ತೀವ್ರ ಹದಗೆಟ್ಟ ದೆಹಲಿ ವಾಯುಮಾಲಿನ್ಯ; ಮಕ್ಕಳು ಹಿರಿಯರು ಹೊರಬಾರದಂತೆ ಎಚ್ಚರಿಕೆ

delhi
Published on

ನವದೆಹಲಿ: ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ (ಸಿಪಿಸಿಬಿ) ಪ್ರಕಾರ ದೆಹಲಿಯ ಗಾಳಿಯ ಗುಣಮಟ್ಟವು ಮತ್ತೊಮ್ಮೆ‘ತೀವ್ರ ಹದೆಗಟ್ಟ’ ವರ್ಗಕ್ಕೆ ಬಂದಿದ್ದು, ವಾಯು ಗುಣಮಟ್ಟ ಸೂಚ್ಯಂಕವು (ಎಕ್ಯೂಐ) ಶನಿವಾರ ಬೆಳಗ್ಗೆ 8 ಗಂಟೆಗೆ 413 ಅಂಕ ದಾಖಲಾಗಿದೆ.

ತಾಪಮಾನದಲ್ಲಿನ ಕ್ರಮೇಣ ಕುಸಿತ, ಮಾಲಿನ್ಯ ಹಿಡಿದಿಟ್ಟುಕೊಳ್ಳುವ ಶಾಂತ ಗಾಳಿ ಹಾಗೂ ಪಂಜಾಬ್ ಮತ್ತು ಹರಿಯಾಣದಾದ್ಯಂತ ಕಟಾವಿನ ನಂತರ ಭತ್ತದ ಒಣಹುಲ್ಲು ಸುಡುವುದು ಸೇರಿದಂತೆ ಅನೇಕ ಸಂಗತಿಗಳಿಂದಾಗಿ ಕಳೆದ ಕೆಲವು ದಿನಗಳಿಂದ ಗಾಳಿಯ ಗುಣಮಟ್ಟವು ಕುಸಿಯುತ್ತಿದೆ. ಮಾಲಿನ್ಯದ ಹೆಚ್ಚಳ ನಿಯಂತ್ರಿಸಲು ಮತ್ತು ಎಕ್ಯೂಐ ಮಟ್ಟ ಕಡಿಮೆ ಮಾಡಲು ದೆಹಲಿ ಸರ್ಕಾರ ಪ್ರಯತ್ನಗಳನ್ನು ಹೆಚ್ಚಿಸಿದೆ. ರಾಷ್ಟ್ರೀಯ ರಾಜಧಾನಿಯನ್ನು ಆವರಿಸಿರುವ ಹೊಗೆಯ ಅಪಾಯಕಾರಿ ಪದರದೊಂದಿಗೆ ದೆಹಲಿಯ ಗಾಳಿಯ ಗುಣಮಟ್ಟವು ತೀವ್ರ ಹದಗೆಟ್ಟ ವರ್ಗಕ್ಕೆ ಶುಕ್ರವಾರವೇ ದಾಖಲಾಗಿದೆ. ಗಾಳಿಯ ಗುಣಮಟ್ಟ ಸೂಚ್ಯಂಕವು ಈಗಾಗಲೇ ಇಳಿಮುಖ ಪ್ರವೃತ್ತಿಯನ್ನು ತೋರಿಸುತ್ತಿದೆ ಎಂದು ಹೇಳಿರುವ ಕೇಂದ್ರ ಸರ್ಕಾರವು ಕಟ್ಟುನಿಟ್ಟಾದ ಕ್ರಮಗಳ ಅನುಷ್ಠಾನವನ್ನು ಮುಂದೂಡಿದೆ.

ದೆಹಲಿಯ ಪರಿಸರ ಸಚಿವ ಗೋಪಾಲ್ ರೈ ಅವರೊಂದಿಗೆ ಉನ್ನತ ಮಟ್ಟದ ಸಭೆ ನಡೆಸಿದ ಲೆಫ್ಟಿನೆಂಟ್ ಗವರ್ನರ್ ವಿಕೆ ಸಕ್ಸೇನಾ ಅವರು, ನಗರದ ಪರಿಸ್ಥಿತಿಯು ಅತ್ಯಂತ ಚಿಂತಾಜನಕವಾಗಿದೆ ಎಂದು ಹೇಳಿದ್ದಾರೆ. ಜನರು ಮನೆಯೊಳಗೆ ಇರುವಂತೆ ಮತ್ತು ವಿಶೇಷವಾಗಿ ಮಕ್ಕಳು ಮತ್ತು ಹಿರಿಯರು ಹೊರಗೆ ಬಾರದಂತೆ ಅವರು ಮನವಿ ಮಾಡಿದ್ದಾರೆ. ಹೊಗೆ-ನಿರೋಧಕ ಗನ್​ಗಳನ್ನು ನಿಯೋಜಿಸಲು ಮತ್ತು ‘ರೆಡ್ ಲೈಟ್ ಆನ್, ಗಾಡಿ ಆಫ್’ ಅಭಿಯಾನವನ್ನು ಪುನರಾರಂಭಿಸಲು ದೆಹಲಿ ಸರ್ಕಾರ ಹಾಗೂ ದೆಹಲಿ ಮಹಾನಗರ ಪಾಲಿಕೆಗಳು ಕ್ರಮ ಕೈಗೊಂಡಿವೆ. ಕೇಂದ್ರದ ಮಾಲಿನ್ಯ ನಿಯಂತ್ರಣ ಮಂಡಳಿಯು ದೆಹಲಿ ರಾಷ್ಟ್ರೀಯ ರಾಜಧಾನಿ ಪ್ರದೇಶದಲ್ಲಿ ಅನಿವಾರ್ಯವಲ್ಲದ ನಿರ್ಮಾಣ ಕಾರ್ಯ, ಕಲ್ಲು ಪುಡಿ ಮಾಡುವುದು ಮತ್ತು ಗಣಿಗಾರಿಕೆಯನ್ನು ಸ್ಥಗಿತಗೊಳಿಸುವಂತೆ ನಿರ್ದೇಶಿಸಿದೆ.

ಯಾವ ನಗರದಲ್ಲಿ ಎಷ್ಟು ಮಾಲಿನ್ಯ?

ಸ್ವಿಸ್ ಸಂಸ್ಥೆ ಐಕ್ಯುಎರ್ ಪ್ರಕಾರ ದೆಹಲಿಯು ಜಗತ್ತಿನ ಅತ್ಯಂತ ಮಾಲಿನ್ಯಯುಕ್ತ ನಗರವಾಗಿದೆ. ದೆಹಲಿಯ ಎಕ್ಯುಐ (ವಾಯು ಗುಣಮಟ್ಟ ಸೂಚ್ಯಂಕ) 565 ಇದೆ. ನಂತರದ ಸ್ಥಾನದಲ್ಲಿ ಪಾಕಿಸ್ತಾನದ ಲಾಹೋರ್ (277); ಕೋಲ್ಕತಾ (185); ಮುಂಬೈ (173); ಕುವೈತ್ ಸಿಟಿ (165); ಬಾಗ್ದಾದ್ (164); ಢಾಕಾ (162); ಜಕಾರ್ತಾ (158); ದೊಹಾ (153); ವುಹಾನ್ (153) ಇವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net