

ನ್ಯೂಯಾರ್ಕ್: ಮಕ್ಕಳ ಕೈಗೆ ಮೊಬೈಲ್ ಕೊಡುವ ಮುನ್ನ ಪಾಲಕರು ಒಮ್ಮೆ ಈ ಸ್ಟೋರಿಯನ್ನು ಓದುವುದು ಒಳಿತು. ಮಕ್ಕಳು ಗೊತ್ತಿಲ್ಲದೇ ಮಾಡುವ ಅಚಾತುರ್ಯದಿಂದ ಪಾಲಕರು ಹೇಗೆಲ್ಲ ಮುಜುಗರ ಅನುಭವಿಸಬೇಕಾಗುತ್ತದೆ ಎಂಬುದಕ್ಕೆ ಈ ಸ್ಟೋರಿ ಉದಾಹರಣೆಯಾಗಿದೆ.
ಹೌದು, ಎರಡು ವರ್ಷದ ಹೆಣ್ಣು ಮಗುವೊಂದು ಮೊಬೈಲ್ನಲ್ಲಿ ಅಮ್ಮನ ಬೆತ್ತಲೆ ಫೋಟೋಗಳನ್ನು ಕ್ಲಿಕ್ಕಿಸಿ, ಅಮ್ಮನ ಸಹೋದ್ಯೋಗಿಗಳು ಸೇರಿದಂತೆ ಕಾಂಟ್ಯಾಕ್ಟ್ ಲೀಸ್ಟ್ನಲ್ಲಿದ್ದ ಎಲ್ಲರಿಗೂ ಕಳುಹಿಸಿರುವ ವಿಚಿತ್ರ ಘಟನೆ ಅಮೆರಿಕದ ಓಹಿಯೋ ನಗರದದಲ್ಲಿ ನಡೆದಿದೆ.
ಓಹಿಯೋ ನಿವಾಸಿ ಎಮಿಲಿ ಸ್ಮಿತ್ (30) ಕಳೆದ ಭಾನುವಾರ ತನ್ನ ಮೊಬೈಲ್ ಅನ್ನು ಆಟವಾಡಲೆಂದು ಮಗಳ ಕೈಗೆ ನೀಡಿದ್ದರು. ಇತ್ತ ಸ್ನಾನ ಮುಗಿಸಿದ್ದ ಎಮಿಲಿ, ಮಗಳ ಸಮೀಪವೇ ಬೆತ್ತಲೆಯಾಗಿ ನಿಂತು ತಲೆಗೂದಲು ಒಣಗಿಸುತ್ತಿದ್ದರು. ಆದರೆ, ತನ್ನ ಮಗಳು ಹಿಂದಿನಿಂದ ಫೋಟೋಗಳನ್ನು ತೆಗೆದು, ಅವುಗಳನ್ನು ಸ್ನ್ಯಾಪ್ಚಾಟ್ ಮೂಲಕ ಕಾಂಟ್ಯಾಕ್ಟ್ ಲೀಸ್ಟ್ನಲ್ಲಿರುವವರಿಗೆ ಸೆಂಡ್ ಮಾಡುತ್ತಿದ್ದಾಳೆ ಎಂಬುದು ಸಣ್ಣ ಅರಿವು ಸಹ ಎಮಿಲಿಗೆ ಇರಲಿಲ್ಲ.
ಇದಾದ ಕೆಲವೇ ಕ್ಷಣಗಳಲ್ಲಿ ಸಹೋದ್ಯೋಗಿಯೊಬ್ಬರು ಕಳುಹಿಸಿದ "ಬೆತ್ತಲೆ ಫೋಟೋ ಕಳಿಸಿದ್ದಕ್ಕಾಗಿ ಧನ್ಯವಾದಗಳು" ಎಂಬ ಸಂದೇಶ ನೋಡಿದ ಎಮಿಲಿಗೆ ಒಮ್ಮೆಲೆ ಗಾಬರಿಗೊಳ್ಳುತ್ತಾರೆ. ಬಳಿಕ ತಡಮಾಡದೇ ಏನಾಗಿದೆ ಎಂದು ಮೊಬೈಲ್ ಪರಿಶೀಲಿಸಿದಾಗ ಮಗಳ ಅಚಾತುರ್ಯ ಬೆಳಕಿಗೆ ಬರುತ್ತದೆ.
ತಾಯಿಯ ಕಾಂಟ್ಯಾಕ್ಟ್ ಲೀಸ್ಟ್ನಲ್ಲಿದ್ದ ಸಹೋದ್ಯೋಗಿಗಳು, ಯೂನಿವರ್ಸಿಟಿ ಸ್ನೇಹಿತರು ಮತ್ತು ಪರಿಚಯಸ್ಥರು ಸೇರಿದಂತೆ ಸುಮಾರು 15 ಮಂದಿಗೆ ಮಗಳು ಅಮ್ಮನ ಬೆತ್ತಲೆ ಫೋಟೋಗಳನ್ನು ಕಳುಹಿಸಿದ್ದಾಳೆ. ಇದಾದ ಬೆನ್ನಲ್ಲೇ ಎಮಿಲಿ ಮಗುವಿನ ಅಚಾತುರ್ಯದ ಬಗ್ಗೆ ತಿಳಿಸಿ ಎಲ್ಲರ ಕ್ಷಮೆಯಾಚಿಸಿದ್ದಾರೆ. ಕೆಲವರು ಬೆತ್ತಲೆ ಫೋಟೋ ಬದಲು ಮನೆಯ ಸೀಲಿಂಗ್ ಹಾಗೂ ಮಗುವಿನ ಕಾಲುಗಳ ಫೋಟೋ ಸ್ವೀಕರಿಸಿದ್ದಾಗಿ ಹೇಳಿದ್ದಾರೆ.
ಇನ್ನು ಮಗಳಿಂದ ತಾಯಿ ಅಷ್ಟೆಲ್ಲ ಮುಜುಗರ ಅನುಭವಿಸಿದರೂ ಆ ಬಗ್ಗೆ ಅಳುಕದೆ ಸಾಮಾಜಿಕ ಜಾಲತಾಣದಲ್ಲಿ ಧೈರ್ಯವಾಗಿ ಎಮಿಲಿ ಎಲ್ಲವನ್ನು ಹೇಳಿಕೊಂಡಿದ್ದಾರೆ. ಘಟನೆ ಬಗ್ಗೆ ಬರೆದುಕೊಂಡಿರುವ ಎಮಿಲಿ ನಿಜಕ್ಕೂ ತುಂಬಾ ಅವಮಾನ ಆದಂತಾಯಿತು. ಒಂದು ಕ್ಷಣ ಸತ್ತಂತಾಯಿತು. ಆದರೂ ತಿಳಿಯದೇ ಆದ ಘಟನೆಯಿಂದ ವಿಚಲಿತಗೊಳ್ಳಬಾರದೆಂದು ಸಮಾಧಾನ ಮಾಡಿಕೊಂಡೆ. ಎಲ್ಲರಿಗೂ ನಡೆದ ಘಟನೆಯನ್ನು ವಿವರಿಸಿ ಕ್ಷಮೆಯಾಚಿಸಿದೆ ಎಂದಿದ್ದಾರೆ. (ಏಜೆನ್ಸೀಸ್)