

ನವದೆಹಲಿ: ಲಾಕ್ಡೌನ್ ಸಮಯದಲ್ಲಿ ತಮ್ಮ ಊರಿಗೆ ತೆರಳಲು ವಲಸೆ ಕಾರ್ಮಿಕರು ಅನುಭವಿಸಿದಂತಹ ಕಷ್ಟಗಳನ್ನು ಮಾಧ್ಯಮ ಹಾಗು ಸಾಮಾಜಿಕ ಜಾಲತಾಣಗಳಲ್ಲಿ ನೋಡಿದ್ದೇವೆ. ಅನೇಕರು ನಡೆದುಕೊಂಡು ಹಾಗೂ ಸೈಕಲ್ನಲ್ಲಿ ಸಾವಿರಾರು ಕಿ.ಮೀ ಕ್ರಮಿಸಿದ್ದನ್ನು ಕಂಡಿದ್ದೇವೆ. ಸರ್ಕಾರ ಸೇರಿದಂತೆ ಅನೇಕರು ಸಹ ವಲಸೆ ಕಾರ್ಮಿಕರ ನೆರವಿಗೆ ಧಾವಿಸಿದ್ದಾರೆ. ಆದರೆ, ಇವರೆಲ್ಲರಿಗಿಂತ ದೆಹಲಿ ಮೂಲದ ರೈತನೊಬ್ಬ ವಿಭಿನ್ನ ಎನಿಸಿಕೊಂಡಿದ್ದಾರೆ.
ದೆಹಲಿಯ ತಿಗಿಪುರ್ ಗ್ರಾಮದ ನಿವಾಸಿ ಪಾಪ್ಪನ್ ಸಿಂಗ್ ಅಣಬೆ ಬಳೆಯುವ ರೈತ. ಬಿಹಾರ ಮೂಲದ 10 ವಲಸೆ ಕಾರ್ಮಿಕರನ್ನು ತವರಿಗೆ ಕಳುಹಿಸಲು ಸುಮಾರು 70 ಸಾವಿರ ರೂ. ಖರ್ಚು ಮಾಡಿ ವಿಮಾನ ಟಿಕೆಟ್ ಖರೀದಿಸುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಅಲ್ಲದೆ, ಲಾಕ್ಡೌನ್ ವೇಳೆ ಕಾರ್ಮಿಕರಿಗೆ ಎರಡು ತಿಂಗಳು ಕಾಲ ಆಶ್ರಯ ನೀಡಿ, ಅಚ್ಚುಕಟ್ಟಾಗಿ ಆಹಾರ ವ್ಯವಸ್ಥೆಯನ್ನು ಮಾಡಿ ಮಾನವೀಯತೆ ಮೆರೆದಿದ್ದಾರೆ.
ದಶಕಗಳಿಂದ ಪಾಪ್ಪನ್ ಸಿಂಗ್ ಅವರ ಹೊಲದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಲಖಿಂದರ್ ರಾಮ್ ಸಕಲ ಗೌರವಗಳೊಂದಿಗೆ ಆರೋಗ್ಯವನ್ನೂ ಕಾಪಾಡಿಕೊಂಡು ತಮ್ಮ ಕುಟುಂಬವನ್ನು ಸೇರುವ ಖುಷಿಯಲ್ಲಿದ್ದಾರೆ. ಅವರೊಂದಿಗೆ ಉಳಿದ 9 ಕಾರ್ಮಿಕರು ಸಹ ಅದೇ ಗೌರವದೊಂದಿಗೆ ತವರಿಗೆ ಮರಳಲಿದ್ದು, ಇವರೆಲ್ಲರಿಗೂ ಇದೇ ಮೊದಲ ವಿಮಾನ ಪ್ರಯಾಣವು ಸಹ ಆಗಿದೆ.
ವಿಮಾನದಲ್ಲಿ ಪ್ರಯಾಣಿಸುತ್ತೇನೆಂದು ನಾನೆಂದಿಗೂ ಅಂದುಕೊಂಡಿರಲಿಲ್ಲ. ನನ್ನ ಸಂತೋಷಕ್ಕೆ ಪಾರವೇ ಇಲ್ಲ. ಆದರೆ, ನಾಳೆ ವಿಮಾನ ನಿಲ್ದಾಣ ತಲುಪಿದಾಗ ಏನು ಮಾಡಬೇಕೆಂಬುದರ ಬಗ್ಗೆ ನಮಗೆ ಒತ್ತಡವು ಇದೆ ಎನ್ನುತ್ತಾರೆ ಲಖಿಂದರ್ ರಾಮ್. ಅಂದಹಾಗೆ ರಾಮ್ ತಮ್ಮ ಮಗನೊಂದಿಗೆ ತವರಿಗೆ ತೆರಳಲು ಸಿದ್ಧರಾಗಿದ್ದಾರೆ.
