ಪತ್ರ ಬರೆದಿಟ್ಟು ಯುವಕ ನಾಪತ್ತೆ: ಪತ್ರ ಓದಿ ಬೆಚ್ಚಿಬಿದ್ದ ತಂದೆ-ತಾಯಿ ಪೊಲೀಸ್​ ಠಾಣೆಗೆ ದೌಡು!

Youth
Published on

ವಿಜಯವಾಡ: ಆಂಧ್ರ ಪ್ರದೇಶದ ಚಿತ್ತೂರಿನಲ್ಲಿ ಒಂದರ ಹಿಂದೆ ಒಂದು ವಿಚಿತ್ರ ಘಟನೆಗಳು ನಡೆಯುತ್ತಿರುವುದ ಜನರನ್ನು ಚಿಂತೆಗೆ ದೂಡಿದೆ. ಕೆಲ ದಿನಗಳ ಹಿಂದೆ ಮೌಢ್ಯಕ್ಕೆ ಬಿದ್ದೋ? ಅಥವಾ ಭ್ರಮೆಗೆ ಓಳಗಾಗಿಯೋ? ಮರಳಿ ಬರುತ್ತಾರೆಂಬ ನಂಬಿಕೆಯಿಂದ ಸುಶಿಕ್ಷಿತ ದಂಪತಿ ಬೆತ್ತಲೆ ಪೂಜೆ ಮಾಡಿ ತಮ್ಮ ಹೆಣ್ಣುಮಕ್ಕಳನ್ನು ಕೊಂದಿದ್ದರು. ಇದೀಗ ದೇವರ ಬಳಿ ಹೋಗುತ್ತಿದ್ದೇನೆಂದು ಪತ್ರ ಬರೆದಿಟ್ಟು ನಾಪತ್ತೆಯಾಗಿರುವುದು ಆತಂಕಕ್ಕೆ ದೂಡಿದೆ.

ಗಂಗಾವರಂ ವಲಯದ ಮಾರ್ಚೆಪಲ್ಲಿ ಗ್ರಾಮದ ಗಣೇಶ್​​ ಅಂತಿಮ ವರ್ಷದ ಪದವಿ ವಿದ್ಯಾರ್ಥಿ. ಜನವರಿ 21ರಿಂದ ಈ ಕಾಣೆಯಾಗಿದ್ದಾನೆ. ದೇವರ ಬಳಿ ಹೋಗುತ್ತಿದ್ದೇನೆಂದು ಪತ್ರ ಬರೆದಿಟ್ಟು ಗಣೇಶ್​ ನಾಪತ್ತೆಯಾಗಿದ್ದಾನೆ. ಇದೀಗ ಮನೆ ಬಿಟ್ಟು ಹೋಗಿರುವ ಮಗ ಬರುತ್ತಾನೋ? ಇಲ್ಲವೋ? ಎಂಬ ಚಿಂತೆಯಲ್ಲಿ ತಂದೆ-ತಾಯಿ ದಿನದೂಡುತ್ತಿದ್ದಾರೆ.

ಗಣೇಶ್​ ಬರೆದಿರುವ ಪತ್ರದ ಸಂಪೂರ್ಣ ಮಾಹಿತಿಗೆ ಬರುವುದಾದರೆ, ನಾನು ದೇವರ ಬಳಿಗೆ ಹೋಗುತ್ತಿದ್ದೇನೆ. ನಾನು ಕಾಣಲಿಲ್ಲ ಎಂದು ಯಾರು ಭಯ ಪಡಬೇಡಿ. ಚಿಂತಿಸಲು ಬೇಡಿ. ನನ್ನ ತಮ್ಮನಿಗೆ ಮಗನಾಗಿ ಮತ್ತೆ ಹುಟ್ಟಿ ಬರುತ್ತೇನೆಂದು ಬರೆದಿದ್ದಾನೆ. ಇದನ್ನು ನೋಡಿದ ತಂದೆ-ತಾಯಿ ಗಾಬರಿಗೊಂಡಿದ್ದು, ತಕ್ಷಣ ಪೊಲೀಸ್​ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾರೆ.

ಪೊಲೀಸರು ನಾಪತ್ತೆ ಪ್ರಕರಣವನ್ನು ದಾಖಲಿಸಿಕೊಂಡಿದ್ದು, ತನಿಖೆ ಆರಂಭಿಸಿದ್ದಾರೆ. ಸ್ಥಳೀಯರು ಹೇಳುವ ಪ್ರಕಾರ ಗಣೇಶ್​ಗೆ ದೇವರ ಮೇಲೆ ತುಂಬಾ ಭಕ್ತಿ ಇತ್ತಂತೆ. ಅಲ್ಲದೆ, ಮದವಪಲ್ಲಿಯಲ್ಲಿ ನಡೆದ ಘಟನೆಯ ಬಗ್ಗೆ ಆತ ತುಂಬಾ ಕಳವಳ ವ್ಯಕ್ತಪಡಿಸಿದ್ದನಂತೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಹುಡುಕಾಟದಲ್ಲಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net