

ನವದೆಹಲಿ: ಕೋವಿಡ್-19 ಮಹಾಸೋಂಕಿನ ಕುರಿತು ದೇಶದಲ್ಲಿ ನಡೆಸಿದ ಪರೀಕ್ಷೆಗಳ ದತ್ತಾಂಶಗಳು ಮಾರಾಟಕ್ಕೆ ಲಭ್ಯವಿದೆ ಎಂದು ದುಷ್ಕರ್ವಿುಯೊಬ್ಬ ಹೇಳಿಕೊಂಡಿರುವುದು ಸಂಚಲನವನ್ನು ಸೃಷ್ಟಿಸಿದೆ. ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯಲ್ಲಿ (ಐಸಿಎಂಆರ್) ಕೋವಿಡ್ ಕುರಿತಂತೆ 81.5 ಕೋಟಿ ಭಾರತೀಯರ ದತ್ತಾಂಶ (ಡೇಟಾ) ಸಂಗ್ರಹವಿದೆ.
ಡೇಟಾ ಸೋರಿಕೆ ನಿಜವೇ ಆದಲ್ಲಿ ಅದು ಭಾರತದ ಅತಿ ದೊಡ್ಡ ದತ್ತಾಂಶ ಸೋರಿಕೆ ಪ್ರಕರಣ ಆಗಲಿದೆ. ಪ್ರಕರಣದ ಗಂಭೀರತೆಯನ್ನು ಪರಿಗಣಿಸಿ ಕೇಂದ್ರೀಯ ತನಿಖಾ ದಳ (ಸಿಬಿಐ) ಇದರ ತನಿಖೆ ನಡೆಸುವ ಸಾಧ್ಯತೆಯಿದೆ. ಐಸಿಎಂಆರ್ ಅಧಿಕೃತವಾಗಿ ದೂರು ಸಲ್ಲಿಸಿದ ತಕ್ಷಣವೇ ಸಿಬಿಐ ಕಾರ್ಯಾಚರಣೆಗೆ ಇಳಿಯಲಿದೆ.
ಎಕ್ಸ್ನಲ್ಲಿ ಖಾತೆ ಹೊಂದಿರುವ ವ್ಯಕ್ತಿಯೊಬ್ಬ ಡಾರ್ಕ್ ವೆಬ್ನಲ್ಲಿ ಭಾರತೀಯರ ಡೇಟಾ ಲಭ್ಯತೆ ಕುರಿತು ಜಾಹೀರಾತು ನೀಡಿದ್ದಾನೆ. ಅದರಲ್ಲಿ 81.5 ಕೋಟಿ ಭಾರತೀಯರ ಆಧಾರ್ ಮತ್ತು ಪಾಸ್ಪೋರ್ಟ್ ಮಾಹಿತಿಗಳಲ್ಲದೆ ಹೆಸರು, ಫೋನ್ ಸಂಖ್ಯೆ ಮತ್ತು ವಿಳಾಸಗಳು ಕೂಡ ಇವೆ. ಐಸಿಎಂಆರ್ನಲ್ಲಿರುವ ಕೋವಿಡ್-19 ಪರೀಕ್ಷಾ ವಿವರದಿಂದ ಈ ಡೇಟಾವನ್ನು ಕದ್ದಿರುವುದಾಗಿ ದುಷ್ಕರ್ವಿು ಹೇಳಿಕೊಂಡಿದ್ದಾನೆ.