

ಎಚ್.ಡಿ.ಕೋಟೆ: ಸಂವಿಧಾನ ರಕ್ಷಣೆಯಾಗಬೇಕಾದರೆ ಕೋಮುವಾದಿ ಬಿಜೆಪಿಯನ್ನು ಸೋಲಿಸಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ತಿಳಿಸಿದರು.
ಪಟ್ಟಣದ ಕನಕ ಭವನದಲ್ಲಿ ಮಂಗಳವಾರ ಏರ್ಪಡಿಸಿದ್ದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ, ರಾಷ್ಟ್ರೀಯ ವಿಚಾರಗಳನ್ನು ಚರ್ಚೆ ಮಾಡುವ ಪ್ರಮುಖವಾದ ಚುನಾವಣೆ ಲೋಕಸಭಾ ಚುನಾವಣೆಯಾಗಿದ್ದು, ನಾವೇನಾದರು ಎಡವಿದರೆ ಭಾರತದಲ್ಲಿ ಮತ್ತೆ ಚುನಾವಣೆ ನಡೆಯುವುದೇ ಕಷ್ಟ ಎಂದರು.
ಕೋಮುವಾದಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದರೆ ಸಂವಿಧಾನದ ಆಶಯಗಳು ಬುಡಮೇಲಾಗುತ್ತವೆ. ಹಾಗಾಗಿ ಯಾವುದೇ ಕಾರಣಕ್ಕೂ ಬಿಜೆಪಿ ಅಧಿಕಾರಕ್ಕೆ ಬಾರದ ರೀತಿಯಲ್ಲಿ ನಾವೆಲ್ಲರೂ ಕಾವಲು ಕಾಯಬೇಕು ಎಂದು ತಿಳಿಸಿದರು.
ಮಾಹಿತಿ ಹಕ್ಕು ಕಾಯ್ದೆಯನ್ನು ದೇಶದಲ್ಲಿ ಜಾರಿಗೆ ತಂದಿದ್ದು ಕಾಂಗ್ರೆಸ್ ಸರ್ಕಾರ, ಜನರಿಗೆ ಪ್ರಶ್ನೆ ಮಾಡುವ ಹಕ್ಕು ನೀಡಿತು. ಈ ದೇಶದ ಜನರ ಹಣ ಯಾವ ರೀತಿ ಖರ್ಚು ಆಗುತ್ತಿದೆ ಎಂಬುದನ್ನು ತಿಳಿದುಕೊಳ್ಳಲು ಮಾಡಿದ ಒಂದು ಪ್ರಬಲ ಅಸ್ತ್ರ ಮಾಹಿತಿ ಹಕ್ಕು ಕಾಯ್ದೆ. ಈ ಕಾಯ್ದೆಯನ್ನು ಬಿಜೆಪಿ ಸರ್ಕಾರ ದುರ್ಬಲಗೊಳಿಸಲು ಮುಂದಾಗಿದೆ ಎಂದರು.
ಈ ಲೋಕಸಭಾ ಚುನಾವಣೆಯನ್ನು ತಾಲೂಕಿನ ಜನರು ಸವಾಲಾಗಿ ಸ್ವೀಕರಿಸಬೇಕು. ಯುವಕರನ್ನು ರಾಜಕೀಯವಾಗಿ ಮುಂಚೂಣಿಗೆ ತರುವ ಏಕೈಕ ಪಕ್ಷ ಕಾಂಗ್ರೆಸ್. ಮೈಸೂರು ಮತ್ತು ಚಾಮರಾಜನಗರ ಅವಿಭಾಜ್ಯ ಜಿಲ್ಲೆಯಲ್ಲಿ ಯುವ ಶಾಸಕರ ಪಡೆಯೇ ಇದೆ. ಅಭಿವೃದ್ಧಿ ವಿಚಾರದಲ್ಲಿ ಒಟ್ಟಾಗಿ ಸೇರಿ ಅವಿಭಾಜ್ಯ ಜಿಲ್ಲೆಗೆ ಅಭಿವೃದ್ಧಿಗೆ ವಿಶೇಷವಾದ ಕಾರ್ಯ ಯೋಜನೆ ಮಾಡಬೇಕು ಎಂದು ಸಲಹೆ ನೀಡಿದರು.
ಚಾಮರಾಜನಗರ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಸುನೀಲ್ ಬೋಸ್ ಮಾತನಾಡಿ, ಕಾಂಗ್ರೆಸ್ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ನಂತರ ಚುನಾವಣಾ ಪೂರ್ವದಲ್ಲಿ ನೀಡಿದ ಎಲ್ಲ ಭರವಸೆಗಳನ್ನು ಈಡೇರಿಸಿದ್ದೇವೆ ಎಂದರು.
