ಫೇಸ್​​ಬುಕ್​​ ಗೆಳತಿಗೆ ಸಿನಿಮಾ ನಟಿ ಮಾಡುವ ಆಮಿಷ: ಹಣ, ಚಿನ್ನಾಭರಣ ದೋಚಿದ್ದ ನಕಲಿ ಫೋಟೋಗ್ರಾಫರ್ ಬಂಧನ!

FilmFB
Published on

ಬೆಂಗಳೂರು: ಸಿನಿಮಾ ನಟಿ ಮಾಡುವ ಆಮಿಷವೊಡ್ಡಿ ವಿದ್ಯಾರ್ಥಿನಿಯೊಬ್ಬಳಿಂದ ಚಿನ್ನಾಭರಣ ಹಾಗೂ ಹಣ ಪಡೆದು ವಂಚಿಸಿದ್ದ ಆರೋಪದಲ್ಲಿ ನಕಲಿ ಫೋಟೋಗ್ರಾಫರ್‌ನನ್ನು ದಾಬಸ್‌ಪೇಟೆ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.

ಎಲೆಕ್ಟ್ರಾನಿಕ್ ಸಿಟಿ ನಿವಾಸಿ ಓಂಸಾಯಿಮಹದೇವ್ (31) ಬಂಧಿತ ಆರೋಪಿ. ಸೋಂಪುರ ಹೋಬಳಿ ಎಡೇಹಳ್ಳಿ ಗ್ರಾಮದ ಚೈತ್ರಾ (16) ವಂಚನೆಗೊಳಗಾದ ವಿದ್ಯಾರ್ಥಿನಿ.

ಫೇಸ್‌ಬುಕ್‌ನಲ್ಲಿ ಪರಿಚಯ: ಪಟ್ಟಣದ ಖಾಸಗಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದ ಚೈತ್ರಾಗೆ ಫೇಸ್‌ಬುಕ್‌ನಲ್ಲಿ ಆರೋಪಿ ಪರಿಚಯವಾಗಿತ್ತು. ನಾನೊಬ್ಬ ಸಿನಿಮಾ ಫೋಟೋಗ್ರಾಫರ್ ಎಂದು ಪರಿಚಯಿಸಿಕೊಂಡಿದ್ದ ಆರೋಪಿ, ಸಿನಿಮಾದಲ್ಲಿ ನಟಿಸುವ ಅವಕಾಶ ಕೊಡಿಸುತ್ತೇನೆ ಎಂದು ಆಮಿಷ ತೋರಿಸಿದ್ದ ಎನ್ನಲಾಗಿದೆ. ಬಾಲ್ಯದಿಂದಲೂ ನಟಿಯಾಗಬೇಕೆಂಬ ಕನಸುಕಂಡಿದ್ದ ವಿದ್ಯಾರ್ಥಿನಿ ಸುಲಭವಾಗಿ ವಂಚಕನ ಬಲೆಗೆ ಬಿದ್ದಿದ್ದಳು.

ಲಕ್ಷಾಂತರ ರೂ.ವಂಚನೆ: ಸಿನಿಮಾವೊಂದಕ್ಕೆ ಅವಕಾಶ ಬಂದಿದೆ ಇದಕ್ಕೆ ಸ್ವಲ್ಪ ಹಣಬೇಕಾಗುತ್ತದೆ ಎಂದು ಪುಸಲಾಯಿಸಿದ ಆರೋಪಿ ವಿದ್ಯಾರ್ಥಿನಿಯಿಂದ 80 ಗ್ರಾಂ ಚಿನ್ನಾಭರಣ ಹಾಗೂ 1.10 ಲಕ್ಷ ರೂ.ನಗದು ಪಡೆದುಕೊಂಡಿದ್ದ. ಕೆಲ ದಿನದ ಹಿಂದೆ ವಿದ್ಯಾರ್ಥಿನಿ ಪಾಲಕರಿಗೆ ಮನೆಯಲ್ಲಿದ್ದ ಚಿನ್ನಾಭರಣ ಹಾಗೂ ಹಣ ಕಾಣದಿರುವುದು ಗಮನಕ್ಕೆ ಬಂದಿತ್ತು. ಈ ಬಗ್ಗೆ ವಿಚಾರಿಸಿದಾಗ ವಂಚಕ ಓಂಸಾಯಿ ಮಹದೇವ್‌ನ ಬಗ್ಗೆ ಚೈತ್ರಾ ಬಾಯ್ಬಿಟ್ಟಿದ್ದಳು.

ಈ ಸಂಬಂಧ ದಾಬಸ್‌ಪೇಟೆ ಠಾಣೆಯಲ್ಲಿ ಚೈತ್ರಾ ಪಾಲಕರು ವಂಚನೆ ದೂರು ದಾಖಲಿಸಿದ್ದರು. ಆರಕ್ಷಕ ಉಪ ನೀರಿಕ್ಷಕ ಎಂ.ಎನ್ ಮುರಳಿ ನೇತೃತ್ವದಲ್ಲಿ ತನಿಖೆ ಆರಂಭಿಸಿದ ಪೊಲೀಸರು ತಲೆಮರೆಸಿಕೊಂಡಿದ್ದ ಆರೋಪಿಯನ್ನು ಬೆಂಗಳೂರಿನಲ್ಲಿ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net