ಸಂಕಷ್ಟ ಕಳೆದು, ಸುಭಿಕ್ಷೆ ನೀಡುವ ಲೋಕೋದ್ಧಾರಕ ದತ್ತಗುರು

Dattatreya Jayanti
Published on
ರಾಜಗುರು ದ್ವಾರಕನಾಥ್
ರಾಜಗುರು ಬಿ.ಎಸ್.ದ್ವಾರಕಾನಾಥ
ಈ ಜಗತ್ತಿನಲ್ಲಿ ಬ್ರಹ್ಮ, ವಿಷ್ಣು, ಮಹೇಶ್ವರರು ಐಕ್ಯವಾಗಿರುವ ಸ್ಥಳವು ಒಂದೇ. ಅದುವೇ ದೇವಲ ಗಾಣಗಾಪುರ. ನಮ್ಮದೇ ಕರ್ನಾಟಕದ, ಕಲಬುರಗಿ ಜಿಲ್ಲೆಯಲ್ಲಿ ಬರುತ್ತದೆ. ಇಲ್ಲಿ ನಿರ್ಗಣ ಪಾದುಕೆಗಳ ಪೂಜೆ ಮತ್ತು ದರ್ಶನಕ್ಕೆ ವಿಶೇಷವಾದ ಮಹತ್ವ ಉಂಟು. ವೈಕುಂಠ ಏಕಾದಶಿ ಕಳೆದು 4ನೇ ದಿನಕ್ಕೆ ಬರುವ ಪೂರ್ಣಿಮೆಯನ್ನು ದತ್ತ ಪೂರ್ಣಿಮೆಯಂದೇ ಕರೆಯುತ್ತಾರೆ. ದತ್ತ ಪೂರ್ಣಿಮೆ ಎಂದರೆ ಕೊಡತಕ್ಕಂಥವನು ಎಂಬುದರ್ಥ.

ಅವತಾರದ ಹಿನ್ನೆಲೆ: ಮಾಂಡವ್ಯ ಮುನಿಯ ಶಾಪದಿಂದಾಗಿ ಒಮ್ಮೆ ಸೂರ್ಯೋದಯವೇ ಆಗದಿದ್ದ ಸಂದರ್ಭದಲ್ಲಿ ಭೀತರಾದ ದೇವತೆಗಳು, ಬ್ರಹ್ಮನ ಸಲಹೆಯಂತೆ ಅತ್ರಿಮುನಿಯ ಪತ್ನಿ ಅನಸೂಯೆಯ ಮೊರೆ ಹೋದರು. ಆಕೆ ತನ್ನ ತಪೋಬಲ ಪ್ರಯೋಗಿಸಿ ಮತ್ತೆ ಸೂರ್ಯೋದಯವಾಗುವಂತೆ ಮಾಡಿದಳು. ಇದರಿಂದ ಸಂತುಷ್ಟರಾದ ದೇವತೆಗಳು ಬೇಕಾದ ವರವನ್ನು ಕೇಳೆಂದು ಹೇಳಲು, ‘ಬ್ರಹ್ಮ ವಿಷ್ಣು ಮಹೇಶ್ವರರೇ ನನ್ನ ಮಕ್ಕಳಾಗಲಿ’ ಎಂದು ಕೇಳಿಕೊಂಡಳು. ಇತ್ತ ತಪೋನಿರತನಾಗಿದ್ದ ಅತ್ರಿಮಹರ್ಷಿಯ ತಪಸ್ಸಿಗೆ ಮೆಚ್ಚಿದ ತ್ರಿಮೂರ್ತಿಗಳು ‘ನಮ್ಮ ಅಂಶ ಸ್ವರೂಪರೇ ನಿನಗೆ ಮಕ್ಕಳಾಗುವರು’ ಎಂದು ಹರಸಿದರು.