ಕ್ಷೇತ್ರದ ಎಲ್ಲ ಕಡೆ ಅಭ್ಯರ್ಥಿ ಬಂದು ಮತ ಕೇಳಲು ಸಾಧ್ಯವಿಲ್ಲ. ಕಾರ್ಯಕರ್ತರು ನಾವೇ ಅಭ್ಯರ್ಥಿ ಎಂದು ಪ್ರತಿ ಬೂತ್ ಮಟ್ಟದಲ್ಲಿ ಹೆಚ್ಚು ಮತಗಳು ಬೀಳಲು ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಶಾಸಕ ಅನಿಲ್ ಚಿಕ್ಕಮಾದು ಮಾತನಾಡಿ, ನನಗೆ ಶ್ರಮವಹಿಸಿ ಕೆಲಸ ಮಾಡಿ ಮತ ಕೊಡಿಸಿದ ರೀತಿಯಲ್ಲಿ ಲೋಕಸಭಾ ಚುನಾವಣೆಯಲ್ಲಿ ಸುನೀಲ್ ಬೋಸ್ ಅವರಿಗೆ ಇನ್ನೂ ಹೆಚ್ಚಿನ ರೀತಿಯಲ್ಲಿ ಸಹಕಾರ ನೀಡಬೇಕು ಎಂದರು.
ಯತೀಂದ್ರ ಸಿದ್ದರಾಮಯ್ಯ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಅವರು ಅಧಿಕಾರಕ್ಕೆ ಬರುವ ಮುಂಚೆ ದೇಶದ ನಿರುದ್ಯೋಗಿ ಯುವಕರಿಗೆ ಉದ್ಯೋಗ ಸೃಷ್ಟಿ ಮಾಡುತ್ತೇನೆ, ವಿದೇಶದಲ್ಲಿ ಇರುವ ದೇಶದ ಕಪ್ಪು ಹಣ ವಾಪಸ್ ತರುತ್ತೇನೆ ಎಂದು ಹೇಳಿದ್ದರು. ಆದರೆ ಹತ್ತು ವರ್ಷ ಅಧಿಕಾರ ನಡೆಸಿದರೂ ಅವರ ಮಾತು ನಿಜ ಆಗಲಿಲ್ಲ.
ಆದರೆ ಸಿದ್ದರಾಮಯ್ಯ ಅವರ ನೇತೃತ್ವದ ಕಾಂಗ್ರೆಸ್ ಸರ್ಕಾರ ಬಡವರ ಪರವಾಗಿ ಅಧಿಕಾರ ನಡೆಸಿದರು. ಚುನಾವಣಾ ಸಂದರ್ಭದಲ್ಲಿ ನೀಡಿದ ಭರವಸೆಗಳನ್ನು ಈಡೇರಿಸಿದ್ದೇವೆ. ಕೊಟ್ಟ ಮಾತಿನ ಪ್ರಕಾರ ನಡೆದುಕೊಂಡಿದ್ದೇವೆ ಎಂದರು.
ಶಾಸಕರಾದ ದರ್ಶನ್ ಧ್ರುವನಾರಾಯಣ, ಗಣೇಶ್‌ಪ್ರಸಾದ್, ಮಾಜಿ ಸಚಿವ ಕೋಟೆ ಎಂ.ಶಿವಣ್ಣ, ಮಾಜಿ ಸಂಸದ ಕಾಗಲವಾಡಿ ಶಿವಣ್ಣ, ಮಾಜಿ ಶಾಸಕರಾದ ನಂಜುಂಡಸ್ವಾಮಿ, ಸಂದೇಶ್ ನಾಗರಾಜು, ಭಾರತಿಶಂಕರ್, ವಾಲ್ಮೀಕಿ ನಿಗಮದ ಮಾಜಿ ಅಧ್ಯಕ್ಷ ಎಸ್.ಸಿ.ಬಸವರಾಜು, ಏಜಾಜ್‌ಪಾಷ, ಮನುಗನಹಳ್ಳಿ ಮಾದಪ್ಪ, ಹಿರೇಹಳ್ಳಿ ಸೋಮೇಶ್, ನಂದಿನಿ ಚಂದ್ರಶೇಖರ್, ಅಶೋಕ್, ಚಿಕ್ಕವೀರನಾಯಕ, ಎಚ್.ಸಿ.ನರಸಿಂಹಮೂರ್ತಿ, ಶಂಕರ್ ವನಸಿರಿ, ಕೃಷ್ಣೇಗೌಡ, ವರುಣಾ ಮಹೇಶ್, ಸ್ಟುಡಿಯೋ ಪ್ರಕಾಶ್, ರಂಗಸ್ವಾಮಿ, ಮಧುಕುಮಾರ್, ಈರೇಗೌಡ, ಕ್ಯಾತನಹಳ್ಳಿ ನಾಗರಾಜು, ಶ್ರೀನಿವಾಸ್, ಶಿವರಾಜು ಇದ್ದರು.