ಮುಂಬೈ: ಸೆಮಿಕಂಡೆಕ್ಟರ್ಗಳ ಕೊರತೆಯ ಕಾರಣ ಜನವರಿಯಲ್ಲಿ ಪ್ರಯಾಣಿಕರ ವಾಹನದ ಸಗಟು ಮಾರಾಟ ಶೇ. 8ರಷ್ಟು ಇಳಿಕೆ ಕಂಡಿದೆ. ದ್ವಿಚಕ್ರ ಮೋಟಾರು ವಾಹನಗಳ ಮಾರಾಟವೂ ಶೇ. 21 ತಗ್ಗಿದೆ ಎಂದು ಭಾರತೀಯ ವಾಹನ ತಯಾರಿಕಾ ಕಂಪನಿಗಳ ಒಕ್ಕೂಟ (ಎಸ್ಐಎಎಂ) ಹೇಳಿದೆ.
2021ರ ಜನವರಿಯಲ್ಲಿ 2,76,554 ಇದ್ದ ಮಾರಾಟ, ಕಳೆದ ಜನವರಿಯಲ್ಲಿ 2,54,287ಕ್ಕೆ ತಗ್ಗಿದೆ.
2022ರ ಮೊದಲನೇ ತಿಂಗಳಲ್ಲಿ 1,26,693 ಕಾರುಗಳು ಬಿಕರಿಯಾಗಿದ್ದರೆ, ಹಿಂದಿನ ವರ್ಷ ಇದೇ ಮಾಹೆಯಲ್ಲಿ 1,53,244 ಮಾರಾಟವಾಗಿತ್ತು.
10,632 ವ್ಯಾನ್ಗಳು ಕಳೆದ ಜನವರಿಯಲ್ಲಿ ಪೂರೈಕೆ ಆಗಿದ್ದರೆ, 2021ರ ಜನವರಿಯಲ್ಲಿ ಇದರ ಪ್ರಮಾಣ 11,816 ಇತ್ತು.
ದ್ವಿಚಕ್ರ ಮೋಟಾರು ವಾಹನಗಳು 11,28,293 ಮಾರಾಟವಾಗಿದ್ದರೆ, ಕಳೆದ ವರ್ಷ ಜನವರಿಯಲ್ಲಿ 14,29,928 ಮಾರಾಟ ಆಗಿತ್ತು.
24,091 ತ್ರಿಚಕ್ರ ವಾಹನಗಳು ಈ ಜನವರಿಯಲ್ಲಿ ಬಿಕರಿ ಆಗಿದ್ದು, ಕಳೆದ ವರ್ಷ 26,794 ಮಾರಾಟ ಆಗಿತ್ತು.
ಕಳೆದ ಜನವರಿಯಲ್ಲಿ ಒಟ್ಟಾರೆ ವಾಹನಗಳ ಸಗಟು ಪೂರೈಕೆ 14,06,672 ಇದ್ದರೆ, 2021ರ ಜನವರಿಯಲ್ಲಿ ಇದು 17,33,276 ಇತ್ತು.
ಬಹು ಉಪಯೋಗಿ ವಾಹನಗಳ ಮಾರಾಟದಲ್ಲಿ ಹೆಚ್ಚಳ ಆಗಿದೆ. 1,16,962 ಘಟಕಗಳು ಕಳೆದ ತಿಂಗಳು ಮಾರಾಟವಾಗಿದ್ದರೆ, ಹಿಂದಿನ ವರ್ಷದ ಇದೇ ಮಾಸದಲ್ಲಿ 1,11,494 ವಾಹನಗಳು ಬಿಕರಿ ಆಗಿದ್ದವು.