

ಮೊರೆನಾ: ಸತ್ತಿದ್ದ ವ್ಯಕ್ತಿ ಮತ್ತೆ ಬದುಕಿ ಬಂದರೆ ಆ ಅನುಭವ ಹೇಗಿರುತ್ತೆ? ಸತ್ತವನು ಬದುಕಿ ಬಂದರೆ ಭಯವಾಗುತ್ತದೆಯೋ ಅಥವಾ ಸಂತೋಷವಾಗುತ್ತದೆಯೋ? ಗೊತ್ತಿಲ್ಲ. ಆದರೆ ವಿಚಿತ್ರ ಎನ್ನುವಂತೆ ಅಂತ್ಯಸಂಸ್ಕಾರದ ವೇಳೆ ವ್ಯಕ್ತಿಯೋರ್ವ ಜೀವಂತವಾಗಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.
ಘಟನೆಯ ವಿವರ:
ಮಧ್ಯಪ್ರದೇಶದ ಮೊರೆನಾ ಎಂಬ ಪ್ರದೇಶದಲ್ಲಿ ಜೀತು ಪ್ರಜಾಪತಿ ಎಂಬಾತ ಹಲವು ವರ್ಷಗಳಿಂದ ಕಿಡ್ನಿ ಸಂಬಂಧ ಕಾಯಿಲೆಯಿಂದ ಬಳಲುತ್ತಿದ್ದ. ಕಳೆದ ಮಂಗಳವಾರ ಆತ ಮನೆಯಲ್ಲಿಯೇ ದಿಢೀರನೆ ಕುಸಿದು ಬಿದ್ದಿದ್ದಾನೆ. ಹಲವು ಘಂಟೆಗಳ ಕಾಲ ಜೀತುವಿನ ದೇಹದಲ್ಲಿ ಯಾವುದೆ ಚಲನವಲನ ಇರದ ಕಾರಣ ಆತ ಮರಣ ಹೊಂದಿದ್ದಾನೆ ಎಂದು ಭಾವಿಸಿದ ಕುಟುಂಬದವರು ಅಂತ್ಯಕ್ರಿಯೆ ಆರಂಭಿಸಿದ್ದರು.
ಕೊನೆಗೆ ಸ್ಮಶಾನದಲ್ಲಿ ಒಮ್ಮಿಂದೊಮ್ಮೆಲೆ ಜೀತುವಿನ ದೇಹವು ಅಲುಗಾಡಲು ಪ್ರಾರಂಭಿಸಿದ್ದು, ಕೂಡಲೇ ನೆರೆದವರೆಲ್ಲ ಭಯಭೀತರಾಗಿ ದಿಕ್ಕಾಪಾಲಾಗಿ ಓಡಿದ್ದಾರೆ. ಸುದ್ದಿ ತಿಳಿದ ವೈದ್ಯರು ಸ್ಮಶಾನಕ್ಕೆ ಧಾವಿಸಿ ತಪಾಸಣೆ ನಡೆಸಿ ವ್ಯಕ್ತಿಯ ಹೃದಯ ಬಡಿಯುತ್ತಿದೆ ಎಂದು ದೃಢಪಡಿಸಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ವ್ಯಕ್ತಿಯನ್ನು ಗ್ವಾಲಿಯರ್‌ಗೆ ಕಳುಹಿಸಲಾಗಿದೆ.(ಏಜೆನ್ಸೀಸ್)