ಪತಿವ್ರತೆ ಅನಸೂಯೆಯನ್ನು ಪರೀಕ್ಷಿಸಲೆಂದು ತ್ರಿಮೂರ್ತಿಗಳು ಒಮ್ಮೆ ಬ್ರಾಹ್ಮಣರ ವೇಷದಲ್ಲಿ ಆಶ್ರಮಕ್ಕೆ ಬಂದು, ಇಚ್ಛಾಭೋಜನ ನೀಡುವಂತೆ ಕೇಳಿದರು. ಆತಿಥ್ಯ ಸ್ವೀಕರಿಸುವ ವೇಳೆ, ‘ನೀನು ವಿವಸ್ತ್ರಳಾಗಿ ನಮಗೆ ಉಣ್ಣಲು ನೀಡಿದರೆ ಮಾತ್ರ ನಾವು ಸ್ವೀಕರಿಸುವೆವು’ ಎಂದರು. ಅನಸೂಯೆ ತನ್ನ ಪಾತಿವ್ರತ್ಯ ಬಲದಿಂದ ಅವರನ್ನು ನವಜಾತ ಶಿಶುಗಳನ್ನಾಗಿಸಿ ಹಾಲುಣಿಸಿದಳು. ಸಂತೃಪ್ತರಾದ ಅವರು, ತಮ್ಮ ನಿಜ ಸ್ವರೂಪದಿಂದ ದರ್ಶನವಿತ್ತು, ‘ನಾವೇ ನಿನ್ನ ಮಕ್ಕಳಾಗುವೆವು’ ಎಂದು ಅನುಗ್ರಹಿಸಿದರು. ಬ್ರಹ್ಮಾಂಶದಿಂದ ಚಂದ್ರನೂ, ವೈಷ್ಣವಾಂಶದಿಂದ ದತ್ತನೂ ಮತ್ತು ಶಿವಾಂಶದಿಂದ ದೂರ್ವಾಸನೂ ಜನಿಸಿದರು. ಮುಂದೆ, ಬ್ರಹ್ಮ ಮತ್ತು ಶಿವ ತಪಸ್ಸಿಗೆ ತೆರಳಲು ಅನುಮತಿ ನೀಡುವಂತೆ ಕೋರಿದರು. ಅದಕ್ಕೆ ಅನಸೂಯೆ ಸಮ್ಮತಿಸಿದರು. ಮುಂದೆ, ದತ್ತದೇವರು ಒಂದು ಮನೆಯ ಮುಂದೆ ಭಿಕ್ಷೆಗೆ ಹೋದರು. ಆ ಮನೆಯಲ್ಲಿ ಅಂದು ಶ್ರಾದ್ಧ ನಡೆಯುತ್ತಿದ್ದರೂ, ಭಿಕ್ಷೆಗೆ ಬಂದವರನ್ನು ವಾಪಸ್ ಕಳಿಸಬಾರದೆಂದು ಆ ಮನೆಯ ತಾಯಿ ಭಿಕ್ಷೆ ನೀಡಿದಳು. ಇದರಿಂದ, ಪ್ರಸನ್ನರಾದ ದತ್ತದೇವರು ಮುಂದೆ ಅದೇ ಮನೆಯಲ್ಲಿ ಅವತಾರವೆತ್ತಿದ್ದರು ಎಂಬ ಐತಿಹ್ಯವೂ ಇದೆ. ಲೋಕೋದ್ಧಾರಕ್ಕಾಗಿ ಅವತಾರವೆತ್ತಿರುವ ದತ್ತಾತ್ರೇಯರ ಶಕ್ತಿ ಅಸಾಧಾರಣ, ಅನನ್ಯ.

