More

    ದಾಸರಹಳ್ಳಿ ಕಡೆಗಣನೆಯಾಗದಿರಲಿ: ಕ್ಷೇತ್ರದಿಂದ ವಾರ್ಷಿಕ ಸರಾಸರಿ 1500 ಕೋಟಿ ರೂ. ಜಿಎಸ್​ಟಿ

    ಬೆಂಗಳೂರು: ದಾಸರಹಳ್ಳಿ ವಿಧಾನಸಭಾ ಕ್ಷೇತ್ರ ರಾಜ್ಯದ ಪಾಲಿಗೆ ಅಕ್ಷರಶಃ ಚಿನ್ನದ ಭೂಮಿ. ಅತಿ ದೊಡ್ಡ ಕೈಗಾರಿಕೆ ಪ್ರದೇಶ ಹೊಂದಿರುವ ಈ ಕ್ಷೇತ್ರದಿಂದ ಸರ್ಕಾರದ ಬೊಕ್ಕಸಕ್ಕೆ ವಾರ್ಷಿಕ ಸರಾಸರಿ 1500 ಕೋಟಿ ರೂಪಾಯಿಯಷ್ಟು ಜಿಎಸ್​ಟಿ ಸಂದಾಯವಾಗುತ್ತಿದೆ. ಬಿಬಿಎಂಪಿಗೆ 130 ಕೋಟಿ ರೂ. ತೆರಿಗೆ ಸಲ್ಲಿಕೆಯಾಗುತ್ತಿದೆ. ಇಷ್ಟಾದರೂ ಮೂಲ ಸೌಕರ್ಯ ಮಾತ್ರ ಮರೀಚಿಕೆ. ಇನ್ನಾದರೂ ಸರ್ಕಾರ ಹೆಚ್ಚು ಅನುದಾನ ನೀಡಿ ಸಮಸ್ಯೆಗಳನ್ನು ಬಗೆಹರಿಸಲಿದೆ ಎಂಬ ವಿಶ್ವಾಸ ಅಲ್ಲಿನ ಶಾಸಕರದ್ದಾಗಿದೆ.

    ವಿಜಯವಾಣಿ ಫೋನ್​ಇನ್ ಹಾಗೂ ಸಂವಾದ ಕಾರ್ಯಕ್ರಮದಲ್ಲಿ ಅನಿಸಿಕೆ ಹಂಚಿಕೊಂಡ ದಾಸರಹಳ್ಳಿ ಶಾಸಕ ಆರ್.ಮಂಜುನಾಥ್, ಕ್ಷೇತ್ರದ ವಿಶೇಷತೆ ಮತ್ತು ಸರ್ಕಾರದಿಂದ ಅಪೇಕ್ಷಿಸುವ ಆದ್ಯತೆ ಕುರಿತು ಪ್ರಸ್ತಾಪಿಸಿದರು. ಕರೊನಾ ಲಾಕ್​ಡೌನ್​ನಿಂದ ಪೀಣ್ಯ ಕೈಗಾರಿಕಾ ಪ್ರದೇಶದಲ್ಲಿರುವ ಕೈಗಾರಿಕೆಗಳು ದೊಡ್ಡ ಪ್ರಮಾಣದಲ್ಲಿ ಸಮಸ್ಯೆಗೆ ಸಿಲುಕಿವೆ. ಅಲ್ಲಿ ಕಾರ್ಯನಿರ್ವಹಿಸುವ 5 ಲಕ್ಷ ಮಹಿಳೆಯರೂ ಸೇರಿ 9 ಲಕ್ಷ ಕಾರ್ವಿುಕರು ಆಪತ್ತಿನಿಂದ ಪಾರಾಗಬೇಕೆಂದರೆ ಸರ್ಕಾರ ಇಲ್ಲಿನ ಕೈಗಾರಿಕೆಗಳ ಪುನಶ್ಚೇತನಕ್ಕೆ ಆದ್ಯತೆ ನೀಡಲೇಬೇಕು ಮತ್ತು ಕ್ಷೇತ್ರದ ಅಭಿವೃದ್ಧಿಗೆ ತಡೆಹಿಡಿದ ಅನುದಾನ ಬಿಡುಗಡೆ ಮಾಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.