ಈ ಬಗ್ಗೆ ಮಾತನಾಡಿರುವ ಪಾಪ್ಪನ್ ಸಿಂಗ್, ಒಂದು ವೇಳೆ ಮಾರ್ಗ ಮಧ್ಯೆ ಅವರಿಗೇನಾದರೂ ಸಂಭವಿಸಿದ್ದರೆ ಅದನ್ನು ಸಹಿಸಿಕೊಳ್ಳಲು ನನ್ನಿಂದ ಸಾಧ್ಯವಾಗುವುದಿಲ್ಲ ಎಂಬ ಯೋಚನೆ ಬಂತು. ಹೀಗಾಗಿ ಅವರೆಲ್ಲರನ್ನೂ ಮನೆಗೆ ಸುರಕ್ಷಿತವಾಗಿ ಕಳುಹಿಸಿಕೊಡಲು ವಿಮಾನವೇ ಉತ್ತಮ ಎನಿಸಿತು. ಅವರೆಲ್ಲರೂ ನನ್ನ ಸ್ವಂತ ಜನರಿದ್ದಂತೆ. ಹೀಗಾಗಿ ಟಿಕೆಟ್ ಖರಿದಿಸಿದೆ ಎಂದು ತಿಳಿಸಿದ್ದಾರೆ.
ಪಾಪ್ಪನ್ ಸಿಂಗ್ ಅವರ ಕಾರ್ಮಿಕರನ್ನು ಹೊತ್ತೊಯ್ಯುವ ವಿಮಾನವು ನಾಳೆ (ಗುರುವಾರ) ಬೆಳಗ್ಗೆ 6 ಗಂಟೆಗೆ ದೆಹಲಿ ವಿಮಾನ ನಿಲ್ದಾಣವನ್ನು ಬಿಡಲಿದೆ. ಇದೇ ವೇಳೆ ಅವರಿಲ್ಲರನ್ನೂ ನಿಲ್ದಾಣದಲ್ಲಿ ವೈದ್ಯಕೀಯ ತಪಾಸಣೆಯನ್ನು ಸಹ ನಡೆಸಲಾಗುತ್ತದೆ.
ಇನ್ನು ವಲಸೆ ಕಾರ್ಮಿಕರಿಂದಲೇ ಪಾಪ್ಪನ್ ಸಿಂಗ್ ಅವರು ಅಣಬೆ ಕೃಷಿಯಿಂದ ವಾರ್ಷಿಕ 12 ಲಕ್ಷ ಆದಾಯ ಗಳಿಸುತ್ತಾರಂತೆ. ಹೀಗಾಗಿ ಕಾರ್ಮಿಕರನ್ನೂ ಸಹ ಅವರು ತಮ್ಮ ಮನೆಯವರಂತೆ ನೋಡಿಕೊಳ್ಳುತ್ತಾರೆ. ಕಾರ್ಮಿಕರು ಅಷ್ಟೇ ಪಾಪ್ಪನ್ ಸಿಂಗ್ಗೆ ಕೃತಜ್ಞರಾಗಿದ್ದಾರೆ.
ಈ ಮುಂಚೆ ಶ್ರಮಿಕ್ ರೈಲಿನಲ್ಲಿ ಕಳುಹಿಸಿಕೊಡಲು ನಿರ್ಧರಿಸಿ ನೋಂದಣಿಯನ್ನು ಮಾಡಲಾಗಿತ್ತು. ಆದರೆ, ಉತ್ತರ ಭಾರತದಲ್ಲಿ ಬೇಸಿಗೆ ಹೆಚ್ಚಾಗಿರುವುದರಿಂದ ಉತ್ತಮವಲ್ಲ ಎಂಬ ನಿರ್ಧಾರಕ್ಕೆ ಪಾಪ್ಪನ್ ಸಿಂಗ್ ಬಂದರು. ಅಲ್ಲದೆ, ಪಟನಾದ ವಿಮಾನ ನಿಲ್ದಾಣದಿಂದ ಕಾರ್ಮಿಕರು ಇಳಿದ ನಂತರ ಅವರನ್ನು ಊರಿಗೆ ಕರೆದೊಯ್ಯಲು ಬಸ್ ಟಿಕೆಟ್ ಕೂಡ ಬುಕ್ ಮಾಡಿದ್ದಾರೆ. ಈ ಎಲ್ಲ ಮಾನವೀಯ ಕಾರ್ಯಗಳಿಂದ ಪಾಪ್ಪನ್ ಸಿಂಗ್ ತುಂಬಾ ವಿಭಿನ್ನ ಎನಿಸಿಕೊಂಡಿದ್ದಾರೆ. (ಏಜೆನ್ಸೀಸ್)