ಭಕ್ತಿಯ ಶಕ್ತಿ: ದೇಶದ ಸಮಸ್ತ ಜನತೆಯ ಅಜ್ಞಾನವನ್ನು ನಿವಾರಿಸಿ ಸುಜ್ಞಾನವ ಮೂಡಿಸಿದವರಲ್ಲಿ ಶ್ರೀ ದತ್ತಾತ್ರೇಯರು ಅಗ್ರಗಣ್ಯರು. ಈ ಕಾರಣದಿಂದಲೇ ಅವರನ್ನು ‘ದತ್ತಗುರು’ ಎಂದು ಕರೆಯುತ್ತಾರೆ. ಶ್ರೀಗುರು ದತ್ತಾತ್ರೇಯ ಕರುಣಾಮಯಿ. ಮನದುಂಬಿ ಮಾಡುವ ಯಾವ ರೀತಿಯ ಭಕ್ತಿಗೂ ತತ್​ಕ್ಷಣ ಬಂದು ಭಕ್ತನಿಗೆ ಅಪ್ಪಿಕೊಳ್ಳುವ ಸ್ವಭಾವ. ದತ್ತಾತ್ರೇಯರು ಅವಧೂತ ತತ್ತ್ವದ ಮೂಲಕ ತ್ರಿಲೋಕ ಕಲ್ಯಾಣ ಮಾಡಿದರು. ಸಾಕ್ಷಾತ್ ಭಗವಂತನೇ ಶ್ರೀಕೃಷ್ಣಾವತಾರದಲ್ಲಿ ಅರ್ಜುನನಿಗೆ ಹೇಳಿರುವಂತೆ ಹಲವಾರು ಯುಗಗಳಿಂದ ಹಲವಾರು ಅವತಾರ ಧರಿಸಿ ಲೋಕಕಲ್ಯಾಣ ಮಾಡಿದವರಲ್ಲಿ ದತ್ತಾವತಾರ ಪ್ರಮುಖ. ಗುರುಪರಂಪರೆಯ ಅಗ್ರಗಣ್ಯಮೂರ್ತಿಯಾದ ದತ್ತಾತ್ರೇಯನು ಸದಾ ಆತ್ಮಾನಂದದಲ್ಲಿ ವಿರಮಿಸುತ್ತ ವಿಹರಿಸುವ ಜ್ಞಾನಿಗಳ ಮೂಲಬಿಂದು. ಲೋಕವು ಅವನನ್ನು ಭಕ್ತಿಯಿಂದ ‘ದತ್ತಾವಧೂತ’ ಎಂದು ಕರೆಯಿತು.

dattatreya
ಗಾಣಗಾಪುರದಲ್ಲಿರುವ ನಿರ್ಗುಣ ಪಾದುಕೆ

ದತ್ತಾತ್ರೇಯರು ಇಂದಿಗೂ ಭಕ್ತರಿಗೆ ಅನೇಕ ರೀತಿಯ ಅನುಗ್ರಹ ಮಾಡುತ್ತಿದ್ದಾರೆ. ಅವರು ಸಂಸಾರಸಾಗರದಲ್ಲಿಯೇ ಇದ್ದರೂ ಸಂತೋಷದಿಂದ ವಿಹರಿಸುತ್ತಾರೆ. ಪ್ರತಿದಿನವೂ ಅವರು ಅಖಂಡಭಾರತದಲ್ಲಿ ಸಂಚರಿಸುತ್ತಾರೆ ಎನ್ನಲಾಗಿದೆ. ಬೆಳಗಿನ ಉಪಾಹಾರ, ಮಧ್ಯಾಹ್ನದ ಭೋಜನ, ಸಂಜೆಯ ವಿಹಾರ ಬಹುದೂರದ ಒಂದೊಂದು ಊರಿನಲ್ಲಿ ಆಗುವುದರಿಂದ ಒಂದು ದಿನ ಮುಗಿಯುವುದರಲ್ಲಿ ಅವರ ದೇಶಸಂಚಾರ ಸಂಪನ್ನವಾಗಿರುತ್ತದೆ.

