

ನವದೆಹಲಿ: ದೆಹಲಿಯ ಕೆಂಪು ಕೋಟೆ ಮೆಟ್ರೋ ನಿಲ್ದಾಣದ ಬಳಿ ಭೀಕರ ಕಾರು ಸ್ಫೋಟ(Delhi car blast) ಸಂಭವಿಸಿದೆ. ನಿಲ್ದಾಣದ ಗೇಟ್ 1 ಬಳಿ ಕಾರಿನಲ್ಲಿ ಸ್ಫೋಟ ಸಂಭವಿಸಿದ್ದು, 10 ಜನರು ಸಾವನ್ನಪ್ಪಿದರು ಮತ್ತು ಹಲವರು ಗಾಯಗೊಂಡಿದ್ದಾರೆ.
ಈ ಸ್ಟೋಟದ ಬಗ್ಗೆ ಸ್ಥಳದಲ್ಲಿದ್ದ ಪ್ರತ್ಯಕ್ಷದರ್ಶಿಗಳು ದುರಂತದ ಬಗ್ಗೆ ಮಾತನಾಡಿದ್ದು, ನನ್ನ ಜೀವನದಲ್ಲಿ ಇಷ್ಟೊಂದು ದೊಡ್ಡ ಸ್ಫೋಟವನ್ನು ನಾನು ಎಂದಿಗೂ ಕೇಳಿಲ್ಲ. ಅಲ್ಲದೆ, ಸ್ಫೋಟದಿಂದಾಗಿ ನಾನು ಮೂರು ಬಾರಿ ಬಿದ್ದೆ. ನಾವೆಲ್ಲರೂ ಸಾಯುತ್ತೇವೆಯೇನೋ ಎಂಬಂತೆ ಭಾಸವಾಯಿತು ಎಂದು ಪ್ರತ್ಯಕ್ಷದರ್ಶಿಯೊಬ್ಬರು ಸುದ್ದಿ ಸಂಸ್ಥೆ ANI ಗೆ ತಿಳಿಸಿದ್ದಾರೆ.
ಈ ಬಗ್ಗೆ ಮಾತನಾಡಿರುವ ಸ್ಥಳೀಯ ನಿವಾಸಿ ರಾಜಧರ್ ಪಾಂಡೆ, ನನ್ನ ಮನೆಯಿಂದ ಜ್ವಾಲೆಗಳು ಬರುವುದನ್ನು ನಾನು ನೋಡಿದೆ ಮತ್ತು ನಂತರ ಏನಾಯಿತು ಎಂದು ನೋಡಲು ಕೆಳಗೆ ಇಳಿದೆ. ದೊಡ್ಡ ಸ್ಫೋಟದ ಶಬ್ದ ಕೇಳಿಸಿತು. ನಾನು ಹತ್ತಿರದಲ್ಲಿ ವಾಸಿಸುತ್ತಿದ್ದೇನೆ ಎಂದು ಹೇಳಿದ್ದಾರೆ.
ನನ್ನ ಮುಂದೆ ಇದ್ದ ಕಾರು ಸುಮಾರು ಎರಡು ಅಡಿ ದೂರದಲ್ಲಿತ್ತು. ಅದರಲ್ಲಿ ಬಾಂಬ್ ಇದೆಯೋ ಅಥವಾ ಇನ್ನೇನೋ ಇದೆಯೋ ನನಗೆ ತಿಳಿದಿಲ್ಲ. ಆದರೆ ಇದು ಸ್ಫೋಟಗೊಂಡಿದೆ. ಅದು ಸ್ವಿಫ್ಟ್ ಡಿಜೈರ್ ಕಾರು ಎಂದು ಮತ್ತೊಬ್ಬ ಪ್ರತ್ಯಕ್ಷದರ್ಶಿ ಹೇಳಿದ್ದಾರೆ. ನಾನು ಇಲ್ಲಿ ನನ್ನ ಕಾರಿನಲ್ಲಿ ಕುಳಿತಿದ್ದೆ, ಸಂಜೆ 7 ಗಂಟೆಗೆ ಸ್ಫೋಟ ಸಂಭವಿಸಿದೆ. ನಾನು ಕಾರಿನಿಂದ ಇಳಿದು ಸ್ಥಳದಿಂದ ತಪ್ಪಿಸಿಕೊಂಡೆ ಎಂದು ಮತ್ತೊಬ್ಬರು ತಿಳಿಸಿದ್ದಾರೆ.
ಬಾಂಬ್ ಸ್ಟೋಟದಲ್ಲಿ ಗಾಯಾಳುಗಳನ್ನು ಲೋಕ ನಾಯಕ್ ಜೈ ಪ್ರಕಾಶ್ (ಎಲ್‌ಎನ್‌ಜೆಪಿ) ಆಸ್ಪತ್ರೆಗೆ ದಾಖಲಿಸಲಾಗಿದೆ. ಇಲ್ಲಿಯವರೆಗೆ 10 ಮಂದಿ ಸಾವನ್ನಪ್ಪಿದ್ದರೆ, 20 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಈ ಪ್ರದೇಶವು ತುಂಬಾ ಜನದಟ್ಟಣೆಯಿಂದ ಕೂಡಿರುವುದರಿಂದ ಮತ್ತು ಇದು ಕಚೇರಿ ಸಮಯವೂ ಆಗಿರುವುದರಿಂದ, ಪ್ರದೇಶದ ಸುತ್ತಮುತ್ತಲ ಪ್ರದೇಶಗಳಲ್ಲಿ ಅನೇಕ ಜನರು ಇರುವ ಸಾಧ್ಯತೆಯಿದೆ.
ಅಲ್ಲದೆ, ಮುಂಬೈ ಮತ್ತು ಎನ್‌ಸಿಆರ್ ನಗರಗಳಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ಉತ್ತರ ಪ್ರದೇಶ ಪೊಲೀಸರಿಗೆ ಜಾಗರೂಕರಾಗಿರಲು ಸೂಚನೆ ನೀಡಲಾಗಿದೆ. ಎನ್‌ಸಿಆರ್‌ನಲ್ಲಿ ವಾಹನಗಳ ತಪಾಸಣೆಗೆ ನಿರ್ದೇಶನಗಳನ್ನು ನೀಡಲಾಗಿದೆ. ರಾಜ್ಯದ ಉಳಿದ ಭಾಗಗಳಲ್ಲಿ ಪ್ರಮುಖ ಸ್ಥಳಗಳಲ್ಲಿ ಜಾಗರೂಕರಾಗಿರಲು ಪೊಲೀಸರಿಗೆ ಸೂಚನೆ ನೀಡಿದ್ದಾರೆ. (ಏಜೆನ್ಸೀಸ್)