ಅತಂತ್ರರಿಗೆ ಅಮೃತಕಾಲ: ಅಲೆಮಾರಿಗಳಿಗೆ ಹಕ್ಕುಪತ್ರ; ತಾಂಡಾ, ಹಟ್ಟಿಗೆ ಕಂದಾಯಗ್ರಾಮ ಮಾನ್ಯತೆ

Front
Published on

ಬೆಂಗಳೂರು: ನಿಲ್ಲಲೊಂದು ಶಾಶ್ವತ ನೆಲೆ, ತಲೆ ಮೇಲೊಂದು ಸೂರಿಲ್ಲದ ಅತಂತ್ರ ಬದುಕಿಗೆ ಮುಕ್ತಿ ಸಿಗುವ ಅಮೃತ ಕಾಲ ಸಮೀಪಿಸಿದೆ. ತಾಂಡಾ, ದೊಡ್ಡಿ, ಗೊಲ್ಲರಹಟ್ಟಿ ಗಳನ್ನು ಕಂದಾಯ ಗ್ರಾಮಗಳೆಂದು ಘೋಷಿಸಿ, ಖಾಸಗಿ ಜಮೀನಿನಲ್ಲಿ ತಾತ್ಕಾಲಿಕ ಬದುಕು ಕಟ್ಟಿಕೊಂಡ ಅಲೆಮಾರಿ ಕುಟುಂಬಗಳಿಗೆ ಹಕ್ಕುಪತ್ರ ವಿತರಿಸುವ ಮೂಲಕ ನೆಲೆ ಕಲ್ಪಿಸಲು ರಾಜ್ಯ ಸರ್ಕಾರ ದೃಢ ಹೆಜ್ಜೆ ಇರಿಸಿದೆ.

ನಿಯಮಾನುಸಾರ ಕ್ರಮ ವಹಿಸಿದ ನಂತರ ತಾಂತ್ರಿಕ ಕಾರಣಗಳಿಗೆ ವಿಳಂಬ ಮಾಡದೆ, ಹಕ್ಕುಪತ್ರ ವಿತರಣೆ ಹಾಗೂ ಕಂದಾಯ ಗ್ರಾಮ ಘೋಷಣೆ ಪ್ರಕ್ರಿಯೆಗಳನ್ನು ಏಕಕಾಲಕ್ಕೆ ನಿಭಾಯಿಸುವಂತೆ ಜಿಲ್ಲಾಡಳಿತಗಳಿಗೆ ಸರ್ಕಾರ ಮಂಗಳವಾರ ಸೂಚಿಸಿದೆ. ಜೀವನೋಪಾಯಕ್ಕೆ ಅವ ಲಂಬಿತ ಕಸುಬು ನೆಚ್ಚಿಕೊಂಡು ಊರೂರು ಅಲೆದು, ಸರ್ಕಾರಿ ಅಥವಾ ಖಾಸಗಿ ಜಮೀನಿನಲ್ಲಿ ತಾತ್ಪೂರ್ತಿಕ ವಸತಿ ಕಂಡುಕೊಂಡಿರುವ ನಿವಾಸಿಗಳಿಗೆ ಸುಭದ್ರ, ಸ್ವಾಭಿಮಾನದ ಬದುಕು ಕಲ್ಪಿಸಲು ಉದ್ದೇಶಿತ ‘ಕಂದಾಯ ಗ್ರಾಮ’ ಘೋಷಣೆ ಪೂರ್ವ ಕಸರತ್ತು ಚುರುಕುಗೊಂಡಿದೆ. ಸ್ವಾತಂತ್ರ್ಯದ ಅಮೃತ ಮಹೋತ್ಸವ ಆಚರಿಸಿಯಾಗಿದ್ದು, ಸದ್ಯಕ್ಕೆ ಅಮೃತ ಕಾಲ ಚಾಲ್ತಿಯಲ್ಲಿದೆ.

