'ಡಿ.ಜೆ.ಹಳ್ಳಿ ಗಲಭೆಕೋರರು ಇನ್ಮುಂದೆ ಕನಸು-ಮನಸಲ್ಲೂ ಇಂಥ ಕೆಲಸ ಮಾಡದಂಥ ಪಾಠ ಕಲಿಸುತ್ತೇವೆ...'

Ashwath Narayan
Ashwath Narayan
Published on

ಬೆಂಗಳೂರು: ದೇವರಜೀವನಹಳ್ಳಿ ಮತ್ತು ಕೆ.ಜಿ.ಹಳ್ಳಿ, ಕಾವಲ್​ ಭೈರಸಂಧ್ರದಲ್ಲಿ ನಡೆದ ಗಲಭೆ ಹಿಂದೆ ವ್ಯವಸ್ಥಿತ ಷಡ್ಯಂತ್ರವಿದೆ. ಇದರ ಹಿಂದೆ ಯಾರಿದ್ದಾರೆ ಎಂಬುದನ್ನು ಶೀಘ್ರವೇ ಪತ್ತೆಹಚ್ಚಲಾಗುವುದು ಎಂದು ಉಪಮುಖ್ಯಮಂತ್ರಿ ಡಾ. ಸಿ.ಎನ್​.ಅಶ್ವತ್ಥ್​ನಾರಾಯಣ್​ ಹೇಳಿದ್ದಾರೆ.

ದಾಳಿಕೋರರಿಂದ ಹಾನಿಗೊಳಗಾದ ಡಿ.ಜೆ.ಹಳ್ಳಿ ಮತ್ತು ಮತ್ತು ಗಲಭೆ ಪೀಡಿತ ಪ್ರದೇಶಗಳಿಗೆ ಬುಧವಾರ ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ಅವರೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ನಂತರ ಮಾತನಾಡಿ, ಹಿಂಸಾಚಾರ ನಡೆದ ನಂತರದ ದೃಶ್ಯಗಳನ್ನು ನೋಡಿದರೆ ಗೊತ್ತಾಗುತ್ತದೆ. ಭಾರೀ ಸಂಚು ರೂಪಿಸಿಯೇ ಠಾಣೆ ಮೇಲೆ ದಾಳಿ ಮಾಡಲಾಗಿದೆ ಎಂಬುದು ಸ್ಪಷ್ಟವಾಗಿ ಅರ್ಥವಾಗುತ್ತದೆ. ಠಾಣೆಗೆ ಯಾರೊಬ್ಬರೂ ಬರಬಾರದು ಎಂದು ಹೀಗೆ ಮಾಡಲಾಗಿದೆ ಎಂದರು.

ಪೊಲೀಸರನ್ನು ಕೊಲ್ಲುವ ದುರುದ್ದೇಶ ಇಟ್ಟುಕೊಂಡೇ ಈ ಗಲಾಟೆ ಮಾಡಲಾಗಿದೆ. ತಪ್ಪಿತಸ್ಥರನ್ನು ಬಿಡುವ ಪ್ರಶ್ನೆಯೇ ಇಲ್ಲ. ಕಾನೂನು ಮತ್ತು ಸುವ್ಯವಸ್ಥೆ ಹಾಳು ಮಾಡುವ ಸಲುವಾಗಿ ಠಾಣೆಗೆ ಬೆಂಕಿ ಹಚ್ಚಿದ್ದಾರೆ. ಈ ದುಷ್ಕೃತ್ಯ ಖಂಡನೀಯ. ತಪ್ಪು ಮಾಡಿದ ಪ್ರತಿಯೊಬ್ಬರೂ ತಕ್ಕಶಾಸ್ತ್ರಿ ಅನುಭವಿಸಲಿದ್ದಾರೆ. ಗಲಭೆ ಮಾಡಿ ಬಿಲದಲ್ಲಿ ಅಡಗಿ ಕುಳಿತಿರುವ ಎಲ್ಲ ಇಲಿಗಳನ್ನೂ ಸರ್ಕಾರ ಬೋನಿಗೆ ಎಳೆಯಲಿದೆ. ಅಂಥವರ ವಿರುದ್ಧ ತೀವ್ರ ಕ್ರಮ ಜರುಗಿಸಲಾಗುವುದು ಎಂದು ಡಿಸಿಎಂ ಹೇಳಿದರು. ಇದನ್ನೂ ಓದಿ: ರಷ್ಯಾ ಕರೊನಾ ಲಸಿಕೆಯನ್ನು ಬಹಿರಂಗವಾಗಿ ತೆಗೆದುಕೊಳ್ತೇನೆ; ಪುಟಿನ್​ ಕಾರ್ಯಕ್ಕೆ ಫಿಲಿಪ್ಪೈನ್ಸ್​ ಅಧ್ಯಕ್ಷರ ಮೆಚ್ಚುಗೆ

ಇನ್ಮುಂದೆ ಇಂಥ ಹೀನಕೃತ್ಯವನ್ನು ಕನಸು-ಮನಸಲ್ಲಿ ಮಾಡಲೂ ಹೆದರಬೇಕು. ಅಂಥ ಪಾಠ ಕಲಿಸಲಾಗುವುದು. ಭವಿಷ್ಯದಲ್ಲಿ ಬೆಂಗಳೂರಿನಲ್ಲಿ ಇಂಥ ಘಟನೆ ನಡೆಯದಂತೆ ಕಟ್ಟೆಚ್ಚರ ವಹಿಸಲಾಗುವುದು ಎಂದು ಭರವಸೆ ನೀಡಿದರು.

ಕಾಂಗ್ರೆಸ್ ವಿರುದ್ಧ ಆಕ್ರೋಶ

ಫೇಸ್’ಬುಕ್ ನಲ್ಲಿ ಪೋಸ್ಟ್ ಹಾಕಿರುವ ನವೀನ್ ಎಂಬ ಯುವಕ ಬಿಜೆಪಿ ಕಾರ್ಯಕರ್ತ ಎಂದು ಕಾಂಗ್ರೆಸ್ ಆರೋಪ ಮಾಡಿದೆ ಎಂದು ಸುದ್ದಿಗಾರರು ಗಮನ ಸೆಳೆದಾಗ ಗರಂ ಆದ ಡಿಸಿಎಂ, ಆ ಪಕ್ಷದ ನಾಯಕರಿಗೆ ರಾಜಕೀಯ ಮಾಡೋದು ಬಿಟ್ಟರೆ ಯಾವುದೇ ಪರಿಸ್ಥಿತಿಯನ್ನು ನಿಭಾಯಿಸಲಾಗದ ಅಸಹಾಯಕತೆ. ಅದಕ್ಕಾಗಿ ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಿದ್ದಾರೆ. ಆ ವ್ಯಕ್ತಿಯೇ ಕಾಂಗ್ರೆಸ್ ಕಾರ್ಯಕರ್ತ ಎಂದು ಪೋಸ್ಟ್ ಹಾಕಿಕೊಂಡಿದ್ದಾನೆ. ಹೀಗಾಗಿ ಅವರು ಜನರನ್ನು ದಿಕ್ಕು ತಪ್ಪಿಸುವುದನ್ನು ಇನ್ನಾದರೂ ನಿಲ್ಲಿಸಬೇಕು ಎಂದು ತರಾಟೆಗೆ ತಗೆದುಕೊಂಡರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net