

ಯೇಸು ಕ್ರಿಸ್ತನಿಗೆ ಸತ್ಯ ಹೇಳಿದುದಕ್ಕಾಗಿ ಆ ಕಾಲಕ್ಕೆ ನಾಗರಿಕ ಜಗತ್ತು ಹೇಸಿಕೊಳ್ಳುವಂತಹ ಅತ್ಯಂತ ಕ್ರೂರವಾದ ಕೊರಡೆ ಏಟಿನ ಶಿಕ್ಷೆ ಮತ್ತು ಶಿಲುಬೆ ಮರದ ಮೇಲೆ ನೇತಾಡಿಸಿ ಕೊಲ್ಲುವ ಮರಣ ದಂಡನೆ ವಿಧಿಸಿತು. ಆ ಕಾಲಕ್ಕೆ ಯಹೂದಿಗಳಲ್ಲಿ ಪ್ರಬಲರಾಗಿದ್ದ ಅನ್ನಾಸ್, ಕಾಯಿಫಾಸ್ ಎಂಬ ಪ್ರಧಾನ ಮತ್ತು ಉಪ ಯಾಜಕರು ಈ ಪಿತೂರಿಯ ಹಿಂದಿದ್ದ ಪ್ರಮುಖರು.
ಯೇಸು ಗಲಿಲೇಯದವನೆಂದು ಆ ಪ್ರಾಂತ್ಯದ ಅರಸ ಹೆರೋದೆಸನ ಬಳಿ ಅಪರಾಧಿಯಾಗಿ ನಿಲ್ಲಿಸಲಾಯಿತು. ಆದರೆ, ಮರಣ ದಂಡನೆಯನ್ನು ರಾಜ್ಯಪಾಲ ಪೋಂತ್ಸಿಯಸ್ ಪಿಲಾತನು ಮಾತ್ರ ಜಾರಿಗೊಳಿಸಬೇಕಾದ್ದರಿಂದ ಯೇಸು ಆತನ ಮುಂದೆ ಅಪರಾಧಿಯಾಗಿ ನಿಲ್ಲಬೇಕಾಯಿತು. ಆತನ ಮೇಲೆ ಹೊರಿಸಲಾದ ಹುರುಳಿಲ್ಲದ ಅಪರಾಧಗಳು: ಯೇಸು ತಾನೇ ಅರಸ ಎಂದು ಅಹಂಭಾವದಿಂದ ಹೇಳಿದ್ದು; ರೋಮ್ ಸೀಸರನ ವಿರುಧ್ಧ ಜನರನ್ನು ಪ್ರಚೋದಿಸಿದ ಹಾಗೂ ಜೆರೂಸಲೇಮಿನ ಮಹಾ ದೇವಾಲಯವನ್ನು ಕೆಡವಿ ಮತ್ತೆ ಮೂರೇ ದಿನದಲ್ಲಿ ಮರುಸ್ಥಾಪಿಸುವೆ ಎಂದಿದ್ದು. ಆದರೆ, ಹೆರೋದೆಸ್ ಮತ್ತು ಜುದೇಯ ಪ್ರಾಂತ್ಯದ ರಾಜ್ಯಪಾಲ ಪಿಲಾತ ಇಬ್ಬರೂ ನಡೆಸಿದ ವಿಚಾರಣೆಯಲ್ಲಿ ಯೇಸು ನಿದೋಷಿ ಎಂದು ಸಾಬೀತಾಯಿತು. ದುರಂತವೆಂದರೆ, ಪ್ರಧಾನ ಯಾಜಕರಿಂದ ಪ್ರಚೋದನೆಗೊಳಗಾದ ಒಂದು ಗುಂಪಿನ ಯಹೂದಿಗಳು ಯೇಸುವನ್ನೇ ಗಲ್ಲಿಗೇರಿಸಿ ಎಂದು ಪಟ್ಟು ಹಿಡಿದರು. ಇಲ್ಲವೆಂದಲ್ಲಿ, ಪಿಲಾತನ ವಿರುಧ್ಧ ರೋಮ್ ಸೀಸರನಿಗೆ ತಾವು ದೂರು ಕೊಡುವೆವೆಂಬ ಬೆದರಿಕೆಗೆ ಪಿಲಾತನು ಹೆದರಿದ. ಆದಾಗ್ಯೂ, ತನ್ನ ಮನಸ್ಸಾಕ್ಷಿಗೆ ವಿರುಧ್ಧವಾಗಿ ಮುಗ್ಧ ಯೇಸುವನ್ನುಶಿಲುಬೆಗೇರಿಸಿ ಮರಣ ದಂಡನೆ ವಿಧಿಸಿ, ಅಂತ್ಯದಲ್ಲಿ, ಆ ದೋಷ ತನ್ನನ್ನು ಕಾಡದಿರಲೆಂದು ನೀರು ತರಿಸಿ ಎಲ್ಲರೆದುರು ತನ್ನ ಕೈಗಳನ್ನು ತೊಳೆದುಕೊಂಡ. ಆದರೆ, ಯೇಸು ಕ್ರಿಸ್ತ ಹುಲುಮಾನವರ ಅದಾವುದೋ ಪಾಪ ಕೃತ್ಯಗಳಿಗಾಗಿ ತನ್ನ ಅಮೂಲ್ಯ ಪ್ರಾಣ ಬಲಿ ನೀಡಿ, ಜಗತ್ತಿನ ಇತಿಹಾಸದಲ್ಲಿ ಪ್ರೀತಿ, ಶಾಂತಿ, ಸಹಬಾಳ್ವೆಗೆ ಹೊಸ ಭಾಷ್ಯವನ್ನೇ ಬರೆದ.