    ಮೈತ್ರಿ ಸರ್ಕಾರವಿದ್ದಾಗ ನಮ್ಮ ಕ್ಷೇತ್ರದ ಹತ್ತು ಹಲವು ಯೋಜನೆಗಳಿಗೆ ಅನುಮೋದನೆ ಸಿಕ್ಕಿತ್ತು. ಬದಲಾದ ರಾಜಕೀಯ ಬೆಳವಣಿಗೆಯಿಂದ ಎಲ್ಲಕ್ಕೂ ತಡೆಯಾಗಿದೆ. ಎಂಟು ವಾರ್ಡ್​ಗಳಿಗೆ ಹಾಗೂ ಎರಡು ಗ್ರಾಮ ಪಂಚಾಯಿತಿಗಳ ಸಮಸ್ಯೆ ನಿವಾರಣೆಗೆ ಹಿಂದಿನ ಸಿಎಂ ಎಚ್.ಡಿ. ಕುಮಾರಸ್ವಾಮಿ ಮತ್ತು ಲೋಕೋಪಯೋಗಿ ಸಚಿವ ಎಚ್.ಡಿ. ರೇವಣ್ಣ ಅವರು ಹಣ ಬಿಡುಗಡೆಗೆ ಆದೇಶ ಮಾಡಿದ್ದರು.

    ಈಗ ಅನುದಾನ ಇಲ್ಲದೆ ಸಮಸ್ಯೆಗಳೆಲ್ಲ ಹಾಗೇ ಉಳಿಯುವಂತಾಗಿದೆ. ದೊಡ್ಡ ಪ್ರಮಾಣದಲ್ಲಿ ಉದ್ಯೋಗ ಸೃಷ್ಟಿಯಾಗಿರುವ ಕ್ಷೇತ್ರಕ್ಕೆ ಈಗ ಎಲ್ಲಾ ರೀತಿಯ ಉತ್ತೇಜನದ ಅಗತ್ಯವಿದೆ. ಈ ಸಂಬಂಧ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದು, ಸ್ಪಂದಿಸುತ್ತಾರೆಂಬ ವಿಶ್ವಾಸವಿದೆ ಎಂದು ಆರ್.ಮಂಜುನಾಥ್ ಹೇಳಿದರು. ‘ನಾನು ಎಸ್.ಎಂ. ಕೃಷ್ಣ ಅವರ ಭದ್ರತಾ ಕಾರ್ಯದಲ್ಲಿ ಬಹುಕಾಲ ಇದ್ದವನು. ಅವರ ಆಶೀರ್ವಾದದಿಂದ ಜನಸೇವೆ ಮಾಡುವ ಅವಕಾಶ ಸಿಕ್ಕಿತು. ಹಣ, ಆಸ್ತಿ ಮಾಡಲು ನಾನು ಶಾಸಕನಾಗಲಿಲ್ಲ. ಪಾಲಿಕೆ, ಗ್ರಾಮ ಪಂಚಾಯಿತಿಯಲ್ಲಿ ಒಬ್ಬನೇ ಒಬ್ಬ ಜೆಡಿಎಸ್ ಸದಸ್ಯನಿಲ್ಲದ ಕ್ಷೇತ್ರದಲ್ಲಿ ನನ್ನನ್ನು ಜನ ಗೆಲ್ಲಿಸಿದರು. ಜನರೇ ಗುರುತಿಸಿ ಆಯ್ಕೆ ಮಾಡಿದರು. ಅವರ ಋಣ ತೀರಿಸುವ ಜವಾಬ್ದಾರಿ ನನ್ನ ಮೇಲಿದ್ದು, ನಿರಂತರವಾಗಿ ತೊಡಗಿಕೊಂಡಿದ್ದೇನೆ. ನಾನು ಪಕ್ಷ ರಾಜಕಾರಣ ಮಾಡಲ್ಲ. ಕ್ಷೇತ್ರದ ಸಮಸ್ಯೆ ಪರಿಹಾರವಾಗಬೇಕೆಂಬುದಷ್ಟೇ ನನ್ನ ಬೇಡಿಕೆ’ ಎಂದು ಅವರು ತಿಳಿಸಿದರು. ‘ಹಿಂದೆ ಹೊಲ ಗದ್ದೆಗಳಲ್ಲಿ ಕಲ್ಲುನೆಟ್ಟು ನಿವೇಶನ ಮಾಡಿ ಹಂಚಿದ್ದಾರೆ. ಅನೇಕ ಕಡೆ ಮೂಲಸೌಕರ್ಯವಿರಲಿ ಚರಂಡಿ ಸಹ ಇಲ್ಲ. ಪಾರ್ಕ್​ಗಳಿಲ್ಲ. ರಾಜಕಾಲುವೆ ಸರಿ ಇಲ್ಲ. ಕೆರೆಗಳು ಅಧ್ವಾನವಾಗಿವೆ. ಕೈಗಾರಿಕೆ ಸ್ನೇಹಿ ವಾತಾವರಣ ಬೇಕಾಗಿದೆ. ಸರ್ಕಾರ ಅನುದಾನ ನೀಡುತ್ತದೆ ಎಂಬ ವಿಶ್ವಾಸದಲ್ಲಿದ್ದೇನೆ. ಕೊಡದೇ ಇದ್ದರೆ ಮೈತ್ರಿ ಸರ್ಕಾರ ಮಾಡಿದ್ದ ಆದೇಶಗಳ ಪ್ರತಿಯನ್ನು ಮನೆ ಮನೆ ಹಂಚುತ್ತೇನೆ, ಇನ್ನೇನು ಮಾಡಲು ಸಾಧ್ಯ’ ಎಂದರು.

