ಕಾಫಿ ಬೆಳೆ ಅಭಿವೃದ್ಧಿಗೆ ದಶಕದ ಕ್ರಿಯಾಯೋಜನೆ

coffee
ಕೇಂದ್ರ ವಾಣಿಜ್ಯ ಸಚಿವ ಪಿಯೂಷ್ ಗೋಯಲ್ ಅವರನ್ನು ದೆಹಲಿಯಲ್ಲಿ ಭೇಟಿ ಮಾಡಿದ ಕಾಫಿ ಮಂಡಳಿ ಅಧ್ಯಕ್ಷ ಎಂ.ಜೆ.ದಿನೇಶ್ ದೇವವೃಂದ ಅವರು ಕಾಫಿ ಬೆಳೆ ದಶ ವಾರ್ಷಿಕ ಕ್ರಿಯಾ ಯೋಜನೆಯನ್ನು ಸಲ್ಲಿಸಿ ಮಾತುಕತೆ ನಡೆಸಿದರು.
Published on

ಚಿಕ್ಕಮಗಳೂರು: ದೇಶದ ಕಾಫಿ ಬೆಳೆಯುವ ಎಲ್ಲ ಪ್ರದೇಶಗಳನ್ನು ಒಳಗೊಂಡಂತೆ ಕಾಫಿ ಬೆಳೆ ಅಭಿವೃದ್ಧಿ ಹಾಗೂ ಅದಕ್ಕೊಂದು ವ್ಯವಸ್ಥಿತ ಮಾರುಕಟ್ಟೆ ಒದಗಿಸುವ ಉದ್ದೇಶದಿಂದ ಮುಂದಿನ ಒಂದು ದಶಕದ ಕ್ರಿಯಾ ಯೋಜನೆಯೊಂದನ್ನು ಕೇಂದ್ರ ವಾಣಿಜ್ಯ ಸಚಿವ ಪಿಯೂಷ್ ಗೋಯಲ್ ಅವರಿಗೆ ಸಲ್ಲಿಸಲಾಗಿದೆ ಭಾರತೀಯ ಕಾಫಿ ಮಂಡಳಿ ಅಧ್ಯಕ್ಷ ಎಂ.ಜೆ.ದಿನೇಶ್ ದೇವವೃಂದ ತಿಳಿಸಿದರು.

