ಕಾಡ್ಗಿಚ್ಚು ತಗುಲದಂತೆ ಮುಂಜಾಗ್ರತೆ ವಹಿಸಿ

dc meeting photo
ಚಿಕ್ಕಮಗಳೂರಿನಲ್ಲಿ ಡಿಸಿ ಮೀನಾ ನಾಗರಾಜ್ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಎಲ್ಲ ತಾಲೂಕುಗಳ ತಹಸೀಲ್ದಾರರೊಂದಿಗೆ ವಿಡಿಯೋ ಸಂವಾದದಲ್ಲಿ ಮಾತನಾಡಿದರು. ಡಾ. ಗೋಪಾಲಕೃಷ್ಣ, ದಲ್ಜಿತ್‌ಕುಮಾರ್, ರಮೇಶ್ ಬಾಬು ಇತರರಿದ್ದರು.
Published on

ಚಿಕ್ಕಮಗಳೂರು: ಬೇಸಿಗೆಯಲ್ಲಿ ಅರಣ್ಯದಂಚಿನಲ್ಲಿ ಕಾಣಿಸಿಕೊಳ್ಳುವ ಬೆಂಕಿ ಅರಣ್ಯ ಪ್ರದೇಶಕ್ಕೆ ವ್ಯಾಪಿಸುವುದನ್ನು ತಡೆಯಲು ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಸಿ.ಎನ್.ಮೀನಾ ನಾಗರಾಜ್ ಅಧಿಕಾರಿಗಳಿಗೆ ಸೂಚಿಸಿದರು.
ನಗರದ ಅರಣ್ಯ ಇಲಾಖೆ ಕಚೇರಿ ಸಭಾಂಗಣದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಎಲ್ಲ ತಾಲೂಕುಗಳ ತಹಸೀಲ್ದಾರರೊಂದಿಗೆ ವಿಡಿಯೋ ಸಂವಾದದಲ್ಲಿ ಮಾತನಾಡಿದ ಅವರು, ಚಳಿಗಾಲ ಮುಗಿದು ಬೇಸಿಗೆ ಆವರಿಸುತ್ತಿದೆ. ಈ ಸಂದರ್ಭದಲ್ಲಿ ಕಾಡ್ಗಿಚ್ಚು ಹಬ್ಬಿ ಅಪಾರ ಅರಣ್ಯ, ಪ್ರಾಣಿ, ಪಕ್ಷಿ ಸಂಪತ್ತು ನಾಶವಾಗುವ ಸಾಧ್ಯತೆಗಳಿರುತ್ತವೆ. ಈ ಬಗ್ಗೆ ಎಚ್ಚರಿಕೆ ವಹಿಸಬೇಕು ಎಂದು ಹೇಳಿದರು.
ಮುಳ್ಳಯ್ಯನಗಿರಿಗೆ ಹೊಂದಿಕೊಂಡಿರುವ ಚನ್ನಗೊಂಡನಹಳ್ಳಿ ಅರಣ್ಯ ಪ್ರದೇಶದಲ್ಲಿ ನಡೆದ ಬೆಂಕಿ ಅನಾಹುತದಲ್ಲಿ ಯಾವುದೇ ಜೀವ ಸಂಕುಲಗಳಿಗೆ ಹಾಗೂ ಆಸ್ತಿಪಾಸ್ತಿಗೆ ನಷ್ಟವುಂಟಾಗಿಲ್ಲ. ಇಲ್ಲಿ ಸಂಭವಿಸಬಹುದಾಗಿದ್ದ ದೊಡ್ಡ ಅನಾಹುತ ತಪ್ಪಿದೆ. ಜಿಲ್ಲೆಯಲ್ಲಿ ಮುಂದೆ ಇಂತಹ ಅನಾಹುತಗಳಿಗೆ ಆಸ್ಪದವಾಗದಂತೆ ಅಧಿಕಾರಿಗಳು ಎಚ್ಚರಿಕೆ ವಹಿಸಬೇಕು ಎಂದು ಹೇಳಿದರು.
ಬೆಂಕಿ ಅವಘಡಗಳು ಸಂಭವಿಸುವ ಸೂಕ್ಷ್ಮ ಪ್ರದೇಶಗಳಲ್ಲಿ ವಾಸಿಸುವ ಸ್ಥಳೀಯರಿಗೆ ಬೆಂಕಿ ಅನಾಹುತದಿಂದ ಆಗುವ ಸಮಸ್ಯೆಗಳ ಕುರಿತು ಅರಿವು ಮೂಡಿಸಬೇಕು. ಇಂತಹ ಅನಾಹುತಗಳು ಸಂಭವಿಸಿದ ತಕ್ಷಣ ಇಲಾಖೆಗೆ ಮಾಹಿತಿ ನೀಡುವಂತೆ ಸ್ಥಳೀಯರಿಗೆ ತಿಳಿಸಬೇಕು. ಸ್ಥಳೀಯರ ಸಹಕಾರದಿಂದ ಮಾತ್ರ ಇಂತಹ ಅಪಾಯದಿಂದ ಪಾರಾಗಲು ಸಾಧ್ಯ ಎಂದರು.
ವಿಡಿಯೋ ಸಂವಾದದಲ್ಲಿ ಎಸ್ಪಿ ಡಾ. ವಿಕ್ರಮ ಅಮಟೆ, ಜಿಪಂ ಸಿಇಒ ಡಾ. ಗೋಪಾಲಕೃಷ್ಣ, ಉಪವಿಭಾಗಾಧಿಕಾರಿ ದಲ್ಜಿತ್‌ಕುಮಾರ್, ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿ ರಮೇಶ್ ಬಾಬು, ಅರಣ್ಯ ಇಲಾಖೆ ಅಧಿಕಾರಿಗಳು, ಎಲ್ಲ ತಾಲೂಕುಗಳ ತಹಸೀಲ್ದಾರರು, ಅಗ್ನಿಶಾಮಕ ದಳದ ಸಿಬ್ಬಂದಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net