

ಬೆಂಗಳೂರು: ಅಭಿನಯ ಚಕ್ರವರ್ತಿ ಹಾಗೂ ಬಾದ್ಷಾ ಕಿಚ್ಚ ಸುದೀಪ್ ನಿನ್ನೆಯಷ್ಟೇ (ಸೆ.02) 50ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಅಭಿಮಾನಿಗಳ ಆಸೆಯಂತೆ ಈ ಬಾರಿ ಬಹಳ ಅದ್ಧೂರಿಯಾಗಿ ಹುಟ್ಟುಹಬ್ಬ ಆಚರಿಸಿಕೊಂಡಿರುವ ಕಿಚ್ಚ, ಇದೇ ಖುಷಿಯಲ್ಲಿ ತಮ್ಮ ಪ್ರೀತಿ ಪಾತ್ರರಿಗೆ ನಿನ್ನೆ ರಾತ್ರಿ ಭರ್ಜರಿ ಪಾರ್ಟಿ ಸಹ ಕೊಟ್ಟಿದ್ದಾರೆ.
ಸಾಕಷ್ಟು ಸೆಲೆಬ್ರಿಟಿಗಳು ಬರ್ತಡೇ ಪಾರ್ಟಿಗೆ ಆಗಮಿಸಿ ಕಿಚ್ಚ ಸುದೀಪ್ಗೆ ಶುಭ ಕೋರಿ ಔತಣ ಸವಿದರು. ಈ ವೇಳೆ ಗಮನ ಸೆಳೆದ ಸಂಗತಿ ಏನೆಂದರೆ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಮಾಜಿ ಸಚಿವ ಹಾಗೂ ಬಿಜೆಪಿ ನಾಯಕ ಬಿ.ಸಿ. ಪಾಟೀಲ್ ಮತ್ತು ಬಿಜೆಪಿ ಮಾಜಿ ಶಾಸಕ ರಾಜುಗೌಡ ಒಟ್ಟಿಗೆ ಕಾಣಿಸಿಕೊಂಡಿದ್ದು.
ಖಾಸಗಿ ಹೋಟೆಲ್ನಲ್ಲಿ ನಿನ್ನೆ ರಾತ್ರಿ ಬರ್ತಡೇ ಪಾರ್ಟಿ ನಡೆಯಿತು. ಈ ಪಾರ್ಟಿಯಲ್ಲಿ ಮೂವರು ನಾಯಕರು ಒಂದು ಗಂಟೆಗೂ ಹೆಚ್ಚು ಕಾಲ ಚರ್ಚಿಸಿದ್ದಾರೆ. ಬಿ.ಸಿ ಪಾಟೀಲ್ ಹೆಗಲ ಮೇಲೆ ಕೈ ಹಾಕಿ ಇಬ್ಬರ ಜತೆ ಡಿಕೆಶಿ, ತುಂಬಾ ಆತ್ಮೀಯವಾಗಿ ಮಾತನಾಡಿದ್ದು, ಕಿಚ್ಚನ ಪಾರ್ಟಿಯಲ್ಲಿ ಡಿಕೆಶಿ ಆಪರೇಷನ್ ಕಾಂಗ್ರೆಸ್ಗೆ ಕೈ ಹಾಕಿದ್ರ ಡಿಕೆಶಿ ಎಂಬ ಚರ್ಚೆಯಾಗುತ್ತಿದೆ. ಮೂವರು ಒಟ್ಟಿಗೆ ಇರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಸಾಕಷ್ಟು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.
ಈಗಾಗಲೇ ಆಪರೇಷನ್ ಹಸ್ತದ ಬಗ್ಗೆ ರಾಜಕೀಯ ವಲಯದಲ್ಲಿ ಭಾರೀ ಚರ್ಚೆಯಾಗುತ್ತಿದೆ. ಇನ್ನೇನು ಲೋಕಸಭಾ ಚುನಾವಣೆ ಹತ್ತಿರ ಬರುತ್ತಿದ್ದು, ಪಕ್ಷ ಬಿಟ್ಟು ಹೋಗಿರುವ ಘಟಾನುಘಟಿ ನಾಯಕರನ್ನು ಮತ್ತೆ ತಮ್ಮತ್ತ ಸೆಳೆದುಕೊಳ್ಳುವ ಪ್ರಯತ್ನಕ್ಕೆ ಕಾಂಗ್ರೆಸ್ ಕೈಹಾಕಿದೆ ಎಂದು ಹೇಳಲಾಗುತ್ತಿದೆ. ಈಗಾಗಲೇ ಯಶವಂತಪುರ ಕ್ಷೇತ್ರದಲ್ಲಿ ಹಾಲಿ ಬಿಜೆಪಿ ಶಾಸಕ ಹಾಗೂ ಮಾಜಿ ಸಚಿವ ಎಸ್.ಟಿ. ಸೋಮಶೇಖರ್ ಕಾಂಗ್ರೆಸ್ ಕಡೆ ಮುಖ ಮಾಡಿದ್ದಾರೆ. ಅದಕ್ಕೆ ಪುಷ್ಠಿ ನೀಡುವಂತಹ ಅನೇಕ ಘಟನೆಗಳು ನಡೆದಿವೆ. ಇದೀಗ ಬಿ.ಸಿ. ಪಾಟೀಲ್ ಜತೆ ಡಿಕೆಶಿ ಇರುವುದನ್ನು ನೋಡಿದರೆ ತೆರೆಮರೆಯಲ್ಲಿ ಆಪರೇಷನ್ ಹಸ್ತ ಚಾಲ್ತಿಯಲ್ಲಿದೆ ಎಂಬ ಅನುಮಾನವನ್ನು ಈ ಫೋಟೋಗಳು ಹುಟ್ಟುಹಾಕಿವೆ.
ಸುದೀಪ್ ಅವರ ಬರ್ತಡೇ ವಿಚಾರಕ್ಕೆ ಬರುವುದಾದರೆ, ಪ್ರತಿಬಾರಿ ಮನೆಯ ಮುಂದೆ ಸುದೀಪ್ ಸರಳವಾಗಿ ಹುಟ್ಟುಹಬ್ಬ ಆಚರಣೆ ಮಾಡಿಕೊಳ್ಳುತ್ತಿದ್ದರು. ಹಾರ-ತುರಾಯಿ, ಕೇಕ್ ಮತ್ತು ಗಿಫ್ಟ್ ಸೇರಿದಂತೆ ಯಾವುದನ್ನು ತೆಗೆದುಕೊಂಡು ಬರಬೇಡಿ, ಅದೇ ಹಣದಲ್ಲಿ ನಿರಾಶ್ರಿತರಿಗೆ ಏನಾದರೂ ಸಹಾಯ ಮಾಡಿ ಎಂದು ಕೋರಿದ್ದರು. ಈ ಬಾರಿಯು ಇದೇ ಮನವಿಯನ್ನು ಮಾಡಿದ್ದರು. ಆದರೆ, ಈ ಬಾರಿಯ ವಿಶೇಷ ಏನೆಂದರೆ ಮನೆಯನ್ನು ಬಿಟ್ಟು, ನ್ಯಾಯಂಡಹಳ್ಳಿಯ ಪಂತರಪಾಳ್ಯದಲ್ಲಿರುವ ನಂದಿ ಲಿಂಕ್ ಗ್ರೌಂಡ್ಸ್ನಲ್ಲಿ ಅಭಿಮಾನಿಗಳ ಸಾಗರದ ನಡುವೆ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಣೆ ಮಾಡಿಕೊಂಡಿದ್ದಾರೆ.