ಬಹು ವರ್ಷಗಳ ಕಂದಾಯ ಗ್ರಾಮದ ಕನಸು ನನಸಾಗಿಸಲು ಸರ್ಕಾರ ನಿರ್ಧರಿಸಿದೆ. ಈ ಸಂದರ್ಭದಲ್ಲಿ ಸಾವಿರಾರು ಅಲೆಮಾರಿ ಕುಟುಂಬಗಳು ವಾಸವಿರುವ ಜಾಗದ ಹಕ್ಕುಪತ್ರ ನೀಡಿ, ವಿಶೇಷ ನೋಂದಣಿ ಅಭಿಯಾನ ನಡೆಸಲು ಚಿಂತನೆ ನಡೆಸಿದೆ. ಈಗಾಗಲೇ ಸಾವಿರಾರು ತಾಂಡಾ, ಗೊಲ್ಲರಹಟ್ಟಿ, ದೊಡ್ಡಿ ಮುಂತಾದವುಗಳನ್ನು ಗುರುತಿಸಿದೆ. 2016 ರಿಂದ ನಡೆದಿರುವ ಸಮೀಕ್ಷೆ, ದಾಖಲೆಗಳ ವಿಭಜನೆ ಪ್ರಕ್ರಿಯೆ ಅಂತಿಮಘಟ್ಟಕ್ಕೆ ತಲುಪಿದೆ.

ಮಾನದಂಡಗಳು: ತಾಂಡಾ, ಹಟ್ಟಿಗಳನ್ನು ಕಂದಾಯ ಗ್ರಾಮಗಳೆಂದು ಘೋಷಿಸಲು 1,000 ಎಕರೆ ಜಮೀನು, 50 ಕುಟುಂಬ ಅಥವಾ 250 ಜನಸಂಖ್ಯೆ ಹೊಂದಿರಬೇಕು.

ಏನೆಲ್ಲ ಪ್ರಯೋಜನಗಳು?: ಅಧಿಕೃತ ದಾಖಲೆಯಲ್ಲಿ ಸೇರ್ಪಡೆ, ಗ್ರಾಮಠಾಣ ವಿಸ್ತೀರ್ಣ ಗುರುತು. ಘೋಷಿತ ಕಂದಾಯ ಗ್ರಾಮದ ನಿವಾಸಿಗಳಿಗೆ 4,000 ಚದರ ಮೀಟರ್ ಮೀರದಂತೆ ಅಥವಾ ನೈಜ ಸ್ವಾಧೀನದ ನಿವೇಶನದ ಹಕ್ಕುಪತ್ರ, ನೋಂದಣಿಗೆ ಅವಕಾಶ. ಒಡೆತನದ ನಿವೇಶನದಲ್ಲಿ ಮನೆ ಕಟ್ಟಿಕೊಳ್ಳಲು, ಬ್ಯಾಂಕ್​ಗಳಲ್ಲಿ ಮನೆ ಸಾಲ, ರಾಜ್ಯ ಸರ್ಕಾರದ ವಿವಿಧ ಸವಲತ್ತುಗಳು ಲಭಿಸಲಿವೆ.

ಯಾರಿಗೆ ಅನುಕೂಲ?: ತಾಂಡಾ, ಗೊಲ್ಲರಹಟ್ಟಿ, ನಾಯಕರಹಟ್ಟಿ, ಕುರುಬರಹಟ್ಟಿ, ಹಾಡಿ, ಮಜರೆ, ದೊಡ್ಡಿ, ಪಾಳ್ಯ, ಕ್ಯಾಂಪ್, ಕಾಲನಿ ಇತ್ಯಾದಿ ಹೆಸರುಗಳಿಂದ ಗುರುತಿ ಸಲ್ಪಟ್ಟ ದಾಖಲೆರಹಿತ ಜನವಸತಿಗಳು