    ನಾನು ಶಾಸಕನಾದ ಮೇಲೆ ಯಾವುದೇ ಒಂದು ಪಕ್ಷಕ್ಕೆ ಸೀಮಿತವಾಗಿಲ್ಲ. ನನಗೆ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಎಲ್ಲರೂ ಒಂದೇ. ಅಭಿವೃದ್ಧಿ ವಿಚಾರದಲ್ಲಿ ನಾನು ಯಾವುದೇ ಪಕ್ಷ ರಾಜಕಾರಣ ಮಾಡುವುದಿಲ್ಲ. ಬಡ ಜನರ ಸಮಸ್ಯೆಗಳು ಪರಿಹಾರವಾಗಬೇಕು ಎಂಬುದು ನನ್ನ ಹೆಬ್ಬಯಕೆ. ಇದಕ್ಕೆ ಸಿಎಂ ಸ್ಪಂದಿಸುವ ವಿಶ್ವಾಸವಿದೆ.
    | ಆರ್.ಮಂಜುನಾಥ್ ಶಾಸಕ

    ಕರೊನಾ ನಿರ್ವಹಣೆ ಬೆಸ್ಟ್

    ಕರೊನಾ ಲಾಕ್​ಡೌನ್ ಸಂದರ್ಭದಲ್ಲಿ ದಾಸರಹಳ್ಳಿಯಲ್ಲಿ ಸಂಕಷ್ಟದಲ್ಲಿ ಸಿಲುಕಿದವರಿಗೆ ಶಾಸಕ ಆರ್.ಮಂಜುನಾಥ್ ದಿನಸಿ ಕಿಟ್ ವಿತರಿಸಿ ಸ್ಪಂದಿಸಿದ ರೀತಿ ಫೋನ್​ಇನ್ ವೇಳೆ ಪ್ರತಿಧ್ವನಿಸಿತು. ಕ್ಷೇತ್ರದ ಸಮಸ್ಯೆ ಬಗೆಹರಿಸಲು ಕರೆ ಮಾಡಿದವರಲ್ಲಿ ಬಹುತೇಕರು ಆಪತ್ಕಾಲದಲ್ಲಿ ದಿನಸಿ ಕಿಟ್ ತಲುಪಿದ್ದರ ಬಗ್ಗೆ ಕೃತಜ್ಞತೆ ಸಲ್ಲಿಸಿದರು. ಕಳೆದ ಎರಡು ತಿಂಗಳಲ್ಲಿ ಬರೋಬ್ಬರಿ 80 ಸಾವಿರ ಕುಟುಂಬಕ್ಕೆ ಶಾಸಕರು ಕಿಟ್ ವಿತರಿಸಿದ್ದಲ್ಲದೇ ಎಚ್​ಡಿಡಿ, ಎಚ್​ಡಿಕೆ ಕ್ಯಾಂಟೀನ್ ಮೂಲಕ 41 ಸಾವಿರ ಊಟ ನೀಡಿದ್ದಾರೆ. ರೈತರಿಂದ ತರಕಾರಿ ಖರೀದಿಸಿ ಕ್ಷೇತ್ರದ ಜನರಿಗೆ ಹಂಚಿದ್ದಾರೆ.

    ಭೂಗತ ಪಾತಕಿ ರವಿ ಪೂಜಾರಿಗೆ ಶಾಕ್​ ನೀಡಲು ಇಡಿ ಸಿದ್ಧತೆ

    ಬೆಂಗ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts