

|ಶ್ರೀಕಾಂತ್ ಶೇಷಾದ್ರಿ, ಬೆಂಗಳೂರು
ಕರ್ನಾಟಕ ವಿಧಾನಸಭೆಗೆ ಅವಧಿ ಪೂರ್ವ ಚುನಾವಣೆ ನಡೆಯಬಹುದೆಂಬ ಊಹೆಯಲ್ಲಿ ಕಾಂಗ್ರೆಸ್ ಹೈಕಮಾಂಡ್ ಬಿರುಸಿನಿಂದ ಅಗತ್ಯ ತಯಾರಿ ಆರಂಭಿಸಿದೆ. ಸ್ವತಂತ್ರವಾಗಿ ಕಾಂಗ್ರೆಸ್ ಅಧಿಕಾರಕ್ಕೆ ಬರಬಹುದಾದ ರಾಜ್ಯಗಳಲ್ಲಿ ಕರ್ನಾಟಕವೂ ಒಂದು ಎಂಬ ಸ್ಪಷ್ಟತೆ ಇರುವುದರಿಂದ ರಾಜ್ಯಕ್ಕೆ ಹೆಚ್ಚಿನ ಮಹತ್ವ ನೀಡಿದ್ದು, ಗೊಂದಲ, ಆಂತರಿಕ ಬಿಕ್ಕಟ್ಟಿಗೆ ಮದ್ದು ಅರೆಯುವ ಕೆಲಸ ನಡೆಸಿದೆ. ದೆಹಲಿಯಲ್ಲಿ ರಾಜ್ಯ ಕಾಂಗ್ರೆಸ್ನ ಪ್ರಮುಖ 16 ಮಂದಿಯನ್ನು ಕೂರಿಸಿಕೊಂಡು ಪಾಠ ಹೇಳಿರುವ ರಾಹುಲ್ ಗಾಂಧಿ, ಗೆಲ್ಲುವ ಸಾಧ್ಯತೆ ಇದೆ, ಸ್ವಯಂಕೃತ ತಪ್ಪುಗಳಿಂದ ಅವಕಾಶ ಕಳೆದುಕೊಳ್ಳಬೇಡಿ ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಎಲ್ಲರೂ ಒಗ್ಗಟ್ಟಾಗಿರಿ ಎಂದು ಸಲಹೆ ನೀಡಿದ್ದಾರೆ.
ಈ ಸಭೆಯಲ್ಲಿ ಪಾಲ್ಗೊಂಡು ಕಾಂಗ್ರೆಸ್ನ ನಾಯಕರೊಬ್ಬರು ಸಭೆಯ ಮಹತ್ವದ ಬಗ್ಗೆ ವಿಜಯವಾಣಿಗೆ ವಿವರಿಸಿದ್ದು, ಉತ್ತರ ಪ್ರದೇಶ, ಉತ್ತರ ಖಂಡ, ಗೋವಾ, ಮಣಿಪುರ ಚುನಾವಣೆ ಫಲಿತಾಂಶದ ಮೇಲೆ ಕರ್ನಾಟಕದ ಚುನಾವಣೆ ಯಾವಾಗೆಂಬುದು ನಿರ್ಧಾರವಾಗಲಿದೆ. ಒಂದು ವೇಳೆ ಬಿಜೆಪಿಗೆ ನಿರೀಕ್ಷೆಯಂತೆ ಫಲಿತಾಂಶ ಬಂದಿದ್ದೇ ಆದರೆ ಕರ್ನಾಟಕದಲ್ಲೂ ಅವಧಿ ಪೂರ್ವ ಚುನಾವಣೆ ನಡೆಯಬಹುದು, ಈ ಕಾರಣಕ್ಕೂ ದೆಹಲಿ ಸಭೆಗೆ ಮಹತ್ವ ಇದೆ ಎಂದರು. 2022ರ ನವೆಂಬರ್- ಡಿಸೆಂಬರ್ನಲ್ಲಿ ಗುಜರಾತ್ ವಿಧಾನಸಭೆ ಚುನಾವಣೆ ನಡೆಯಲಿದ್ದು, ಅದೇ ಸಮಯಕ್ಕೆ ರಾಜ್ಯದಲ್ಲೂ ನಡೆಯುವ ಸಾಧ್ಯತೆ ಹೆಚ್ಚಿದೆ. ಒಂದು ವೇಳೆ ಉತ್ತರ ಪ್ರದೇಶ, ಗೋವಾದಲ್ಲಿ ಬಿಜೆಪಿಗೆ ಹಿನ್ನಡೆಯಾದರೆ ಚುನಾವಣೆ ಪೂರ್ವ ನಿಗದಿಯಂತೆ 2023ರ ಮಾರ್ಚ್ ಏಪ್ರಿಲ್ನಲ್ಲಿ ನಡೆಯಲಿದೆ ಎಂಬುದು ಅವರ ಅಭಿಪ್ರಾಯ.
ಮಾರ್ಚ್ 4ರಂದು ರಾಜ್ಯ ಬಜೆಟ್ ಮಂಡನೆಯಾಗಲಿದ್ದು, ಚುನಾವಣೆ ಬಜೆಟ್ ಮಂಡಿಸಲು ಮುಖ್ಯಮಂತ್ರಿಯವರು ತಯಾರಿ ನಡೆಸಿದ್ದಾರೆ. ಇದು ಚುನಾವಣೆ ಬಜೆಟ್ ಎಂದೂ ಬಹಿರಂಗವಾಗಿ ಹೇಳಿದ್ದಾರೆ. ಅಂದರೆ ಜನಪ್ರಿಯ ಕಾರ್ಯಕ್ರಮಕ್ಕೆ ಒತ್ತುಕೊಡುವ ಸುಳಿವು ನೀಡಿದ್ದಾರೆ. ಹೆಚ್ಚು ಜನರನ್ನು ತಲುಪುವ ಮತ್ತು ಮುಂದೆ ಚುನಾವಣೆ ನಡೆದರೆ ಮತದ ಫಸಲು ತೆಗೆಯುವಂತಹ ಸೂಕ್ಷ್ಮ ಕಾರ್ಯಕ್ರಮ ಪ್ರಕಟಗೊಳ್ಳುವ ಸಾಧ್ಯತೆ ದಟ್ಟವಾಗಿದೆ. ಇದೇ ಕಾರಣಕ್ಕೆ ಕಾಂಗ್ರೆಸ್ ಕೂಡ ಬಿಜೆಪಿಯ ಪ್ರತಿ ನಡೆಯನ್ನೂ ಗಂಭೀರವಾಗಿ ಪರಿಗಣಿಸಿದ್ದು, ಒಂದು ವೇಳೆ ಅವಧಿಪೂರ್ವ ಚುನಾವಣೆ ಘೋಷಣೆಯಾದರೆ ಆಗ ಕೈಕೈ ಹಿಸುಕಿಕೊಳ್ಳುವ ಬದಲು ಈಗಿನಿಂದಲೇ ಶಸ್ತ್ರಾಭ್ಯಾಸ ಮಾಡಲು ಸಿದ್ಧತೆ ನಡೆಸಿದೆ.
ಚುನಾವಣೆ ಸಂದರ್ಭದಲ್ಲಿ ಪ್ರಮುಖ ಹುದ್ದೆ ಎಂದು ಪರಿಗಣಿಸುವ ಪ್ರಚಾರ ಸಮಿತಿ ಅಧ್ಯಕ್ಷ ಸ್ಥಾನವನ್ನು ಒಂದು ವರ್ಷ ಮೂರು ತಿಂಗಳು ಇರುವಾಗಲೇ ಘೋಷಿಸಿರುವುದರ ಹಿಂದೆ ತಂತ್ರಗಾರಿಕೆ ಕೂಡ ಇದೆ ಎಂದು ಹೇಳಲಾಗುತ್ತಿದೆ. ಇನ್ನು ಪದಾಧಿಕಾರಿ ಪಟ್ಟಿ ಪ್ರಕಟಗೊಳಿಸಲು ಆತುರ ತೋರದೇ ಇರುವುದೂ ಇದೇ ಕಾರಣಕ್ಕೆ ಎಂಬುದು ಅವರ ಪಕ್ಷದ ನಾಯಕರ ಅಭಿಪ್ರಾಯವಾಗಿದೆ. ಚುನಾವಣೆ ಉದ್ದೇಶದಲ್ಲೇ ‘ಟೀಂ ಕಾಂಗ್ರೆಸ್’ ಸಿದ್ಧಪಡಿಸಲಾಗುತ್ತಿದೆ. ಶೀಘ್ರವೇ ಪದಾಧಿಕಾರಿ ಪಟ್ಟಿ ಅಂತಿಮಗೊಳ್ಳಲಿದೆ. ಜಾತಿ, ಪ್ರಾದೇಶಿಕತೆ, ಯುವಕರಿಗೆ ಒತ್ತು ನೀಡುವ ಪದಾಧಿಕಾರಿ ಪಟ್ಟಿಯನ್ನು ಪ್ರಕಟಿಸಿ ಚುನಾವಣೆಗೆ ಜವಾಬ್ದಾರಿ ನೀಡಲಾಗುತ್ತದೆ. ಜತೆಗೆ ಜಿಲ್ಲಾವಾರು ಹಿರಿಯ ನಾಯಕರಿಗೆ ಈಗಲೇ ಜವಾಬ್ದಾರಿ ಹಂಚಿಕೆ ಮಾಡಲು ಚರ್ಚೆ ನಡೆದಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.
‘ಮುಂದಿನ ಸಿಎಂ’ ದನಿಗೆ ಬೀಗ: ಸಿದ್ದರಾಮಯ್ಯ ಅವರೇ ಮುಂದಿನ ಸಿಎಂ ಎಂಬ ಸಿದ್ದರಾಮಯ್ಯ ಬಣದ ನಿರಂತರ ಪ್ರತಿಕ್ರಿಯೆಗಳು, ಪ್ರತಿಯಾಗಿ ಡಿ.ಕೆ.ಶಿವಕುಮಾರ್ ಬಣದ ಪ್ರತಿತಂತ್ರವನ್ನು ಸೂಕ್ಷ್ಮವಾಗಿ ಗಮನಿಸಿದ್ದ ಕಾಂಗ್ರೆಸ್ ಹೈಕಮಾಂಡ್ ಈ ಬೆಳವಣಿಗೆಗೆ ಬ್ರೇಕ್ ಹಾಕಲು ಪ್ರಯತ್ನಿಸಿದೆ. ಪಂಜಾಬ್ನಲ್ಲಿ ಚುನಾವಣೆಗೆ ಮುನ್ನ ಮುಖ್ಯಮಂತ್ರಿ ಅಭ್ಯರ್ಥಿ ಘೋಷಿಸಿದ್ದ ಕಾಂಗ್ರೆಸ್, ಕರ್ನಾಟಕದಕ್ಕೂ ಘೋಷಿಸಬೇಕೆಂಬುದು ಎರಡೂ ಬಣಗಳ ಮನದಿಂಗಿತ. ಈ ಆಸೆ ಆಗಿಂದಾಗೆ ಪಕ್ಷದ ಸಾರ್ವಜನಿಕ ಸಭೆಗಳಲ್ಲಿ, ಮಾಧ್ಯಮಗಳ ಮುಂದೆ ಹೊರ ಬರುತ್ತಿದೆ. ಮುಂದಿನ ದಿನಗಳಲ್ಲಿ ಇಂತಹ ಬೆಳವಣಿಗೆ ನಡೆದರೆ ನಾಯಕರ ನಡುವೆ ಕಂದಕ ಏರ್ಪಟ್ಟು ಪಕ್ಷಕ್ಕೆ ಹಾನಿಯಾಗಲಿದೆ, ಕೈಗೆ ಬಂದ ತುತ್ತು ಬಾಯಿಗೆ ಇಲ್ಲ ಎಂಬಂತಾಗುತ್ತದೆ ಎಂದು ಊಹಿಸಿಯೇ ದೆಹಲಿಯಲ್ಲಿ ಸಭೆ ಕರೆದಿದ್ದು ಸಾಮೂಹಿಕ ನಾಯಕತ್ವದ ಪಾಠ ಮಾಡಿದೆ. ಒಗ್ಗಟ್ಟಾಗಿ ಹೋಗಿ ಎಂದು ಹೇಳಿದೆ. ಈ ಮೂಲಕ ಚುನಾವಣೆಗೆ ಮುನ್ನ ಸಿಎಂ ಅಭ್ಯರ್ಥಿ ಘೋಷಣೆ ಮಾಡುವುದಿಲ್ಲ ಎಂಬುದನ್ನು ಹಿತಮಿತವಾಗಿ ಪರೋಕ್ಷ ದನಿಯಲ್ಲಿ ಹೇಳಿಕಳಿಸಿದೆ.
