ಮಾನಹಾನಿಕಾರಕ ಹೇಳಿಕೆ: ಒಂದು ವರ್ಷದ ಬಳಿಕ ನಟ ನಾಗಾರ್ಜುನ ಬಳಿ ಕ್ಷಮೆ ಕೇಳಿದ ಸಚಿವೆ ಕೊಂಡ ಸುರೇಖಾ| Actor Nagarjuna

ವಿಜಯವಾಣಿ - 2025-11-12T221517.576
Published on

ಹೈದರಾಬಾದ್: ನಟ ಅಕ್ಕಿನೇನಿ ನಾಗಾರ್ಜುನ(Actor Nagarjuna) ಕುಟುಂಬದ ವಿರುದ್ಧ ಮಾನಹಾನಿಕಾರಕ ಹೇಳಿಕೆ ಪ್ರಕರಣ ಸಂಬಂಧ ಒಂದು ವರ್ಷದ ಬಳಿಕ ತೆಲಂಗಾಣದ ಅರಣ್ಯ ಸಚಿವೆ ಕೊಂಡಾ ಸುರೇಖಾ, ಎಕ್ಸ್​ನಲ್ಲಿ ಬಹಿರಂಗವಾಗಿ ನಟ ನಾಗಾರ್ಜುನ ಕುಟುಂಬದ ಕ್ಷಮೆ ಕೇಳಿದ್ದಾರೆ.

ಎಕ್ಸ್​ನಲ್ಲಿ ಈ ಕುರಿತು ಪೋಸ್ಟ್ ಹಾಕಿರುವ ಸುರೇಖಾ, ನಾಗಾರ್ಜುನ ಅವರಿಗೆ ಸಂಬಂಧಿಸಿದಂತೆ ನಾನು ನೀಡಿದ ಹೇಳಿಕೆಯು ಅವರಿಗೆ ಮತ್ತು ಅವರ ಕುಟುಂಬ ಸದಸ್ಯರಿಗೆ ನೋವುಂಟು ಮಾಡುವ ಉದ್ದೇಶವನ್ನು ಹೊಂದಿರಲಿಲ್ಲ. ಮಾನಹಾನಿ ಮಾಡುವ ಉದ್ದೇಶ ನನಗಿರಲಿಲ್ಲ ಎಂದು ನಾನು ಸ್ಪಷ್ಟಪಡಿಸಲು ಬಯಸುತ್ತೇನೆ. ನನ್ನ ಹೇಳಿಕೆಗಳಲ್ಲಿ ಅವರಿಗೆ ಸಂಬಂಧಿಸಿದಂತೆ ಯಾವುದೇ ಅನಪೇಕ್ಷಿತ ಅನಿಸಿಕೆ ಉಂಟಾಗಿದ್ದರೆ ಅದಕ್ಕೆ ವಿಷಾದಿಸುತ್ತೇನೆ ಮತ್ತು ಅದನ್ನು ಹಿಂಪಡೆಯುತ್ತೇನೆ ಎಂದು ಹೇಳಿದ್ದಾರೆ.

2024ರ ಅಕ್ಟೋಬರ್​ನಲ್ಲಿ ರಾಜಕೀಯ ಆರೋಪ ಮತ್ತು ಪ್ರತ್ಯಾರೋಪದ ವೇಳೆ ಬಿಆರ್​ಎಸ್​ ನಾಯಕ ಕೆಟಿಆರ್ ಅವರನ್ನು ಟೀಕಿಸುವ ಬರದಲ್ಲಿ ಸಚಿವೆ ಕೊಂಡಾ ಸುರೇಖಾ, ನಟಿ ಸಮಂತಾ ಮತ್ತು ನಟ ನಾಗಾರ್ಜುನ ಕುಟುಂಬವನ್ನು ಎಳೆದುತಂದು ಮಾನಹಾನಿಕಾರಕ ಹೇಳಿಕೆ ನೀಡಿದ್ದರು.

ಈ ಹಿನ್ನೆಲೆ ಸಚಿವ ಕೊಂಡ ಸುರೇಖಾ ವಿರುದ್ಧ ನಟ ನಾಗಾರ್ಜುನ ಸ್ಥಳೀಯ ನ್ಯಾಯಾಲಯದಲ್ಲಿ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ಹೂಡಿದ್ದರು. ಈಗಾಗಲೇ ನ್ಯಾಯಾಲಯವು ಈ ಹಿಂದೆ ನಾಗಾರ್ಜುನ ಮತ್ತು ಇತರರ ಹೇಳಿಕೆಯನ್ನು ದಾಖಲಿಸಿಕೊಂಡಿದೆ. ಶೀಘ್ರದಲ್ಲೇ ಪ್ರಕರಣದ ತೀರ್ಪು ಬರುವ ಸಾಧ್ಯತೆ ಇದೆ ಎನ್ನಲಾಗಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net