ಬಿಹಾರ ಚುನಾವಣೆ: ಮೊದಲ ಹಂತದ ಮತದಾನದ ಲಿಂಗವಾರು ಡೇಟಾ ಬಹಿರಂಗಪಡಿಸದ ಚು. ಆಯೋಗ; ತೇಜಸ್ವಿ ಯಾದವ್ ಕಿಡಿ| Tejashwi Yadav

ವಿಜಯವಾಣಿ - 2025-11-10T193209.556
Published on

ಪಾಟ್ನಾ: ಬಿಹಾರ ಚುನಾವಣೆಗೆ ನಾಳೆ ಎರಡನೇ ಮತ್ತು ಕೊನೆಯ ಹಂತದ ಮತದಾನ ನಡೆಯಲಿದ್ದು, ಇದುವರೆಗೂ ಮೊದಲ ಹಂತದ ಮತದಾನದ ಲಿಂಗವಾರು ಡೇಟಾವನ್ನು ಬಹಿರಂಗಪಡಿಸದ ಚುನಾವಣೆ ಆಯೋಗದ ವಿರುದ್ಧ ಆರ್​ಜೆಡಿ ನಾಯಕ ಮತ್ತು ಸಿಎಂ ಅಭ್ಯರ್ಥಿ ತೇಜಸ್ವಿ ಯಾದವ್(Tejashwi Yadav) ಸೋಮವಾರ(ನ. 10) ವಾಗ್ದಾಳಿ ನಡೆಸಿದ್ದಾರೆ.

ಈ ಕುರಿತು ಪಾಟ್ನಾದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿರುವ ಅವರು, ವಿಧಾನಸಭೆ ಚುನಾವಣೆಯ ಮೊದಲ ಹಂತದ ಮತದಾನ ನ. 06ರಂದು ನಡೆದು ನಾಲ್ಕು ದಿನಗಳು ಕಳೆದರೂ,  ಮತ ಚಲಾಯಿಸಿದ ಮತದಾರರ ಲಿಂಗವಾರು ಡೇಟಾವನ್ನು ಚುನಾವಣಾ ಆಯೋಗ ಈವರೆಗೂ ಬಹಿರಂಗಪಡಿಸಿಲ್ಲ. ಈ ರೀತಿ ಬಹಿರಂಗ ಪಡಿಸದೇ ಇರುವುದು ಇದೇ ಮೊದಲು. ಈ ಹಿಂದಿನ ಚುನಾವಣೆಗಳಲ್ಲಿ ತಕ್ಷಣವೇ ಬಿಡುಗಡೆ ಮಾಡಲಾಗುತ್ತಿತ್ತು ಎಂದು ಈಗ ಯಾಕೆ ಬಹಿರಂಗಪಡಿಸಿಲ್ಲ? ಇದು ಮತಗಳ್ಳತನದ ಭಾಗವಾಗಿದ್ದರೇ ಸುಮ್ಮನಿರುವುದಿಲ್ಲ ಎಂದು ಕಿಡಿಕಾರಿದ್ದಾರೆ.

ಚುನಾವಣೆ ಆಯೋಗವೂ ಪ್ರಧಾನಿ ಮೋದಿ ಮತ್ತು ಅಮಿತ್ ಶಾ ನೇತೃತ್ವದಲ್ಲಿ ಸರಿಯಾಗಿ ಕಾರ್ಯನಿರ್ವಹಿಸುವುದನ್ನು ನಿಲ್ಲಿಸಿದೆ ಎಂದು ಆರೋಪಿಸಿರುವ ಅವರು, ಒಂದು ಚುನಾವಣೆ ಅಧಿಕಾರಿಗಳು ಮೋದಿ, ಶಾ ಅವರ ಬೆಂಬಲದಿಂದ ತೊಂದರೆ ಸೃಷ್ಟಿಸಲು ಪ್ರಯತ್ನಿಸಿದರೆ ಭೀಕರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಬಿಜೆಪಿ ಆಡಳಿತವಿರುವ ರಾಜ್ಯಗಳಿಂದ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಿದ್ದಾರೆ. ಸುಮಾರು ಶೇ. 68 ರಷ್ಟು ಪೊಲೀಸ್ ವೀಕ್ಷಕರು ಬಿಜೆಪಿ ಆಡಳಿತವಿರುವ ರಾಜ್ಯಗಳಿಂದ ಬಂದವರು. ಯಾಕೆ ಹೀಗೆ?, ನಾವು ಅವರ ಮೇಲೆ ನಿಗಾ ಇಡುತ್ತಿದ್ದೇವೆ ಎಂದು ಇದೇ ವೇಳೆ ತಿಳಿಸಿದ್ದಾರೆ.

ಕೇಂದ್ರ ಗೃಹಸಚಿವ ಅಮಿತ್ ಶಾ ಸೇರಿದಂತೆ ಹೊರಗಿನವರು ಬಿಹಾರವನ್ನು ನಿಯಂತ್ರಿಸಲು ಬಯಸುತ್ತಾರೆ. ಆದರೆ ಬಿಹಾರದ ಜನ ಅದಕ್ಕೆ ಅವಕಾಶ ನೀಡುವುದಿಲ್ಲ. ಪ್ರಧಾನಿ ನರೇಂದ್ರ ಮೋದಿ ತಮ್ಮ ಚುನಾವಣಾ ಪ್ರಚಾರದ ಸಮಯದಲ್ಲಿ ಬಿಹಾರದಲ್ಲಿ ನಿರುದ್ಯೋಗ ಮತ್ತು ವಲಸೆಯಂತಹ ವಿಷಯಗಳ ಬಗ್ಗೆ ಮಾತನಾಡಲಿಲ್ಲ. ನಕಾರಾತ್ಮಕ ರಾಜಕೀಯದಲ್ಲಿ ತೊಡಗಿದ್ದರು ಆಕ್ರೋಶ ವ್ಯಕ್ತಪಡಿಸಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net