ಗ್ಯಾಂಗ್​ರೇಪ್​ ಪ್ರಕರಣ ದಾಖಲಿಸಿದ ಮರು ದಿನವೇ ಸಂತ್ರಸ್ತೆ ತಂದೆ ಅಪಘಾತದಲ್ಲಿ ದುರ್ಮರಣ

Accident 1
Published on

ಕಾನ್ಪುರ: ಸಾಮೂಹಿಕ ಅತ್ಯಾಚಾರ ಪ್ರಕರಣ ದಾಖಲಿಸಿದ ದಿನದ ಬೆನ್ನಲ್ಲೇ ಸಂತ್ರಸ್ತೆಯ ತಂದೆ ರಸ್ತೆ ಅಪಘಾತದಲ್ಲಿ ಮೃತಪಟ್ಟಿರುವ ಘಟನೆ ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದಿದೆ.

ಎರಡು ದಿನಗಳ ಹಿಂದಷ್ಟೇ 13 ವರ್ಷದ ಬಾಲಕಿಯ ಮೇಲೆ ಗ್ಯಾಂಗ್​ರೇಪ್​ ನಡೆದಿತ್ತು. ಸಂತ್ರಸ್ತೆಯನ್ನು ಅದೇ ಗ್ರಾಮದ ಮೂವರು ಸಾಮೂಹಿಕವಾಗಿ ಅತ್ಯಾಚಾರ ಎಸಗಿದ್ದರು. ಸಂತ್ರಸ್ತ ಬಾಲಕಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವಾಗ ಇಂದು ಬೆಳಗ್ಗೆ ಆಸ್ಪತ್ರೆ ಹೊರಭಾಗದಲ್ಲಿ ಅಪಘಾತ ನಡೆದಿದೆ.

ಗ್ಯಾಂಗ್​ರೇಪ್​ನ ಪ್ರಕರಣದ ಪ್ರಮುಖ ಆರೋಪಿ ಗೊಲು ಯಾದವ್ ತಂದೆ ಕಾನ್ಪುರದಿಂದ 100 ಕಿ.ಮೀ ದೂರದಲ್ಲಿರುವ ಕನೌಜ್​ ಜಿಲ್ಲೆಯಲ್ಲಿ ಸಬ್​ ಇನ್ಸ್​ಪೆಕ್ಟರ್​ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.

ಈಗಾಗಲೇ ಆರೋಪಿ ಗೋಲು ಯಾದವ್​ನನ್ನು ಬಂಧಿಸಲಾಗಿದೆ. ಗ್ಯಾಂಗ್​ರೇಪ್​ ವಿರುದ್ಧ ಬಾಲಕಿ ಕುಟುಂಬ ದೂರು ನೀಡಿದಾಗಿನಿಂದ ಸಂತ್ರಸ್ತ ಕುಟುಂಬಕ್ಕೆ ಗೊಲು ಯಾದವ್ ಕುಟುಂಬ ಬೆದರಿಕೆ ಹಾಕುತ್ತಿರುವ ಆರೋಪ ಕೇಳಿಬಂದಿದೆ. ​

ಇದೀಗ ಸಂತ್ರಸ್ತೆಯ ತಂದೆ ಮೃತಪಟ್ಟಿರುವುದು ಅನೇಕ ಅನುಮಾಗಳಿಗೆ ಎಡೆ ಮಾಡಿಕೊಟ್ಟಿದ್ದು, ಇದು ಅಪಘಾತವಲ್ಲ ಕೊಲೆ ಎಂದು ಮೃತನ ತಂದೆ ಹಾಗೂ ಸಂತ್ರಸ್ತೆಯ ತಾತ ಆರೋಪಿಸಿದ್ದಾರೆ.

ಸಂತ್ರಸ್ತೆಗೆ ವೈದ್ಯಕೀಯ ಚಿಕಿತ್ಸೆ ನಡೆಯುವಾಗ ತಂದೆ ಟೀ ತರಲೆಂದು ಹೊರಗಡೆ ಬಂದಾಗ ಅಪಘಾತ ಸಂಭವಿಸಿದೆ. ತಕ್ಷಣ ಕಾನ್ಪುರ ಆಸ್ಪತ್ರೆಗೆ ದಾಖಲಿಸಿದಾದರೂ ಚಿಕಿತ್ಸೆ ಫಲಿಸದೇ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿದ್ದು, ತನಿಖೆ ನಡೆಸುತ್ತಿರುವುದಾಗಿ ಕಾನ್ಪುರ ಪೊಲೀಸ್​ ಮುಖ್ಯಸ್ಥ ಡಾ. ಪ್ರೀತಿಂದರ್​ ಸಿಂಗ್​ ಹೇಳಿದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net