ಗುರುಚರಿತ್ರೆ ಪಾರಾಯಣ: ಮನುಷ್ಯನಿಗೆ ಆರೋಗ್ಯವೇ ದೊಡ್ಡ ಯೋಗ. ಆರೋಗ್ಯವೊಂದಿದ್ದರೆ ಏನನ್ನೂ ಸಾಧಿಸಬಹುದು. ಹಾಗಾಗಿ, ಗುರುಚರಿತ್ರೆಯ ನಿತ್ಯ ಪಾರಾಯಣ ಮಾಡಿದರೆ ರೋಗಗಳು ಬರುವುದಿಲ್ಲ. ಕಾಯಿಲೆಗಳು ಇದ್ದಲ್ಲಿ ವಾಸಿಯಾಗುತ್ತವೆ. ಇದಕ್ಕೆ ಅಸಂಖ್ಯ ನಿದರ್ಶನಗಳಿವೆ. ಗಾಣಗಾಪುರದಲ್ಲಿ ಗುರು ಚರಿತ್ರೆ ಪಾರಾಯಣ ಮಾಡುವುದು ಇನ್ನೂ ವಿಶೇಷ. ಬಡರೈತನ ಬೆಳೆಯನ್ನು ಕಾಪಾಡಿ, ಹಾರೈಸಿದ ನಿದರ್ಶನ ಗುರುಚರಿತ್ರೆಯ 49ನೇ ಅಧ್ಯಾಯದಲ್ಲಿ ಬರುತ್ತದೆ. ಇಂಥ ಹಲವು ಲೀಲೆಗಳ ದರ್ಶನ ಗುರುಚರಿತ್ರೆಯಲ್ಲಿ ಕಾಣಬಹುದು.

ನಮ್ಮಲ್ಲಿನ ಕೊರತೆಗಳನ್ನು ನಿವಾರಿಸಿಕೊಂಡು, ದತ್ತನನ್ನು ಭಕ್ತಿಯಿಂದ ಭಜಿಸಬೇಕಷ್ಟೇ. ದತ್ತ ಎಂದರೆ ಕೊಡುವವನು. ಕೊಟ್ಟೇ ಕೊಡುತ್ತಾನೆ. ಎಲ್ಲ ಬಗೆಯ ಸಂಕಷ್ಟಗಳನ್ನು ಕಳೆಯುತ್ತಾನೆ. ಬ್ರಹ್ಮ, ವಿಷ್ಣು, ಮಹೇಶ್ವರರು ದತ್ತನ ರೂಪದಲ್ಲಿ ಗಾಣಗಾಪುರದಲ್ಲಿ ನೆಲೆಸಿದ್ದಾರೆ. ಹಾಗಾಗಿ, ಇದು ರಾಷ್ಟ್ರದ ಹೃದಯಭಾಗ. ಎಲ್ಲರೂ ಇಲ್ಲಿ ಬಂದು ದರ್ಶನ ಪಡೆಯಬೇಕು. ಇಲ್ಲಿರುವ ಅರ್ಚಕರು ತುಂಬ ಶ್ರದ್ಧೆ, ಭಕ್ತಿಯಿಂದ ಪೂಜೆ ಮಾಡಬೇಕು. ಭಕ್ತರುಗಳನ್ನು ದತ್ತನೆಂದೇ ತಿಳಿಯಬೇಕು. ನಕಾರಾತ್ಮಕ ಶಕ್ತಿಗಳ ಪಾಶಕ್ಕೆ ಸಿಲುಕಿದವರು ಕೂಡ ಗಾಣಗಾಪುರಕ್ಕೆ ಬಂದು, ದತ್ತನ ಸೇವೆ ಮಾಡಿ ಗುಣಮುಖರಾಗುತ್ತಾರೆ, ಹೊಸ ಜೀವನ ಕಂಡುಕೊಳ್ಳುತ್ತಾರೆ. ಆಳುಗರು ಕೂಡ ಅವರ ಜವಾಬ್ದಾರಿಯನ್ನು ನಿಭಾಯಿಸಬೇಕು. ಈ ಕ್ಷೇತ್ರದ ಅಭಿವೃದ್ಧಿಗೆ ಸಂಕಲ್ಪಿಸಿ, ಕಾರ್ಯೋನ್ಮುಖರಾಗಬೇಕು. ಸಕಲರಿಗೂ ಆರೋಗ್ಯ, ಮನಶಾಂತಿಯನ್ನು ಆ ದತ್ತನು ಪ್ರದಾನಿಸಲಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net