

ಪೀಣ್ಯದಾಸರಹಳ್ಳಿ: ದಾಸರಹಳ್ಳಿ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಹಾಗೂ ಹಾಲಿ ಶಾಸಕ ಆರ್. ಮಂಜುನಾಥ್ ಕ್ಷೇತ್ರದ ವಿವಿಧ ಬಡಾವಣೆಗಳಲ್ಲಿ ರೋಡ್ ಶೋ ಮೂಲಕ ಮತಯಾಚನೆ ಮಾಡಿದರು.
ಮಲ್ಲಸಂದ್ರ ವಾರ್ಡ್ನ ಮಲ್ಲಸಂದ್ರ ಸರ್ಕಲ್, ಶನಿಮಹಾತ್ಮ ದೇವಸ್ಥಾನ, ರವೀಂದ್ರನಗರ, ಕಲ್ಯಾಣನಗರ, ಬೈಲಪ್ಪ ಸರ್ಕಲ್, ದಾಸರಹಳ್ಳಿ ಮಾರ್ಕೆಟ್ ನೆಲಮಹೇಶ್ವರಮ್ಮ ರಸ್ತೆ, ಕಾಳಿಯಮ್ಮ ದೇವಸ್ಥಾನ, ಗಣೇಶ ಸಾಮಿಲ್ ರಸ್ತೆ, ಗಾರ್ಡನ್ ಶಾಲೆ ರಸ್ತೆ ಹೀಗೆ ವಿವಿಧ ಭಾಗಗಳಲ್ಲಿ ಪ್ರಚಾರ ನಡೆಸಿದರು. ಕಳೆದ ಐದು ವರ್ಷಗಳಲ್ಲಿ ತಾವು ಅನುಷ್ಠಾನಗೊಳಿಸಿದ ಅಭಿವೃದ್ಧಿ ಯೋಜನೆಗಳ ಬಗ್ಗೆ ಮತದಾರರಿಗೆ ಮಾಹಿತಿ ನೀಡಿದರು. ಇದೇ ವೇಳೆ ನೂರಾರು ಕಾರ್ಯಕರ್ತರು ಬೈಕ್ ರ‍್ಯಾಲಿ ನಡೆಸಿದರು.
ಬಳಿಕ ಮಾತಾಡಿದ ಮಂಜುನಾಥ್, ಕ್ಷೇತ್ರದಲ್ಲಿ ನಾನು ಮಾಡಿರುವ ಅಭಿವೃದ್ಧಿಯನ್ನು ಗಮನಿಸಿ ಮತ ನೀಡಬೇಕು. ಆ ಮೂಲಕ ಜೆಡಿಎಸ್ ಮತ್ತೆ ಅಧಿಕಾರಕ್ಕೆ ಬರುವಂತೆ ಮಾಡಬೇಕೆಂದು ಮನವಿ ಮಾಡಿದರು. ಹಲವು ವಾರ್ಡ್ಗಳಲ್ಲಿ ಪಾದಯಾತ್ರೆ ಮಾಡುವ ಮೂಲಕ ಮತಯಾಚನೆಯನ್ನು ಮಾಡಲಾಗಿದೆ. ಹೋದಲ್ಲೆಲ್ಲ ಕ್ಷೇತ್ರದ ಜನರು ಅದ್ದೂರಿ ಸ್ವಾಗತವನ್ನು ನೀಡುತ್ತಿದ್ದಾರೆ. ಹೆಣ್ಣುಮಕ್ಕಳು ಆರತಿ ಮಾಡುವ ಮೂಲಕ ವಾರ್ಡ್ಗಳಿಗೆ ಬರಮಾಡಿಕೊಳ್ಳುತ್ತಿದ್ದಾರೆ ಎಂದರು.
ದಾಸರಹಳ್ಳಿಯಲ್ಲಿ ಹಲವು ವರ್ಷಗಳಿಂದ ಬಾಕಿ ಇದ್ದ ರಾಜಕಾಲುವೆ ತಡೆ ಗೋಡೆ ನಿರ್ಮಾಣ ಸೇರಿ ರಸ್ತೆ, ಒಳಚರಂಡಿ ವ್ಯವಸ್ಥೆ, ಕಾವೇರಿ ನೀರಿನ ಪೂರೈಕೆ ಮತ್ತಿತರ ಸೌಕರ್ಯಗಳಿಗೆ ಹೆಚ್ಚಿನ ಒತ್ತು ನೀಡಲಾಗುತ್ತದೆ. 25 ವರ್ಷಗಳಿಂದ ಮನೆ ಕಟ್ಟಿಕೊಂಡು ಅಗತ್ಯ ಭೂದಾಖಲೆಗಳಲ್ಲಿದೆ ಅತಂತ್ರರಾಗಿದ್ದ ನೂರಾರು ಬಡ ಕುಟುಂಬಗಳಿಗೆ ಹಕ್ಕು ಪತ್ರಗಳನ್ನು ವಿತರಿಸಲಾಗಿದೆ ಎಂದು ತಿಳಿಸಿದರು.