ಏನೆಲ್ಲ ಪ್ರಯೋಜನಗಳು?: ಅಧಿಕೃತ ದಾಖಲೆಯಲ್ಲಿ ಸೇರ್ಪಡೆ, ಗ್ರಾಮಠಾಣ ವಿಸ್ತೀರ್ಣ ಗುರುತು. ಘೋಷಿತ ಕಂದಾಯ ಗ್ರಾಮದ ನಿವಾಸಿಗಳಿಗೆ 4,000 ಚದರ ಮೀಟರ್ ಮೀರದಂತೆ ಅಥವಾ ನೈಜ ಸ್ವಾಧೀನದ ನಿವೇಶನದ ಹಕ್ಕುಪತ್ರ, ನೋಂದಣಿಗೆ ಅವಕಾಶ. ಒಡೆತನದ ನಿವೇಶನದಲ್ಲಿ ಮನೆ ಕಟ್ಟಿಕೊಳ್ಳಲು, ಬ್ಯಾಂಕ್​ಗಳಲ್ಲಿ ಮನೆ ಸಾಲ, ರಾಜ್ಯ ಸರ್ಕಾರದ ವಿವಿಧ ಸವಲತ್ತುಗಳು ಲಭಿಸಲಿವೆ.

ಇನ್ನಷ್ಟು ಸ್ಪಷ್ಟತೆ, ವೇಗ: ತಾಂಡಾ, ಹಟ್ಟಿ, ದೊಡ್ಡಿ ಇತ್ಯಾದಿಗಳನ್ನು ಕಂದಾಯ ಗ್ರಾಮಗಳೆಂದು ಘೋಷಿಸಲು ಕಾಯ್ದೆ ಪ್ರಕಾರ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಕಂದಾಯ ಇಲಾಖೆ ಹಲವು ಸುತ್ತೋಲೆ ನೀಡಿದೆ. ಪೂರ್ವಭಾವಿ ಆಡಳಿತಾತ್ಮಕ ಪ್ರಕ್ರಿಯೆ ತ್ವರಿತಕ್ಕೆ ಮಾರ್ಗಸೂಚಿಯಲ್ಲಿ ಪ್ರಸ್ತಾಪಿತ ಅಂಶಗಳಿಗೆ ಸ್ಪಷ್ಟತೆ ನೀಡಿದ್ದು, ಜಿಲ್ಲಾಧಿಕಾರಿ, ಸಹಾಯಕ ಆಯುಕ್ತರು ಮತ್ತು ತಹಸೀಲ್ದಾರರ ಜವಾಬ್ದಾರಿ ತಿಳಿಸಲಾಗಿದೆ. ಕಂದಾಯ ಗ್ರಾಮಗಳ ರಚನಾ ಕೋಶ ನಿರ್ದೇಶಕ ಡಾ.ಎಂ.ಎನ್. ರಾಜೇಂದ್ರಪ್ರಸಾದ್ ಸುತ್ತೋಲೆಯಲ್ಲಿ 27 ಅಂಶಗಳನ್ನು ವಿವರಿಸಿದ್ದಾರೆ.