ಭಿನ್ನಾಭಿಪ್ರಾಯವಿಲ್ಲ, ಒಗ್ಗಟ್ಟಾಗಿದ್ದೇವೆ: ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಟ್ಟು ಕೊಂಡಿರುವ ಪಕ್ಷ, ನಮ್ಮಲ್ಲಿ ಆಂತರಿಕ ಪ್ರಜಾಪ್ರಭುತ್ವ ಇದೆ. ಹೀಗಿದ್ದಾಗ ಸಣ್ಣ ಪುಟ್ಟ ಭಿನ್ನಾಭಿಪ್ರಾಯ ಇದ್ದೇ ಇರುತ್ತೆ, ಭಿನ್ನಾಭಿಪ್ರಾಯ ಇಲ್ಲ ಅಂದರೆ ಪ್ರಜಾಪ್ರಭುತ್ವಕ್ಕೆ ಅರ್ಥವಿರಲ್ಲ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು.
ದೆಹಲಿಯಲ್ಲಿ ಪಕ್ಷದ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆದ ರಾಜ್ಯದ ಪ್ರಮುಖ ನಾಯಕರ ಸಭೆ ಬಳಿಕ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಜತೆ ಜಂಟಿ ಸುದ್ದಿಗೋಷ್ಠಿ ನಡೆಸಿದ ಅವರು, ರಾಜ್ಯ ಕಾಂಗ್ರೆಸ್ನಲ್ಲಿ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ಬಿಜೆಪಿಯವರು ನಮ್ಮ ನಾಯಕರ ನಡುವೆ ಭಿನ್ನಾಭಿಪ್ರಾಯ ಇದೆ ಎಂದು ಬಿಂಬಿಸುವ ಪ್ರಯತ್ನ ಮಾಡುತ್ತಿದ್ದಾರೆ. ನಾವು ರಾಜ್ಯದ ಜನರ ಮತ್ತು ಪಕ್ಷದ ಹಿತದೃಷ್ಟಿಯಿಂದ ಕೆಲಸ ಮಾಡುತ್ತಿದ್ದೇವೆ ಎಂದರು.
ರಾಹುಲ್ ಗಾಂಧಿ ರಾಜ್ಯದ ಸುಮಾರು 16 ಜನ ಹಿರಿಯ ನಾಯಕರನ್ನು ದೆಹಲಿಗೆ ಕರೆದು ಸಭೆ ನಡೆಸಿ ರಾಜ್ಯದ ಸದ್ಯದ ಸ್ಥಿತಿಗತಿ, ಮುಂದೆ ನಾವು ಗೆಲ್ಲಬೇಕಾದರೆ ಕೈಗೊಳ್ಳಬೇಕಾದ ಕಾರ್ಯತಂತ್ರಗಳು ಬಗ್ಗೆ ಚರ್ಚೆ ಮಾಡಿದರು. ಗೆಲ್ಲುವ ಅವಕಾಶ ಇರುವುದರಿಂದ ಎಚ್ಚರ ತಪ್ಪದೆ ಕೆಲಸ ಮಾಡಬೇಕು ಎಂಬ ಸಲಹೆ ಹಾಗೂ ಮತ್ತೆ ಅಧಿಕಾರಕ್ಕೆ ಬರಲು ಅಗತ್ಯವಿರುವ ಬೆಂಬಲ, ಸಹಕಾರವನ್ನು ನೀಡುತ್ತೇವೆ ಎಂಬ ಭರವಸೆ ನೀಡಿದ್ದಾರೆ ಎಂದು ಹೇಳಿದರು.
ಕೆಪಿಸಿಸಿ ಅಧ್ಯಕ್ಷರು, ಶಾಸಕಾಂಗ ಪಕ್ಷದ ನಾಯಕರು, ಇತರ ಎಲ್ಲ ನಾಯಕರು ಒಗ್ಗೂಡಿ, ಚೆನ್ನಾಗಿ ಕೆಲಸ ಮಾಡುತ್ತಿದ್ದಾರೆ. ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತೆ ಎಂಬ ಮಾಹಿತಿ ನಮಗಿದೆ ಎಂದು ಅವರು ಹೇಳಿದರು ಎಂದು ಸಭೆಯ ಸಾರಾಂಶ ವಿವರಿಸಿದರು.
