

ನವದೆಹಲಿ: ದೆಹಲಿಯ ಐತಿಹಾಸಿಕ ಕೆಂಪುಕೋಟೆಯ ಮೆಟ್ರೋ ನಿಲ್ದಾಣದ ಬಳಿ ಸಂಜೆ 6.30ರ ಸುಮಾರಿಗೆ ಕಾರೊಂದು ಸ್ಫೋಟಗೊಂಡು(Car explosion) 8 ಮಂದಿ ಸಾವನ್ನಪ್ಪಿ, 24 ಜನ ಗಾಯಗೊಂಡ ಹಿನ್ನೆಲೆ ಭಯೋತ್ಪಾದನೆ ಕೃತ್ಯ ಶಂಕೆ ವ್ಯಕ್ತವಾಗಿದೆ.
ಈ ಕುರಿತು ಕೇಂದ್ರ ಸರ್ಕಾರ ದೇಶಾದ್ಯಂತ ಪ್ರಮುಖ ನಗರಗಳಲ್ಲಿ ಹೈ ಅಲರ್ಟ್ ಘೋಷಣೆ ಮಾಡಿದೆ. ಆ ನಗರಗಳಲ್ಲಿ ಭದ್ರತೆಯನ್ನು ಹೆಚ್ಚಿಸುವಂತೆ ಸೂಚಿಸಿದೆ. ನಗರದ ಸೂಕ್ಷ್ಮ ಸ್ಥಳಗಳಲ್ಲಿ ಕಟ್ಟೆಚ್ಚರ ವಹಿಸುವಂತೆ ರಾಜ್ಯಗಳಿಗೆ ಸೂಚನೆ ನೀಡಿದೆ.
ಘಟನೆ ಕುರಿತು ಪ್ರತ್ಯಕ್ಷ ದರ್ಶಿ ವಿಜೇಂದರ್ ಸಿಂಗ್ ಎಂಬುವರು ಮಾತನಾಡಿದ್ದು, ಇದ್ದಕ್ಕಿದ್ದಂತೆ ದೊಡ್ಡದಾದ ಶಬ್ದ ಕೇಳಿಸಿತ್ತು. ಅಂಗಡಿಯಿಂದ ಹೊರ ಬಂದು ನೋಡಿದಾಗ, ಎಲ್ಲೆಡೆ ಬೆಂಕಿ ಆವರಿಸಿಕೊಂಡಿತ್ತು. 7 ರಿಂದ 7.10ರ ಸಮಯದಲ್ಲಿ ಈ ಸ್ಪೋಟ ಸಂಭವಿಸಿದೆ. ಆ ಬಳಿಕ ಇಲ್ಲಿದ್ದ ಕಾರುಗಳು ಹೊತ್ತಿ ಉರಿದಿವೆ. ಇದಾದ ಬಳಿಕ ಸ್ಥಳೀಯರು ಪೊಲೀಸರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ 20 ನಿಮಿಷದ ಒಳಗಾಗಿ ಸ್ಥಳಕ್ಕೆ ಪೊಲೀಸರು ಆಗಮಿಸಿದ್ದಾರೆ ಎಂದು ಹೇಳಿದ್ದಾರೆ.
ಈ ಕುರಿತು ಮಾತನಾಡಿರುವ ದೆಹಲಿ ಪೊಲೀಸ್ ಅಧಿಕಾರಿಯೊಬ್ಬರು, ಈ ಕುರಿತು ತನಿಖೆ ನಡೆಯುತ್ತಿದೆ. ಈಗಲೇ ಏನನ್ನೂ ಹೇಳಲಾಗುವುದಿಲ್ಲ. ಭಯೋತ್ಪಾದಕ ಕೃತ್ಯಗಳನ್ನು ತಳ್ಳಿಹಾಕಲಾಗುವುದಿಲ್ಲ ಎಂದು ಹೇಳಿದ್ದಾರೆ.
ಘಟನೆಯ ಹಿನ್ನೆಲೆ
ಕೆಂಪುಕೋಟೆಯ ಮೆಟ್ರೋ ಸ್ಟೇಷನ್ ಬಳಿ ಇಂದು(ನ. 10) ಸಂಜೆ 6.30ರ ಸುಮಾರಿಗೆ ಕಾರೊಂದು ಸ್ಫೋಟಗೊಂಡಿದ್ದು, ಪಕ್ಕದಲ್ಲಿ 7ರಿಂದ 8 ಕಾರುಗಳು ಬೆಂಕಿಗಾಹುತಿಯಾಗಿವೆ. ಘಟನೆಯಲ್ಲಿ 8 ಮಂದಿ ಮೃತಪಟ್ಟಿದ್ದು, ಸುಮಾರು ಜನ ಗಾಯಗೊಂಡಿದ್ದಾರೆ.
ಮೆಟ್ರೋ ನಿಲ್ದಾಣದ ಗೇಟ್ ಸಂಖ್ಯೆ 1 ರ ಬಳಿ ಕಾರಿನಲ್ಲಿ ಸ್ಫೋಟ ಸಂಭವಿಸಿದೆ. ನಂತರ ಪಕ್ಕದಲ್ಲಿದ್ದ 7 ರಿಂದ 8 ವಾಹನಗಳು ಸಹ ಬೆಂಕಿಗೆ ಆಹುತಿಯಾಗಿ ಹಾನಿಯಾಗಿವೆ. ತಕ್ಷಣ ಸ್ಥಳಕ್ಕೆ ಸುಮಾರು 20 ಅಗ್ನಿಶಾಮಕದಳ ವಾಹನಗಳು ಧಾವಿಸಿ ಬೆಂಕಿಯನ್ನು ನಂದಿಸಿವೆ.
ಗಾಯಾಳುಗಳಮನ್ನು ಹತ್ತಿರದ ಎಲ್ಎನ್ಜೆಪಿ ಆಸ್ಪತ್ರೆಗೆ ದಾಖಲಿಸಲಾಗಿದೆ. ದೆಹಲಿ ಪೊಲೀಸರ ವಿಶೇಷ ದಳವು ಘಟನಾ ಸ್ಥಳಕ್ಕೆ ತಲುಪಿದ್ದು ಪರಿಶೀಲಿಸುತ್ತಿದ್ದಾರೆ. (ಏಜೆನ್ಸೀಸ್)