ಮಾರ್ಗಸೂಚಿ ಪ್ರಮುಖಾಂಶಗಳು

  • ಕಂದಾಯ ಗ್ರಾಮಗಳಾಗಿ ಪರಿವರ್ತನೆಗೆ ಮಾನದಂಡಗಳನ್ವಯ ಜನವಸತಿಗಳ ಸರ್ವೆ ನಂಬರ್, ವಿಸ್ತೀರ್ಣಗಳನ್ನು ಗುರುತಿಸುವುದು
  • ಭೂಸುಧಾರಣೆ ಕಾಯ್ದೆ 1961ರ ಕಲಂ 38-ಎ ಪ್ರಕಾರ ಆಯಾ ಜಿಲ್ಲಾಧಿಕಾರಿ ನಮೂನೆ 2-ಇ ರಲ್ಲಿ ಅಧಿಸೂಚನೆ ಹೊರಡಿಸುವುದು
  • ಜಿಲ್ಲಾಧಿಕಾರಿ ಹಂತದಲ್ಲೇ ರಾಜ್ಯಪತ್ರದಲ್ಲಿ ಪ್ರಕಟಿಸಿ, ಸಾರ್ವಜನಿಕರ ಸಲಹೆ/ ಆಕ್ಷೇಪಣೆ ಆಹ್ವಾನ
  • ದಾಖಲೆರಹಿತ ಜನವಸತಿ ನೆಲೆಸಿರುವ ಖಾಸಗಿ ಜಮೀನಿನ ವಿಸ್ತೀರ್ಣಕ್ಕೆ ಮಾತ್ರ 2-ಇ ಅಧಿಸೂಚನೆ ಹೊರಡಿಸುವುದು. ಇಂತಹ ಜಾಗದಲ್ಲಿ ಸ್ವತಃ ಭೂಮಾಲೀಕರೆ ಮನೆ ಕಟ್ಟಿಕೊಂಡಿದ್ದರೆ ಗ್ರಾಮಠಾಣ ವಿಸ್ತೀರ್ಣಕ್ಕೆ ಸೇರ್ಪಡೆ
  • ಜಿಲ್ಲಾಧಿಕಾರಿ ನಮೂನೆ 2-ಇ ಅಧಿಸೂಚನೆ ಹೊರಡಿಸಿದ ಒಂದು ವರ್ಷದೊಳಗೆ ಕೃಷಿ ಕಾರ್ವಿುಕ ಮಾಲೀಕತ್ವ ನೋಂದಣಿಗೆ ಸಹಾಯಕ ಆಯುಕ್ತ/ ತಹಸೀಲ್ದಾರ್​ಗೆ ಅರ್ಜಿ ಸಲ್ಲಿಸಬೇಕು.
  • ಸ್ವೀಕೃತ ಸಲಹೆ/ಆಕ್ಷೇಪಣೆಗಳನ್ನು ಜಿಲ್ಲಾಧಿಕಾರಿ ಪರಿಶೀಲಿಸಿ, ಸೂಕ್ತ ಲಿಖಿತ ಆದೇಶದೊಂದಿಗೆ ಸಮ್ಮತಿ ಅಥವಾ ತಿರಸ್ಕಾರ
  • ದಾಖಲೆರಹಿತ ಜನವಸತಿ ಗ್ರಾಮಗಳಿಗೆ ತಹಸೀಲ್ದಾರ್ ತಂಡದ ಜತೆ ಖುದ್ದು ಭೇಟಿ ನೀಡಿದರೆ ಗ್ರಾಮವಾರು ತ್ವರಿತ ವಿಲೇವಾರಿಗೆ ಅನುಕೂಲ
  • ನೋಂದಣಿ ಅರ್ಜಿ ಸಲ್ಲಿಕೆ ಸಂಬಂಧ ವಿಚಾರಣೆಗೆ ವೈಯಕ್ತಿಕ, ಸಾರ್ವಜನಿಕ ನೋಟಿಸ್ ಏಕಕಾಲಕ್ಕೆ ನೀಡಬೇಕು.
  • ವೈಯಕ್ತಿಕ ನೋಟಿಸ್ ಅರ್ಜಿದಾರ ಮತ್ತು ಭೂಮಾಲೀಕರಿಗೆ (ಎದುರುದಾರರು) ಜಾರಿ ಮಾಡುವುದು ಕಡ್ಡಾಯ
  • ಸಹಾಯಕ ಆಯುಕ್ತರಿಂದಲೇ ವಿಚಾರಣೆ, ಆದೇಶ
  • ಭೂಮಾಲೀಕರಿಗೆ ಪರಿಹಾರ ಪಾವತಿಸಲು ಕಾಯ್ದೆ ಅನ್ವಯ ತಹಸೀಲ್ದಾರ್ ಕ್ರಮವಹಿಸಬೇಕು
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net