

ಚಂಡೀಗಢ: ಕೃಷಿ ಕಾನೂನುಗಳ ವಿರುದ್ಧ ಪಂಜಾಬ್ ನಂತರ ಅತಿ ಹೆಚ್ಚು ಸಂಖ್ಯೆಯಲ್ಲಿ ಪ್ರತಿಭಟನೆಯ ಬಿಸಿ ಮುಟ್ಟಿರುವ ಹರಿಯಾಣದಲ್ಲಿ, ಆಡಳಿತಾರೂಢ ಬಿಜೆಪಿ-ಜೆಜೆಪಿ ಸಮ್ಮಿಶ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ಅವಿಶ್ವಾಸ ಮತ ಮಂಡನೆ ಮಾಡಿದೆ. ಇಂದು ವಿಧಾನಸಭೆಯಲ್ಲಿ ಮಾತನಾಡಿದ ವಿರೋಧ ಪಕ್ಷದ ನಾಯಕ ಭೂಪಿಂದರ್ ಸಿಂಗ್ ಹೂಡ ಮುಖ್ಯಮಂತ್ರಿ ಮನೋಹರ್ ಲಾಲ್ ಖತ್ತರ್ ಸರ್ಕಾರ ಜನರ ವಿಶ್ವಾಸ ಕಳೆದುಕೊಂಡಿದೆ ಎಂದಿದ್ದಾರೆ.
ಇಂದು ಬೆಳಿಗ್ಗೆ ಅವಿಶ್ವಾಸ ಮತ ಮಂಡಿಸಿದ ಕಾಂಗ್ರೆಸ್ ಶಾಸಕ ಹೂಡ. "ದೇಶದಾದ್ಯಂತ ರೈತರು ಪ್ರತಿಭಟಿಸುತ್ತಿದ್ದಾರೆ. ಹರಿಯಾಣ ಸರ್ಕಾರ ರೈತರನ್ನು ತಡೆಯಲು ಪ್ರಯತ್ನಿಸುತ್ತಿದ್ದು, ವಾಟರ್ ಕನಾನ್ ಮತ್ತು ಟಿಯರ್ ಗ್ಯಾಸ್ ಪ್ರಯೋಗ ಮಾಡುತ್ತಿದೆ. 250 ಕ್ಕೂ ಹೆಚ್ಚು ರೈತರು ನಮ್ಮ ಗಡಿಯಲ್ಲಿ ಸಾವಪ್ಪಿದ್ದಾರೆ" ಎಂದರು.
ಖತ್ತರ್ ಸರ್ಕಾರದ ವಿರುದ್ಧ ವಾಕ್ಪ್ರಹಾರ ಮುಂದುವರೆಸಿದ ಹೂಡ, “ಬಿಜೆಪಿ-ಜೆಜೆಪಿ ಸರ್ಕಾರ ಚುನಾವಣೆಯಲ್ಲಿ ನೀಡಿದ ಭರವಸೆಗಳನ್ನು ಈಡೇರಿಸಿಲ್ಲ. ಅದಕ್ಕಾಗೇ ರೈತರು ಪ್ರತಿಭಟಿಸುತ್ತಿದ್ದಾರೆ. ಜೆಜೆಪಿ ಎಂಎಸ್ಪಿ ಮತ್ತು ಶೇ.10ರ ಬೋನಸ್ನ ಆಶ್ವಾಸನೆ ನೀಡಿತ್ತು. ಬಿಜೆಪಿ ರೈತರ ಆದಾಯ ದ್ವಿಗುಣಗೊಳ್ಳುವುದೆಂದು ಭರವಸೆ ನೀಡಿತ್ತು. ಆದರೆ ಬೆಳೆಯ ಉತ್ಪಾದನಾ ವೆಚ್ಚ ಹೆಚ್ಚುತ್ತಿದ್ದು, ಅದನ್ನು ಎಂಎಸ್ಪಿ ಪೂರೈಸುತ್ತಿಲ್ಲ" ಎಂದರು.
ಸಂಖ್ಯೆಗಳು ಹೀಗಿವೆ: 90 ಸೀಟುಗಳಿರುವ ಹರಿಯಾಣ ವಿಧಾನಸಭೆಯಲ್ಲಿ ಹಾಲಿ 88 ಶಾಸಕರಿದ್ದಾರೆ. ಇದರಲ್ಲಿ ಬಿಜೆಪಿ 40 ಸೀಟುಗಳನ್ನು ಹೊಂದಿದ್ದು, 10 ಜೆಜೆಪಿ ಶಾಸಕರು, ಒಬ್ಬ ಲೋಕಹಿತ ಪಕ್ಷದ ಶಾಸಕ ಮತ್ತು 5 ಸ್ವತಂತ್ರ ಶಾಸಕರ ಬೆಂಬಲದೊಂದಿಗೆ ಸರ್ಕಾರ ರಚಿಸಿದೆ. ಕಾಂಗ್ರೆಸ್ 30 ಶಾಸಕರನ್ನು ಹೊಂದಿದೆ. ಬಹುಮತ ಸಾಬೀತುಪಡಿಸಲು ಸರ್ಕಾರಕ್ಕೆ 45 ಮತಗಳ ಅಗತ್ಯ ಬೀಳಲಿದೆ.
ಬಿಜೆಪಿ, ಜೆಜೆಪಿ ಮತ್ತು ಕಾಂಗ್ರೆಸ್ ಮೂರೂ ಪಕ್ಷಗಳು ತಮ್ಮ ಶಾಸಕರಿಗೆ ವಿಧಾನಸಭೆಯ ಕಲಾಪಗಳು ಮುಗಿಯುವವರೆಗೆ ಹಾಜರಿರಬೇಕೆಂದು ವಿಪ್ ಜಾರಿ ಮಾಡಿವೆ. ಜೆಜೆಪಿ ಮತ್ತು ಸ್ವತಂತ್ರ ಶಾಸಕರು ಸರ್ಕಾರದ ವಿರುದ್ಧ ಮತ ಚಲಾವಣೆ ಮಾಡಲಿದ್ದಾರೆಂದು ಕಾಂಗ್ರೆಸ್ ಆಶಿಸುತ್ತಿದೆ. ಈ ನಡುವೆ ಜೆಜೆಪಿ ಶಾಸಕರು ತಾವು ಕೃಷಿ ಕಾನೂನುಗಳ ವಿರುದ್ಧ ಇದ್ದರೂ ಕೂಡ, ಸರ್ಕಾರವನ್ನು ಅಸ್ಥಿರಗೊಳಿಸಲು ಇಚ್ಛಿಸುವುದಿಲ್ಲ ಎಂದು ಹೇಳಿದ್ದಾರೆ.(ಏಜೆನ್ಸೀಸ್)
ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್ಬುಕ್ ಪೇಜ್ ಲೈಕ್ ಮಾಡಿ