ದೆಹಲಿಯ ಕೆಂಪುಕೋಟೆಯ ಮೆಟ್ರೋ ಸ್ಟೇಷನ್ ಬಳಿ ಕಾರು ಸ್ಫೋಟ; 8 ಮಂದಿ ಸಾವು, ಹಲವರಿಗೆ ಗಾಯ; ಹೈ ಅಲರ್ಟ್​ ಘೋಷಣೆ| Car explosion

ವಿಜಯವಾಣಿ - 2025-11-10T195912.773
Published on

ನವದೆಹಲಿ: ದೆಹಲಿಯ ಕೆಂಪುಕೋಟೆಯ ಮೆಟ್ರೋ ಸ್ಟೇಷನ್ ಬಳಿ ಇಂದು(ನ. 10) ಸಂಜೆ 6.30ರ ಸುಮಾರಿಗೆ ಕಾರೊಂದು ಸ್ಫೋಟಗೊಂಡಿದ್ದು(Car explosion), ಪಕ್ಕದಲ್ಲಿದ್ದ 7ರಿಂದ 8 ಕಾರುಗಳು ಬೆಂಕಿಗಾಹುತಿಯಾಗಿವೆ. ಘಟನೆಯಲ್ಲಿ 8 ಮಂದಿ ಮೃತಪಟ್ಟಿದ್ದು, ಹಲವು ಜನ ಗಾಯಗೊಂಡಿದ್ದಾರೆ. ನಗರದಾದ್ಯಂತ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ ಎಂದು ವರದಿಯಾಗಿದೆ.

ಈ ಕುರಿತು ವರದಿ ಮಾಡಿರುವ ಎಎನ್​ಐ, ಮೆಟ್ರೋ ನಿಲ್ದಾಣದ ಗೇಟ್ ಸಂಖ್ಯೆ 1 ರ ಬಳಿ ಕಾರಿನಲ್ಲಿ ಸ್ಫೋಟ ಸಂಭವಿಸಿದೆ. ನಂತರ ಪಕ್ಕದಲ್ಲಿದ್ದ 7 ರಿಂದ 8 ವಾಹನಗಳು ಸಹ ಬೆಂಕಿಗೆ ಆಹುತಿಯಾಗಿವೆ. ತಕ್ಷಣ ಸ್ಥಳಕ್ಕೆ ಸುಮಾರು 20 ಅಗ್ನಿಶಾಮಕದಳ ವಾಹನಗಳು ಧಾವಿಸಿದ್ದು, ಬೆಂಕಿ ನಂದಿಸಲು ಹರಸಾಹಸ ಪಡುತ್ತಿವೆ ಎನ್ನಲಾಗಿದೆ. ಸ್ಪೋಟಕ್ಕೆ ಕಾರಣ ತಿಳಿದು ಬಂದಿಲ್ಲ.

ಘಟನೆ ಕುರಿತು ಪ್ರತ್ಯಕ್ಷ ದರ್ಶಿ ವಿಜೇಂದರ್ ಸಿಂಗ್ ಎಂಬುವರು ಮಾತನಾಡಿದ್ದು,  ಇದ್ದಕ್ಕಿದ್ದಂತೆ ದೊಡ್ಡದಾದ ಶಬ್ದ ಕೇಳಿಸಿತ್ತು. ಅಂಗಡಿಯಿಂದ ಹೊರ ಬಂದು ನೋಡಿದಾಗ, ಎಲ್ಲೆಡೆ ಬೆಂಕಿ ಆವರಿಸಿಕೊಂಡಿತ್ತು. 7 ರಿಂದ 7.10ರ ಸಮಯದಲ್ಲಿ ಈ ಸ್ಪೋಟ ಸಂಭವಿಸಿದೆ.  ಆ ಬಳಿಕ ಇಲ್ಲಿದ್ದ ಕಾರುಗಳು ಹೊತ್ತಿ ಉರಿದಿವೆ. ಇದಾದ ಬಳಿಕ ಸ್ಥಳೀಯರು ಪೊಲೀಸರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ 20 ನಿಮಿಷದ ಒಳಗಾಗಿ ಸ್ಥಳಕ್ಕೆ ಪೊಲೀಸರು ಆಗಮಿಸಿದ್ದಾರೆ ಎಂದು ಹೇಳಿದ್ದಾರೆ.

ಘಟನೆಯಲ್ಲಿ ಸದ್ಯ 8 ಮಂದಿ ಮೃತಪಟ್ಟಿದ್ದು, ಸಾವಿನ ಸಂಖ್ಯೆ ಹೆಚ್ಚಳವಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಗಾಯಾಳುಗಳನ್ನು ಎಲ್ಎನ್​​ಜೆಪಿ ಆಸ್ಪತ್ರೆಗೆ ದಾಖಲಿಸಲಾಗಿದೆ. ದೆಹಲಿ ಪೊಲೀಸರ ವಿಶೇಷ ದಳವು ಘಟನಾ ಸ್ಥಳಕ್ಕೆ ತಲುಪಿದ್ದು, ಸ್ಫೋಟದ ಸ್ಥಳವನ್ನು ಸುತ್ತುವರೆದಿದ್ದಾರೆ. ಹಳೆ ದೆಹಲಿ ಪ್ರದೇಶಗಳಿಂದ ಸಂಚಾರವನ್ನು ಬೇರೆಡೆಗೆ ತಿರುಗಿಸಲಾಗಿದೆ ಎಂದು ವರದಿಗಳು ಉಲ್ಲೇಖಿಸಿವೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net