

ಬೆಂಗಳೂರು:ನಟ ಸುದೀಪ್ ಅವರದ್ದು ಸೌಜನ್ಯಯುತ ಭೇಟಿ. ಚಿತ್ರೀಕರಣಕ್ಕೆ ತೊಂದರೆಯಾದ ಕಾರಣಕ್ಕೆ ಬಂದಿದ್ದರು. ಸಂಬಂಧಪಟ್ಟವರಿಗೆ ತಿಳಿಸುತ್ತೇನೆ ಎಂದು ಹೇಳಿದ್ದೇನೆ. ಯಾವುದೇ ರಾಜಕೀಯ ಚರ್ಚೆ ನಡೆದಿಲ್ಲ. ಅವರು ಒಬ್ಬ ಗೆಳೆಯರಾಗಿ ಬಂದು ಭೇಟಿಯಾಗಿದ್ದಾರೆ ಎಂದು DCM DK ಶಿವಕುಮಾರ್ ಸ್ಪಷ್ಟನೆ ಕೊಟ್ಟರು.
ಸದಾಶಿವನಗರದಲ್ಲಿ ಗುರುವಾರ ಸುದ್ದಿಗಾರರ ಜತೆ ಮಾತನಾಡಿದರು.
ಮೇಕೆದಾಟು ಅಣೆಕಟ್ಟಿಗೆ ಅನುಮತಿಯನ್ನು ಒಂದೇ ದಿನದಲ್ಲಿ ಕೊಡಿಸುತ್ತೇನೆ ಎಂದು ಕುಮಾರಸ್ವಾಮಿ ಹೇಳಿದ್ದರಲ್ಲ, ಮೊದಲು ಈ ಕೆಲಸವನ್ನು ಮಾಡಲಿ, ಆಮೇಲೆ ಮಾತಾಡಲಿ. ಅವರು ಅಧಿಕಾರದಲ್ಲಿ ಇದ್ದಾಗ ಎರಡನೇ ವಿಮಾನ ನಿಲ್ದಾಣ ಮಾಡಲು ಯಾವುದೇ ಹೆಜ್ಜೆಯಿಡಲಿಲ್ಲ. ನಾವು ಈಗ ಹೆಜ್ಜೆ ಇಟ್ಟಿದ್ದೇವೆ ಎಂದು ಡಿಕೆಶಿ ಎಚ್ಡಿಕೆಗೆ ತಿರುಗೇಟು ನೀಡಿದರು.
ಬೆಂಗಳೂರಿಗೆ ಎರಡನೇ ವಿಮಾನ ನಿಲ್ದಾಣದ ಕ್ರೆಡಿಟ್ ಅನ್ನು ದೇವೇಗೌಡರು, ಕುಮಾರಸ್ವಾಮಿ ಅವರು ತಗೆದುಕೊಳ್ಳುತ್ತಿರುವ ಬಗ್ಗೆ ಉತ್ತರವಿತ್ತ ಡಿಸಿಎಂ,”ವಿಮಾನ ನಿಲ್ದಾಣವು ಬಿಡದಿ, ನೆಲಮಂಗಲ. ತುಮಕೂರು, ಸೋಲೂರು ಹೀಗೆ ಯಾವ ಸ್ಥಳದಲ್ಲಿ ಬರಬೇಕು ಎಂಬುದನ್ನು ತೀರ್ಮಾನ ಮಾಡುವುದು ನಮ್ಮ ವ್ಯಾಪ್ತಿಯಲ್ಲಿಲ್ಲ. ಇದು ವಿಮಾನ ನಿಲ್ದಾಣ ಪ್ರಾಧಿಕಾರ ಹಾಗೂ ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದವರು ತೀರ್ಮಾನ ಮಾಡುತ್ತಾರೆ. ಎರಡನೇ ವಿಮಾನ ನಿಲ್ದಾಣವನ್ನು ಇಂತಿಷ್ಟು ವರ್ಷಗಳ ಕಾಲ ನಿರ್ಮಾಣ ಮಾಡಬಾರದು ಎನ್ನುವ ಒಪ್ಪಂದವಿದೆ. ಇದನ್ನು ಆ ಎರಡು ಸಂಸ್ಥೆಗಳು ತೀರ್ಮಾನ ಮಾಡುತ್ತವೆ” ಎಂದರು.
ವಿಮಾಣ ನಿಲ್ದಾಣಕ್ಕೆ ಒತ್ತಡವನ್ನು ಕುಮಾರಸ್ವಾಮಿ ಅವರೇ ತರುತ್ತಿದ್ದಾರೆ ಎಂದು ಕೇಳಿದಾಗ, ಅವರ ಜಮೀನಿನ ಪಕ್ಕದವರು ಒತ್ತಾಯ ತರುತ್ತಾರೆ. ನಾನೂ ನನ್ನ ಜಮೀನು ಪಕ್ಕದಲ್ಲಿ ಇದ್ದವರಿಂದ ಮಾಡಿಕೊಳ್ಳುತ್ತೇನೆ ಎಂದು ಮಾರ್ಮಿಕವಾಗಿ ನುಡಿದರು.
ದೆಹಲಿ ಚುನಾವಣೆಯ ಎಕ್ಸಿಟ್ ಪೋಲ್ ಬಗ್ಗೆ ಕೇಳಿದಾಗ, ನನಗೆ ಯಾವ ಎಕ್ಸಿಟ್ ಪೋಲ್ ಬಗ್ಗೆಯೂ ನಂಬಿಕೆಯಿಲ್ಲ. ಮತದಾರನ ತೀರ್ಮಾನವನ್ನು ಕಾಯೋಣ ಎಂದರು.