ಜಮ್ಮು-ಕಾಶ್ಮೀರ ವಿಧಾನಸಭೆ ಚುನಾವಣೆ; ಸಂಸದ ಇಂಜಿನಿಯರ್​ ರಶೀದ್​ಗೆ ಜಾಮೀನು ಮಂಜೂರು

Engineer Rashid
Published on

ನವದೆಹಲಿ: ಭಯೋತ್ಪಾದಕರಿಗೆ ಹಣಕಾಸು ನೆರವು ನೀಡಿದ ಆರೋಪದ ಮೇಲೆ ಜೈಲುಪಾಲಾಗಿರುವ ಉಗ್ರ, ಬಾರಾಮುಲ್ಲಾ ಸಂಸದ ಇಂಜಿನಿಯರ್​ ರಶೀದ್​ಗೆ ದೆಹಲಿಯ ಪಟಿಯಾಲಾ ಹೌಸ್​ ಕೋರ್ಟ್​ ಮಂಗಳವಾರ (ಸೆಪ್ಟೆಂಬರ್​ 10) ಮಧ್ಯಂತರ ಜಾಮೀನು ಮಂಜೂರು ಮಾಡಿದೆ.

ಹಾಲಿ ನಡೆಯುತ್ತಿರುವ ಜಮ್ಮು-ಕಾಶ್ಮೀರ ವಿಧಾನಸಭೆ ಚುನಾವಣೆಯಲ್ಲಿ ಪ್ರಚಾರ ನಡೆಸುವ ಸಲುವಾಗಿ ಮಧ್ಯಂತರ ಜಾಮೀನು ಕೋರಿ ರಶೀದ್‌ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ದೆಹಲಿ ಪಟಿಯಾಲಾ ಹೌಸ್​ ಕೋರ್ಟ್​ನೆ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಚಂದರ್ ಜಿತ್ ಸಿಂಗ್ ವಾದ-ಪ್ರತಿವಾದವನ್ನು ಆಲಿಸಿದ ಬಳಿಕ ರಶೀದ್​ಗೆ ಜಾಮೀನು ಮಂಜೂರು ಮಾಡಿದ್ದಾರೆ.

ಎಂಜಿನಿಯರ್ ರಶೀದ್ ಎಂದೇ ಖ್ಯಾತಿ ಪಡೆದಿರುವ  ಶೇಖ್ ಅಬ್ದುಲ್ ರಶೀದ್, 2024ರ ಲೋಕಸಭಾ ಚುನಾವಣೆಯಲ್ಲಿ ಬಾರಾಮುಲ್ಲಾ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ ನ್ಯಾಷನಲ್ ಕಾನ್ಫರೆನ್ಸ್ ನಾಯಕ ಒಮರ್ ಅಬ್ದುಲ್ಲಾ ಅವರ ವಿರುದ್ಧ ಜಯ ಸಾಧಿಸಿದ್ದರು. ಜುಲೈ 5 ರಂದು, ಲೋಕಸಭೆ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸಲು ನ್ಯಾಯಾಲಯ ರಶೀದ್‌ಗೆ ಕಸ್ಟಡಿ ಪೆರೋಲ್ ನೀಡಿತ್ತು .

2017ರಲ್ಲಿ ಕಾಶ್ಮೀರ ಕಣಿವೆಯಲ್ಲಿ ಭಯೋತ್ಪಾದಕ ಗುಂಪುಗಳಿಗೆ ಹಣಕಾಸಿನ ನೆರವು ನೀಡಿದ ಆರೋಪದ ಮೇಲೆ ಎನ್‌ಐಎ ರಶೀದ್ ವಿರುದ್ಧ ಯುಎಪಿಎ ಕಾಯ್ದೆ ಅಡಿ ಪ್ರಕರಣ ದಾಖಲಿಸಿತ್ತು. 2019ರಿಂದ ಅವರು ಜೈಲಿನಲ್ಲಿದ್ದಾರೆ. ಇದೀಗ ಜಮ್ಮು-ಕಾಶ್ಮೀರದಲ್ಲಿ ನಡೆಯುತ್ತಿರುವ ವಿಧಾನಸಭೆ ಚುನಾವಣೆಯಲ್ಲಿ ಪ್ರಚಾರ ಮಾಡಲೆಂದು ಮಧ್ಯಂತರ ಜಾಮೀನಿನ ಮೇಲೆ ಹೊರಬಂದಿದ್ದಾರೆ. ಅಕ್ಟೋಬರ್​ 02ರವರೆಗೆ ಅವರ ಜಾಮೀನು ಅವಧಿ ಚಾಲ್ತಿಯಲ್ಲಿರಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net