ದೆಹಲಿಯಲ್ಲಿ ವಾಣಿಜ್ಯ ಸಚಿವರನ್ನು ಭೇಟಿಯಾಗಿ ಕಾಫಿ ಬೆಳೆ ಹಾಗೂ ಬೆಳೆಗಾರರು ಅನುಭವಿಸುತ್ತಿರುವ ಸಮಸ್ಯೆಗಳ ಬಗ್ಗೆ ಚರ್ಚಿಸಿದ್ದೇನೆ. ಇದೇ ವೇಳೆ ಮುಂದಿನ ಹತ್ತು ವರ್ಷಗಳಲ್ಲಿ ಕಾಫಿ ಬೆಳೆಗಾರರ ಆದಾಯ ಹಾಗೂ ಕಾಫಿ ರಫ್ತು ಪ್ರಮಾಣ ದ್ವಿಗುಣಗೊಳಿಸುವ ಬಗ್ಗೆ ಕ್ರಮ ಕೈಗೊಳ್ಳಲು ಪೂರಕ ಅಂಶಗಳನ್ನು ಒಳಗೊಂಡಿರುವ ಕ್ರಿಯಾ ಯೋಜನೆಯನ್ನು ಸಚಿವರಿಗೆ ನೀಡಿದ್ದೇನೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ದಶಕದ ಕ್ರಿಯಾಯೋಜನೆಗೆ ಸಚಿವರಿಂದ ಸಕಾರಾತ್ಮಕ ಸ್ಪಂದನ ದೊರೆತಿದೆ. ಅದರಲ್ಲಿರುವ ಅನೇಕ ಅಂಶಗಳನ್ನು ಮೆಚ್ಚಿಕೊಂಡ ಸಚಿವರು, ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ ಅಮರ್‌ದೀಪ್ ಸಿಂಗ್ ಭಾಟಿಯಾ ಅವರನ್ನು ಕರೆದು ಈ ಬಗ್ಗೆ ಚರ್ಚಿಸಿ ಮುಂದೆ ಕೈಗೊಳ್ಳಬೇಕಾದ ರೂಪುರೇಷೆ ಸಿದ್ಧಪಡಿಸಲು ಸೂಚಿಸಿದ್ದಾರೆ ಎಂದರು.
ಸಚಿವರೊಂದಿಗೆ ಮಾತನಾಡುವಾಗ ಪ್ರಸ್ತುತ ಕಾಫಿ ಬೆಳೆಗಾರರು ಎದುರಿಸುತ್ತಿರುವ ಸಮಸ್ಯೆಗಳನ್ನು ವಿವರಿಸಿ, ಅದರ ನಿವಾರಣೆಗೆ ಅಗತ್ಯ ಕ್ರಮ ಕೈಗೊಳ್ಳಲು ಮನವಿ ಮಾಡಲಾಯಿತು. ಪ್ರಮುಖವಾಗಿ ಬೆಳೆ ಸಾಲಕ್ಕೆ ಸಹಾಯಧನ ನೀಡಲು, ಹವಾಮಾನ ಆಧಾರಿತ ವಿಮಾ ಯೋಜನೆಯನ್ನು ಕಾಫಿ ಬೆಳೆಗೂ ವಿಸ್ತರಿಸಲು ಹಾಗೂ ಸರ್ಫೇಸಿ ಕಾಯ್ದೆಯಿಂದ ಕಾಫಿ ಬೆಳೆಗಾರರನ್ನು ಹೊರಗಿಡಲು ಮನವಿ ಮಾಡಲಾಯಿತು ಎಂದು ತಿಳಿಸಿದರು.
ದಶ ವಾರ್ಷಿಕ ಕ್ರಿಯಾ ಯೋಜನೆಯಲ್ಲಿದ್ದ ಭಾರತದ ಕಾಫಿ ರಫ್ತನ್ನು ದ್ವಿಗುಣಗೊಳಿಸುವ ಬಗ್ಗೆ ಇದ್ದ ವಿವರವನ್ನು ಓದಿದ ಸಚಿವರು, ಅದನ್ನು ಯಶಸ್ವಿಯಾಗಿ ಕಾರ್ಯಗತಗೊಳಿಸಲು ಯಾವ ಕ್ರಮ ಕೈಗೊಳ್ಳಬೇಕೆಂದು ಪ್ರಶ್ನಿಸಿದರು. ಆ ಬಗ್ಗೆ ವಿವರ ನೀಡಿ, ಕಾಫಿ ತೋಟಗಳಲ್ಲಿ ಕಾಫಿ ಬೆಳೆ ಪ್ರಮಾಣ ಹೆಚ್ಚಿಸಲು ಅತ್ಯಂತ ಅವಶ್ಯಕವಾದ ಮಣ್ಣು ಪರೀಕ್ಷೆ, ಕಾಫಿ ತೋಟಗಳ ಯಾಂತ್ರೀಕರಣ, ಬೆಳೆ ಪ್ರಮಾಣ ಹೆಚ್ಚಿಸಲು ಕೈಗೊಳ್ಳಲು ತದ್ರೂಪಿ ತಳಿಗಳ ಅಭಿವೃದ್ಧಿಗೆ ಅಂಗಾಂಶ ಕೃಷಿ ಮೂಲಕ ಹೆಚ್ಚಿನ ಪ್ರಮಾಣದಲ್ಲಿ ಗಿಡಗಳನ್ನು ಅಭಿವೃದ್ಧಿಪಡಿಸುವ ಬಗ್ಗೆ ತಿಳಿಸಲಾಯಿತು. ಇದಕ್ಕೆ ಇಲಾಖೆಯಿಂದ ಅಗತ್ಯ ನೆರವು ನೀಡುವ ಭರವಸೆಯನ್ನೂ ನೀಡಿದ್ದಾರೆ ಎಂದು ದಿನೇಶ್ ದೇವವೃಂದ ತಿಳಿಸಿದರು.
ಕೇಂದ್ರ ಸಚಿವರ ಭೇಟಿ ನಿಯೋಗಕ್ಕೆ ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ, ಸಂಸದ ಪ್ರತಾಪಸಿಂಹ, ಬಿಜೆಪಿ ಮುಖಂಡ ಸಿ.ಟಿ.ರವಿ ಸಹಕಾರ ನೀಡಿದ್ದರು ಎಂದು ತಿಳಿಸಿದರು. ಕಾಫಿ ಮಂಡಳಿ ಸದಸ್ಯರಾದ ಪ್ರದೀಪ್, ಶಂಕರ್ ಸುದ್ದಿಗೋಷ್ಠಿಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net