ಡಿ.ಕೆ.ಶಿವಕುಮಾರ್ ಮಾತನಾಡಿ, ರಾಜ್ಯದ ರಾಜಕೀಯ ಬೆಳವಣಿಗಗಳ ಬಗ್ಗೆ ಮಾಹಿತಿ ನೀಡಿದೆ. ಪಕ್ಷದ ಸಂಘಟನೆ ಬಗ್ಗೆ ವಿವರಣೆ ನೀಡಿದ್ದೇವೆ. ಚುನಾವಣೆಗೆ ಮುಂದೆ ಒಂದು ವರ್ಷ ಸಮಯ ಇದೆ, ಜನರ ಸಮಸ್ಯೆಗಳನ್ನು ಆಧರಿಸಿ ಮುಂದೆ ಹೋರಾಟ ಮಾಡಲು ಹೈಕಮಾಂಡ್ ಸೂಚಿಸಿದೆ. ಜನರ ನಡುವೆ ಇರುವಂತೆ ರಾಹುಲ್ ಗಾಂಧಿ ಕರೆ ಕೊಟ್ಟಿದ್ದಾರೆ ಎಂದರು.
ಕರ್ನಾಟಕ ಭವನ ವಿರುದ್ಧ ಗರಂ: ಕರ್ನಾಟಕ ಭವನದಲ್ಲಿ ಐವರು ಐಎಎಸ್, ಒಬ್ಬ ಐಪಿಎಸ್ ಮತ್ತು ಒಬ್ಬ ಐಎಫ್ಎಸ್ ಅಧಿಕಾರಿ ಇದ್ದಾರೆ. ಈ ಬಗ್ಗೆ ನಾನು ಅಧಿವೇಶನ ದಲ್ಲಿ ಪ್ರಶ್ನೆ ಮಾಡುತ್ತೇನೆೆ ಎಂದ ಸಿದ್ದರಾಮಯ್ಯ ಹೇಳಿದರು. ನಮಗೆ ಸುದ್ದಿಗೋಷ್ಠಿ ನಡೆಸಲು ಮೀಟಿಂಗ್ ಹಾಲ್ ಸಹ ನೀಡಿಲ್ಲ ಎಂದ ಡಿಕೆಶಿ ಅಸಮಾಧಾನ ವ್ಯಕ್ತಪಡಿಸಿದರು. ಕೊನೆಗೆ ಕರ್ನಾಟಕ ಭವನದ ಡೈನಿಂಗ್ ಹಾಲ್ನಲ್ಲಿ ಸುದ್ದಿಗೋಷ್ಠಿ ನಡೆಸಲಾಯಿತು.
ನಾಳೆಯಿಂದ ಮೇಕೆದಾಟು ಪಾದಯಾತ್ರೆ ಎರಡನೇ ಚರಣ:
ಮೇಕೆದಾಟು ಯೋಜನೆ ಜಾರಿಗೆ ಒತ್ತಾಯಿಸಿ ಕಾಂಗ್ರೆಸ್ ಹಮ್ಮಿಕೊಂಡಿರುವ ಮೇಕೆದಾಟು ಪಾದಯಾತ್ರೆ ಎರಡನೇ ಚರಣ ಭಾನುವಾರ ರಾಮನಗರದಿಂದ ಆರಂಭವಾಗುತ್ತಿದೆ. ಕನಕಪುರ ತಾಲೂಕು ಸಂಗಮದಿಂದ ಜನವರಿ 9ರಂದು ಪಾದಯಾತ್ರೆ ಆರಂಭಿಸಲಾಗಿತ್ತು, ದೊಡ್ಡ ಮಟ್ಟದ ಹೈಪ್ ಕೂಡ ಪಡೆದುಕೊಂಡಿದ್ದ ಯಾತ್ರೆ ಕರೊನಾದಿಂದ ಸ್ಥಗಿತಗೊಂಡಿತ್ತು. ಇದೀಗ ಪುನಃ ಯಾತ್ರೆಯನ್ನು ಆರಂಭಿಸಲು ಕೈ ನಾಯಕರು ನಿರ್ಧರಿಸಿದ್ದಾರೆ. 27ರಂದು ರಾಮನಗರದಿಂದ ಆರಂಭವಾಗಿ ಏಪ್ರಿಲ್ 3ರಂದು ಬೆಂಗಳೂರಿನ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಮುಕ್ತಾಯವಾಗಲಿದೆ. ಪರಿಷ್ಕೃತ ಸ್ವರೂಪದ ಪಾದಯಾತ್ರೆ ಬಗ್ಗೆ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ವಿವರಣೆ ನೀಡಿದ ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾ ರೆಡ್ಡಿ, ಫೆ.27ರಂದು ರಾಮನಗರದಿಂದ ಆರಂಭವಾಗಿ ಬಿಡದಿ ತಲುಪಿ ಅಲ್ಲಿ ತಂಗಲಾಗುವುದು. ನಂತರ 28ರಂದು ಬಿಡದಿಯಿಂದ ಬೆಂಗಳೂರಿಗೆ ಬರಲಾಗುವುದು. ನಂತರ ಬೆಂಗಳೂರಿನಲ್ಲಿ 3 ದಿನ ಪಾದಯಾತ್ರೆ ಮಾಡಲಾಗುವುದು. ಈ ಪಾದಯಾತ್ರೆ ಕೆಂಗೇರಿ ತಲುಪುವ ಮೂಲಕ ಬೆಂಗಳೂರು ಪ್ರವೇಶಿಸಲಿದೆ ಎಂದರು.
ಡಬಲ್ ಇಂಜಿನ್ ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಮೇಕೆದಾಟು ಯೋಜನೆಗೆ ಪರಿಸರ ಅನುಮತಿ ಪಡೆಯಲು ಈ ಡಬ್ಬಲ್ ಇಂಜಿನ್ ಸರ್ಕಾರದಿಂದ ಸಾಧ್ಯವಾಗಿಲ್ಲ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಲೇವಡಿ ಮಾಡಿದ್ದಾರೆ. ಮೇಕೆದಾಟು ಯೋಜನೆಗೆ ಆಗ್ರಹಿಸಿ ದೆಹಲಿಯಲ್ಲಿ ಬಿಜೆಪಿ ನಾಯಕರು ನಮ್ಮ ಜತೆ ಸೇರಿ ಪ್ರತಿಭಟಿಸಿದ್ದರು. ಅಂದು ನಮ್ಮ ಜತೆ ಹೋರಾಟ ಮಾಡಿದವರು ಇಂದು ಯೋಜನೆ ಜಾರಿ ವಿಚಾರದಲ್ಲಿ ಮೌನವಾಗಿರುವುದೇಕೆ? ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪ್ರಶ್ನಿಸಿದರು.
ಪಾದಯಾತ್ರೆ ಮಾರ್ಗ: ಕೆಂಗೇರಿಯಿಂದ ನಾಯಂಡನಹಳ್ಳಿ, ಬನಶಂಕರಿ ದೇವಸ್ಥಾನ, ಜಯದೇವ ಆಸ್ಪತ್ರೆ, ಬಿಟಿಎಂ, ಕೋರಮಂಗಲ, ಹಲಸೂರು, ಟಿವಿ ಟವರ್ ಮೂಲಕ ಅರಮನೆ ಮೈದಾನದವರೆಗೆ. ನಂತರ ಸ್ಯಾಂಕಿ ಟ್ಯಾಂಕ್, ಮಲ್ಲೇಶ್ವರ, ಶೇಷಾದ್ರಿಪುರ, ರೈಲ್ವೆ ನಿಲ್ದಾಣ, ಚಾಮರಾಜಪೇಟೆ, ಅಲ್ಲಿಂದ ಬಸವನಗುಡಿ ನ್ಯಾಷನಲ್ ಕಾಲೇಜು ಮೈದಾನಕ್ಕೆ ತಲುಪಲಿದೆ. ಪರಿಷ್ಕರಣೆಗೊಂಡ ಪಾದಯಾತ್ರೆ ಮಲ್ಲೇಶ್ವರದಲ್ಲಿ ಹಾದುಹೋಗಲಿದೆ. ಸಚಿವ ಅಶ್ವತ್ಥನಾರಾಯಣ್ ಅವರನ್ನು ಗುರಿಯಾಗಿಸಿ ಯಾತ್ರೆಗೆ ಹೆಚ್ಚಿನ ಮಹತ್ವ ನೀಡಲಾಗಿದೆ.