ಹಿಂದಿನ ಸರ್ಕಾರವನ್ನು ದೂರಿದ ದೆಹಲಿ ಸಿಎಂ; ತೃತೀಯ ಲಿಂಗಿಗಳಿಗೆ ಉಚಿತ ಬಸ್ ಪ್ರಯಾಣ ಘೋಷಣೆ!

Untitled design (20)
Published on

ಹೊಸದಿಲ್ಲಿ: ದೆಹಲಿ ಸಾರಿಗೆ ಸಂಸ್ಥೆಯ ಬಸ್‌ಗಳಲ್ಲಿ ತೃತೀಯ ಲಿಂಗಿಗಳಿಗೆ ಉಚಿತ ಪ್ರಯಾಣ ಘೋಷಿಸಿದ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ವೀಡಿಯೊ ಮೂಲಕ ಈ ಸಂದೇಶ ನೀಡಿದ್ದಾರೆ. ದೇಶದಲ್ಲಿ ಈ ಹಿಂದಿನ ಸರ್ಕಾರಗಳು ಟ್ರಾನ್ಸ್ಜೆಂಡರ್​ ಸಮುದಾಯಕ್ಕಾಗಿ ಯಾವುದೇ ರೀತಿಯ ಕೆಲಸ ಮಾಡಿಲ್ಲ ಎಂದು ದೂರಿದರು.

ದೆಹಲಿಯಲ್ಲಿ ತೃತೀಯಲಿಂಗಿಗಳಿಗೆ ಉಚಿತ ಬಸ್ ಪ್ರಯಾಣದ ಕುರಿತು ಮುಂದಿನ ಕೆಲವು ವಾರಗಳಲ್ಲಿ ಅಧಿಸೂಚನೆಯನ್ನು ಹೊರಡಿಸಲಾಗುವುದು ಎಂದು ಭರವಸೆ ನೀಡಿದ ಸಿಎಂ ಕೇಜ್ರಿವಾಲ್, ದೆಹಲಿ ಸರಕಾರವು ತೃತೀಯಲಿಂಗಿ ಸಮುದಾಯಕ್ಕಾಗಿ ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದೆ ಎಂಬ ವಿಷಯವನ್ನು ಹಂಚಿಕೊಳ್ಳಲು ನನಗೆ ಬಹಳ ಸಂತೋಷವಾಗಿದೆ. ಈ ಸಮುದಾಯಕ್ಕೆ ಸೇರಿದ ಜನರು ಯಾವುದೇ ವೆಚ್ಚವಿಲ್ಲದೆ ಪ್ರಯಾಣಿಸಲು ಈಗ ಸುಲಭವಾಗಿದೆ ಎಂದಿದ್ದಾರೆ.

ಕ್ಯಾಬಿನೆಟ್ ಸಭೆಯಲ್ಲಿ ಪ್ರಸ್ತಾವನೆಯನ್ನು ತರಲಾಗುವುದು. ಕ್ಯಾಬಿನೆಟ್ ಅನುಮೋದನೆ ನೀಡಿದ ನಂತರ, ಶೀಘ್ರವೇ ಇದನ್ನು ಜಾರಿಗೊಳಿಸಲಾಗುವುದು. ಸಮಾಜದಲ್ಲಿ ಟ್ರಾನ್ಸ್ಜೆಂಡರ್ ಸಮುದಾಯವನ್ನು ಹೆಚ್ಚಾಗಿ ನಿರ್ಲಕ್ಷಿಸಲಾಗಿದೆ. ಹೀಗಾಗಬಾರದು, ಅವರೂ ಮನುಷ್ಯರೇ, ಅವರಿಗೂ ಸಮಾನ ಹಕ್ಕುಗಳಿವೆ ಎಂಬುದನ್ನು ಒತ್ತಿ ಹೇಳಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net