ಆರ್​ಸಿಬಿ ಜರ್ಸಿ ದುರ್ಬಳಕೆ: ಜೈಲರ್​ ಸಿನಿಮಾ ತಂಡಕ್ಕೆ ಸೆ.1ರ ಗಡುವು ಕೊಟ್ಟ ದೆಹಲಿ ಹೈಕೋರ್ಟ್​

Jailer
Published on

ನವದೆಹಲಿ: ಜೈಲರ್​ ಸಿನಿಮಾದ ದೃಶ್ಯವೊಂದರಲ್ಲಿ ಸುಪಾರಿ ಕಿಲ್ಲರ್​ ಧರಿಸಿರುವ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡದ ಜರ್ಸಿಯ ದೃಶ್ಯವನ್ನು ತೆಗೆಯುವಂತೆ ಮತ್ತು ಸೆಪ್ಟೆಂಬರ್​ 1ರಿಂದ ಎಲ್ಲ ಚಿತ್ರಮಂದಿರಗಳಲ್ಲಿ ಆ ದೃಶ್ಯವನ್ನು ಪ್ರದರ್ಶನ ಮಾಡದಂತೆ ಜೈಲರ್​ ಸಿನಿಮಾ ತಂಡಕ್ಕೆ ದೆಹಲಿ ಹೈಕೋರ್ಟ್​ ನಿರ್ದೇಶನ ನೀಡಿದೆ.

ಆರ್​ಸಿಬಿ ತಂಡದ ಜೆರ್ಸಿಯನ್ನು ಅವಹೇಳನಕಾರಿಯಾಗಿ ಬಳಸಿದ್ದಕ್ಕಾಗಿ ಚಲನಚಿತ್ರ ನಿರ್ಮಾಪಕರ ವಿರುದ್ಧ ಐಪಿಎಲ್ ತಂಡ, ರಾಯಲ್ ಚಾಲೆಂಜರ್ಸ್ ಸ್ಪೋರ್ಟ್ಸ್ ಪ್ರೈವೇಟ್ ಲಿಮಿಟೆಡ್ ಸಲ್ಲಿಸಿದ ಮೊಕದ್ದಮೆಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಪ್ರತಿಭಾ ಎಂ ಸಿಂಗ್ ಈ ಆದೇಶವನ್ನು ನೀಡಿದ್ದಾರೆ. ಜೈಲರ್​ ಸಿನಿಮಾವನ್ನು ಟಿವಿ, ಸ್ಯಾಟಲೈಟ್​ ಅಥವಾ ಯಾವುದೇ ಒಟಿಟಿ ವೇದಿಕೆಯಲ್ಲಿ ಬಿಡುಗಡೆ ಮಾಡುವುದಕ್ಕೂ ಮೊದಲು ಚಿತ್ರದ ಬದಲಾದ ಆವೃತ್ತಿಯನ್ನು ಹೊಂದಿರಬೇಕು ಎಂದು ಕೋರ್ಟ್​ ಹೇಳಿದೆ.

ಜೈಲರ್​ ಚಿತ್ರದಲ್ಲಿ ಕಾಂಟ್ರಾಕ್ಟ್ ಕಿಲ್ಲರ್ ಜರ್ಸಿ ಧರಿಸಿ ಮಹಿಳೆಯ ಬಗ್ಗೆ ಅವಹೇಳನಕಾರಿ ಮತ್ತು ಸ್ತ್ರೀದ್ವೇಷದ ಹೇಳಿಕೆಗಳನ್ನು ನೀಡಿದ್ದಾನೆ ಎಂದು ಆರೋಪಿಸಲಾಗಿದೆ. ಅನುಮತಿಯಿಲ್ಲದೆ ತಮ್ಮ ಜೆರ್ಸಿಯನ್ನು ಬಳಸಿದ್ದಲ್ಲದೆ, ಚಿತ್ರದಲ್ಲಿ ನಕಾರಾತ್ಮಕ ಪಾತ್ರಕ್ಕೆ ಜೆರ್ಸಿಯನ್ನು ದುರುಪಯೋಗಪಡಿಸಿಕೊಂಡಿರುವುದರಿಂದ ತಮ್ಮ ಬ್ರ್ಯಾಂಡ್ ಇಮೇಜ್​ಗೆ ಹಾನಿಯಾಗಬಹುದು ಎಂದು ಐಪಿಎಲ್ ತಂಡ ವಾದಿಸಿದೆ.

ಕೋರ್ಟ್​ ಸೂಚನೆ ಬಳಿಕ ಜೈಲರ್​ ಚಿತ್ರದ ನಿರ್ಮಾಪಕರು ಮತ್ತು IPL ತಂಡವು ವಿವಾದವನ್ನು ಬಗೆಹರಿಸಿಕೊಳ್ಳಲು ಮುಂದಾಗಿದೆ. ಜರ್ಸಿಯನ್ನು ಹೊಂದಿರುವ ದೃಶ್ಯಗಳನ್ನು ತೆಗೆದು ಹಾಕಲು ಜೈಲರ್​ ಚಿತ್ರತಂಡ ಒಪ್ಪಿದೆ. ಚಿತ್ರವು ಈಗಾಗಲೇ ಆಗಸ್ಟ್ 10ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿರುವುದರಿಂದ, ಸೆಪ್ಟೆಂಬರ್ 1ರ ಒಳಗೆ ಚಿತ್ರಮಂದಿರ ಆವೃತ್ತಿಯಲ್ಲಿ ಬದಲಾವಣೆಯನ್ನು ಕೈಗೊಳ್ಳಲಾಗುವುದು ಎಂದು ಸಿನಿಮಾ ತಂಡ ಭರವಸೆ ನೀಡಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net