

ಗೋಪಾಲ್ಗಂಜ್(ಬಿಹಾರ): 2016ರಲ್ಲಿ ಸಂಭವಿಸಿದ ಕಳ್ಳಬಟ್ಟಿ ದುರಂತ ಪ್ರಕರಣದಲ್ಲಿ ಒಂಬತ್ತು ಅಪರಾಧಿಗಳಿಗೆ ಮರಣ ದಂಡನೆ ಹಾಗೂ ನಾಲ್ವರು ಮಹಿಳೆಯರಿಗೆ ಜೀವಾವಧಿ ಶಿಕ್ಷೆ ವಿಧಿಸಿ ಗೋಪಾಲ್ಗಂಜ್ ಜಿಲ್ಲಾ ಹೆಚ್ಚುವರಿ ನ್ಯಾಯಾಲಯ ಶುಕ್ರವಾರ ತೀರ್ಪು ನೀಡಿದೆ.
ಪಾನ ನಿಷೇಧ ಕಾನೂನು ಜಾರಿಗೊಳಿಸಿದ ನಾಲ್ಕು ತಿಂಗಳಲ್ಲಿ ನಡೆದ ದುರಂತದಲ್ಲಿ 19 ಜನರು ಬಲಿಯಾಗಿದ್ದರು. ಅಕ್ರಮ ಸಾರಾಯಿ ದುರಂತಕ್ಕೆ ಸಂಬಂಧಿಸಿದಂತೆ ಇಷ್ಟೊಂದು ಜನರಿಗೆ ಕಠಿಣ ಶಿಕ್ಷೆ ವಿಧಿಸಿರುವುದು ಬಹುಶಃ ದೇಶದ ಇತಿಹಾಸದಲ್ಲೇ ಮೊದಲ ಸಲವಾಗಿದೆ.
ಈ ಪ್ರಕರಣದಲ್ಲಿ 14 ಆರೋಪಿಗಳನ್ನು (ಓರ್ವ ಮೃತ) ದೋಷಿಗಳು ಎಂದು ನ್ಯಾಯಾಧೀಶ ಲವಕುಶ ಕುಮಾರ್ ಹೇಳಿದರು. ಗೋಪಾಲ್ಗಂಜ್ ಜಿಲ್ಲೆಯ ಖಜುರ್ಬನಿ ಪ್ರದೇಶದಲ್ಲಿ ಕಲಬೆರಕೆ ಸಾರಾಯಿ ಕುಡಿದ 19 ಜನರು ಮೃತಪಟ್ಟಿದ್ದರು.