಹೆಸರು ವಿಶಾಲ್​ ಟೋಕಾಸ್​. ಮದುವೆ ಮ್ಯಾಟ್ರಿಮನಿ ಸೈಟ್​ಗಳ ಮುಖಾಂತರ ಹಲವು ಮಹಿಳೆಯರಿಗೆ ಮೋಸ ಮಾಡಿ, ಅವರಿಂದ ಹಣ ಪೀಕಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಆತನ ಬ್ಯಾಂಕ್​ ಅಕೌಂಟ್​​ನಲ್ಲಿ ಸುಮಾರು 4.6 ಲಕ್ಷ ರೂಪಾಯಿ ಇತ್ತು.

ಈತ ಮ್ಯಾಟ್ರಿಮನಿ ಸೈಟ್​ನಲ್ಲಿ ತನ್ನನ್ನು ಓರ್ವ ಬ್ರಿಟಿಷ್​ ಪ್ರಜೆ ಎಂದು ಪರಿಚಯಿಸಿಕೊಂಡಿದ್ದ. ಹಾಗೇ ನಾನೊಬ್ಬ ವಿಚ್ಚೇದಿತ ಎಂದೂ ಹೇಳಿಕೊಂಡು ಮಹಿಳೆಯೋರ್ವರಿಗೆ ಮೋಸ ಮಾಡಿದ್ದ. ಆ ಮಹಿಳೆಯ ದೂರಿನ ಅನ್ವಯ ಪೊಲೀಸರು ತನಿಖೆ ಪ್ರಾರಂಭಿಸಿ, ಆತನನ್ನು ಬಂಧಿಸಿದ್ದಾರೆ.

ವಿಶಾಲ್​ ನನ್ನ ಬಳಿ ಬ್ರಿಟಿಷ್​ ಪ್ರಜೆಯೆಂದು ಹೇಳಿಕೊಂಡಿದ್ದ. ತುಂಬ ನಂಬಿಕೆ ಬರುವಂತೆ ವರ್ತಿಸಿದ್ದ. ನಾನೂ ಒಪ್ಪಿ ಮದುವೆಯಾಗಲು ನಿರ್ಧರಿಸಿದ್ದೆ. ನನ್ನೊಂದಿಗೆ ವಾಟ್ಸ್​ಆ್ಯಪ್​ ಚಾಟ್ ಮಾಡುತ್ತಿದ್ದ. ಒಂದು ದಿನ ಅರ್ಜೆಂಟ್ ಆಗಿ ಸ್ವಲ್ಪ ಹಣ ಬೇಕು. ಹಣ ಸಿಗುತ್ತಿದ್ದಂತೆ ನಿನ್ನನ್ನು ಮದುವೆಯಾಗುತ್ತೇನೆ ಎಂದಿದ್ದ. ನಾನೂ ನಂಬಿ 1,21,900 ರೂಪಾಯಿಯನ್ನು ಆನ್​ಲೈನ್​ ಬ್ಯಾಂಕಿಂಗ್​ ಮೂಲಕ ಆತನ ಖಾತೆಗೆ ಹಣ ಹಾಕಿದ್ದೆ. ಆದರೆ ನಂತರ ಅವನು ಚಾಟ್​ಗೂ ಸಿಗಲಿಲ್ಲ. ಕಾಲ್​ ಮಾಡಿದರೂ ಕನೆಕ್ಟ್​ ಆಗಲಿಲ್ಲ ಎಂದು ಹಣ ಕಳೆದುಕೊಂಡ ಮಹಿಳೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಪೊಲೀಸರು ಆರೋಪಿಯನ್ನು ಆತನ ಫೋನ್​ ನಂಬರ್​ ಟ್ರೇಸ್ ಮಾಡುವ ಮೂಲಕ ಹಿಡಿಯಲು ಯತ್ನಿಸಿದಾಗ, ಎಲ್ಲವೂ ಸುಳ್ಳು ಗುರುತು ಪತ್ರಗಳನ್ನು ನೀಡಿ ಪಡೆದವು ಎಂಬ ವಿಚಾರ ಬಯಲಿಗೆ ಬಂತು. ಮಹಿಳೆ ಕೊಟ್ಟಿದ್ದ ಬ್ಯಾಂಕ್​ ಅಕೌಂಟ್​ ಪರಿಶೀಲನೆ ನಡೆಸಿದಾಗ ಆ ಅಕೌಂಟ್​ಗೆ ಹಲವು ವಿವಿಧ ಖಾತೆಗಳಿಂದ ನಿರಂತರವಾಗಿ ಹಣ ಬರುತ್ತಲೇ ಇವೆ ಎಂಬ ಸತ್ಯ ಬೆಳಕಿಗೆ ಬಂದಿದೆ. ಈತ ಮ್ಯಾಟ್ರಿಮನಿಯಲ್ಲಿ ಮಹಿಳೆಯರನ್ನು ವಂಚಿಸುವುದನ್ನೇ ವೃತ್ತಿಯಾಗಿಸಿಕೊಂಡಿದ್ದಾನೆ ಎಂಬುದೂ ಗೊತ್ತಾಯಿತು. ಹಾಗೇ ಸಫ್ದರ್​ಜಂಗ್​ ನಲ್ಲಿರುವ ಬ್ಯಾಂಕ್​ ಶಾಖೆಯಲ್ಲಿ ಆತ ಹಣ ವಿತ್​​ಡ್ರಾ ಮಾಡಿದ್ದನ್ನು ಗೊತ್ತುಪಡಿಸಿಕೊಂಡ ಪೊಲಿಸರು ಶೀಘ್ರವೇ ಆರೋಪಿಯನ್ನು ಬಂಧಿಸಿದ್ದಾರೆ. ಇದನ್ನೂ ಓದಿ: ‘ರಾಬರ್ಟ್​’ ನಾಯಕಿ ಹುಟ್ಟುಹಬ್ಬಕ್ಕೆ ಚಿತ್ರತಂಡದ ಗಿಫ್ಟ್​!

ಈತ ವಿಚ್ಛೇದಿತ ಮಹಿಳೆಯರನ್ನೇ ಟಾರ್ಗೆಟ್ ಮಾಡಿ, ಅವರನ್ನು ಮದುವೆಯಾಗುತ್ತೇನೆ ಎಂದು ಹೇಳುತ್ತಿದ್ದ. ನಂಬಿಕೆ ಹುಟ್ಟುವಂತೆ ಮಾತನಾಡಿ, ದುಬಾರಿ ಬೆಲೆಯ ಗಿಫ್ಟ್​ಗಳ ಆಮಿಷವೊಡ್ಡುತ್ತಿದ್ದ. ನಂತರ ಹಣ ಪಡೆದು ಪರಾರಿಯಾಗುತ್ತಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಈತ ಪಕ್ಕಾ ಕ್ರಿಮಿನಲ್​ ಆಗಿದ್ದು, ಕರ್ನಾಟಕದಲ್ಲೂ ಎರಡು ಪ್ರಕರಣಗಳು ದಾಖಲಾಗಿವೆ ಎಂದೂ ಮಾಹಿತಿ ನೀಡಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net