

ಸಾಮಾನ್ಯವಾಗಿ ಬದುಕಿರುವವರಿಗೆ ಮಾತ್ರ ಮದುವೆಗಳನ್ನು ಮಾಡಲಾಗುತ್ತದೆ. ಆದರೆ ಇಲ್ಲೊಂದು ಊರಿನಲ್ಲಿ ಸತ್ತವರಿಗೂ ಸಹ ಮದುವೆ ಮಾಡುತ್ತಾರೆ. ಕೇಳಲು ಇದು ಆಘಾತಕಾರಿಯಾಗಿದ್ದರೂ ಇದೇ ಸತ್ಯ! ಇದು ಅಲ್ಲಿನ ಸಂಸ್ಕೃತಿಯಾಗಿದೆ. ಕೆಲವೊಮ್ಮೆ ಸತ್ತ ಹೆಣ್ಣುಮಕ್ಕಳಿಗೆ ಮದುವೆ ಮಾಡಲಾಗುತ್ತದೆ. ಅದಕ್ಕಾಗಿ ತಮಗೆ ವರ ಬೇಕು ಎಂದು ಘೋಷಣೆ ಸಹ ಮಾಡುತ್ತಾರೆ. ಇತ್ತೀಚೆಗಷ್ಟೇ ತಮ್ಮ ಮೃತ ಮಗಳಿಗೆ ವರ ಬೇಕು ಎಂದು ಕುಟುಂಬವೊಂದು ಘೋಷಿಸಿತ್ತು. ಅಷ್ಟಕ್ಕೂ ಈ ಸಂಪ್ರದಾಯ ಇರುವುದು ಕರ್ನಾಟಕದ ತುಳುನಾಡಿನಲ್ಲಿ. ಇಲ್ಲಿನ ಜನರು ಅಗಲಿದ ಮಕ್ಕಳಿಗೆ ವಿವಾಹ ಕಾರ್ಯ ನೆರವೇರಿಸುತ್ತಾರೆ. ಅದರಲ್ಲೂ ತುಳು ತಿಂಗಳು ಬಂತೆಂದರೆ ಈ ಮದುವೆಗಳು ನಡೆಯುತ್ತವೆ. ತುಳು ಮಾಸದಲ್ಲಿ ಮದುವೆ ಬಿಟ್ಟರೆ ಬೇರೆ ಯಾವುದೇ ಶುಭ ಕಾರ್ಯಗಳು ನಡೆಯುವುದಿಲ್ಲ.
ತುಳುನಾಡಿನ ಕುಟುಂಬವೊಂದು ಮೃತ ಮಗಳ ಮದುವೆಗೆ ಜಾಹೀರಾತು ನೀಡಿದೆ. 'ಬಂಗೇರ ಗೋತ್ರ, ಕುಲುಲ್ ಸಮುದಾಯಕ್ಕೆ ಸೇರಿದ ವಧುವಿಗೆ ವರ ಬೇಕಿದೆ. 30 ವರ್ಷಗಳ ಹಿಂದೆ ಬಾಲಕಿ ಮೃತಪಟ್ಟಿದ್ದಾಳೆ. ವರನು ಕೂಡ 30 ವರ್ಷಗಳ ಒಳಗೆ ಮೃತಪಟ್ಟಿರಬೇಕು. ನಮ್ಮ ಜಾತಿಗೆ ಸೇರಿದ ವ್ಯಕ್ತಿಯಾಗಿರಬೇಕು ಮತ್ತು ಬೇರೆ ಬೇರೆ ಗೋತ್ರದವನಾಗಿರಬೇಕು. 30 ವರ್ಷಗಳ ಹಿಂದೆ ಮೃತಪಟ್ಟ ಬಾಲಕನ ಪಾಲಕರು ದೆವ್ವಕ್ಕೆ ಮದುವೆ ಮಾಡಬೇಕಾದರೆ ಸಂಪರ್ಕಿಸಿ ಎಂದು ಫೋನ್ ನಂಬರ್ ಸಹಿತ ಜಾಹೀರಾತು ನೀಡಿದ್ದರು.
ಈ ಜಾಹೀರಾತು ವೈರಲ್ ಆದ ನಂತರ 50 ಜನರು ಪ್ರತಿಕ್ರಿಯಿಸಿದ್ದಾರೆ ಎಂದು ಜಾಹೀರಾತು ನೀಡಿದ ಕುಟುಂಬದ ಸದಸ್ಯರಲ್ಲಿ ಒಬ್ಬರು ಹೇಳಿದ್ದಾರೆ. ಸದ್ಯದಲ್ಲೇ ಈ ಭೂತದ ಮದುವೆ ದಿನಾಂಕ ನಿರ್ಧಾರವಾಗಲಿದೆ ಎಂದಿದ್ದಾರೆ. ಐದು ವರ್ಷಗಳಿಂದ ಮದುವೆ ಮಾಡಲು ಪ್ರಯತ್ನಿಸುತ್ತಿದ್ದೇವೆ. ಸರಿಯಾದ ಸಂಬಂಧಕ್ಕಾಗಿ ನಾವು ಕಾಯುತ್ತಿದ್ದೇವೆ. ಬದುಕಿರುವವರಿಗೆ ಮಾಡುವ ರೀತಿಯಲ್ಲಿಯೇ ಈ ಮದುವೆಯು ಸಹ ನಡೆಯಲಿದೆ ಎಂದು ತಿಳಿಸಿದ್ದಾರೆ.
ವಧು ಮತ್ತು ವರನ ಆಕೃತಿಗಳನ್ನು ಪೀಠಗಳ ಮೇಲೆ ಇರಿಸಲಾಗುತ್ತದೆ ಮತ್ತು ಮದುವೆಯ ಬಟ್ಟೆಗಳನ್ನು ಸಹ ಧರಿಸಲಾಗುತ್ತದೆ. ಕುಟುಂಬ ಸದಸ್ಯರ ಸಮ್ಮುಖದಲ್ಲಿ ಅದ್ಧೂರಿಯಾಗಿ ವಿವಾಹ ನಡೆಯಲಿದೆ. ಆದರೆ ಯಾಕೆ ಹೀಗೆ ಮಾಡಲಾಗುತ್ತಿದೆ ಎಂಬ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲ. ಆದರೆ, ಸತ್ತವರ ಆತ್ಮವನ್ನು ಸಮಾಧಾನಪಡಿಸಲು ಇದನ್ನು ಮಾಡಲಾಗುತ್ತದೆ ಎಂದು ಕೆಲವರು ನಂಬುತ್ತಾರೆ. ಸಾವಿನ ನೋವಿನಿಂದ ಹೊರಬಂದು ಸುಖಮಯ ಜೀವನ ನಡೆಸಲು ಈ ರೀತಿ ಮಾಡುತ್ತಿದ್ದಾರೆ ಎನ್ನಲಾಗಿದೆ. ತುಳುವಿನಲ್ಲಿ ಈ ಪದ್ಧತಿ ಅನಾದಿ ಕಾಲದಿಂದಲೂ ಮುಂದುವರೆದಿದೆ.
ಸತ್ತವರನ್ನು ಮದುವೆಯಾಗುವುದರ ವಿಚಿತ್ರ ಸಂಪ್ರದಾಯದ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮೂಲಕ ನಮಗೆ ತಿಳಿಸಿ. (ಏಜೆನ್ಸೀಸ್)