More

    ‘ಶಿಬಿರಗಳು ಪರಿಸರ ಜಾಗೃತಿ ಮೂಡಿಸಲಿ’

    ಮೈಸೂರು: ಬೇಸಿಗೆ ಶಿಬಿರಗಳು ಕೇವಲ ಮನೋರಂಜನೆ ಕೊಡುವುದಷ್ಟೇ ಉದ್ದೇಶವಾಗಬಾರದು. ಕಲೆ, ಸಾಹಿತ್ಯ, ಸಂಸ್ಕೃತಿ ಜತೆಗೆ ಸ್ವಚ್ಛತೆ, ಆರೋಗ್ಯ, ನೀರಿನ ಮಿತಬಳಕೆ ಮತ್ತು ಸಂರಕ್ಷಣೆಯ ಕುರಿತು ತಿಳಿವಳಿಕೆ ಮೂಡಿಸುವ ಕೆಲಸ ಮಾಡಬೇಕು ಎಂದು ಜಿಲ್ಲಾ ಸರ್ಕಾರಿ ನೌಕರರ ಸಂಘದ ನಿರ್ದೇಶಕ ಟಿ.ಸತೀಶ್ ಜವರೇಗೌಡ ಹೇಳಿದರು.
    ಮೈಸೂರು ತಾಲೂಕು ಮೆಲ್ಲಹಳ್ಳಿ(ಹಾರೋಹಳ್ಳಿ) ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಆರ್‌ಎಲ್ಎಚ್‌ಪಿ ಸ್ವಯಂ ಸೇವಾ ಸಂಸ್ಥೆ ಹಾಗೂ ಹಿರಿಯ ಪ್ರಾಥಮಿಕ ಶಾಲೆಯ ಸಹಯೋಗದೊಂದಿಗೆ ಸರ್ಕಾರಿ ಶಾಲಾ ಮಕ್ಕಳಿಗಾಗಿ ಆಯೋಜಿಸಿದ್ದ ಹತ್ತು ದಿನಗಳ ಕಾಲದ ‘ಬೇಸಿಗೆ ಶಿಬಿರ’ವನ್ನು ಗಿಡಕ್ಕೆ ನೀರೆರೆಯುವ ಮೂಲಕ ಸೋಮವಾರ ಉದ್ಘಾಟಿಸಿ ಮಾತನಾಡಿದರು.
    ಪ್ರಕೃತಿಯ ಮೇಲೆ ದಿನೇ ದಿನೆ ಶೋಷಣೆ ಹೆಚ್ಚುತ್ತಿದೆ. ಇದರಿಂದಾಗಿ ಭೂಮಿಯ ತಾಪಮಾನ ವಿಪರೀತ ಏರಿದೆ. ಮಳೆಯ ಪ್ರಮಾಣವೂ ತಗ್ಗಿದೆ. ಹಾಗಾಗಿ ಬೇಸಿಗೆ ಶಿಬಿರಗಳು ಮಕ್ಕಳಲ್ಲಿ ಪರಿಸರ ಪ್ರಜ್ಞೆ ಬೆಳೆಸಲು ಒತ್ತು ನೀಡಬೇಕು. ಆ ಮೂಲಕ ಪರಿಸರ ಸಂರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸಬೇಕು. ಬರಗಾಲ ಬಾರದಂತೆ ತಡೆಯಲು ಗಿಡಗಳ ನೆಡುವ ಮತ್ತು ಪೋಷಿಸುವ ಕಾರ್ಯಕ್ಕೆ ಮಕ್ಕಳನ್ನು ತೊಡಗಿಸಿ, ಅವರಲ್ಲಿ ಪರಿಸರ ಪ್ರೀತಿ ಬೆಳೆಸಬೇಕಿದೆ ಎಂದರು.
    ಹಾರೋಹಳ್ಳಿ ಕಿರಿಯ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕ ಸಂತೋಷ್ ಬಿ.ಶೆಟ್ಟಿ ಮಾತನಾಡಿ, ನಗರಗಳಲ್ಲಿ ಬೇಸಿಗೆ ಶಿಬಿರಕ್ಕೆ ಸಾವಿರಾರು ರೂ. ಶುಲ್ಕ ಪಾವತಿ ಮಾಡಬೇಕು. ಆದರೆ ನಾವು ಗ್ರಾಮೀಣ ಮಕ್ಕಳಿಗೂ ಬೇಸಿಗೆ ಶಿಬಿರದ ಪ್ರಯೋಜನ ಲಭಿಸಲಿ ಎಂದು ಪ್ರತಿದಿನ ವಿಶೇಷ ಊಟೋಪಚಾರದ ಜತೆಗೆ ಉಚಿತ ಶಿಬಿರ ಆಯೋಜಿಸಿದ್ದು ಇದನ್ನು ಸದ್ಬಳಕೆ ಮಾಡಿಕೊಳ್ಳುವಂತೆ ತಿಳಿಸಿದರು.
    ಮೆಲ್ಲಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕಿ ಪಿ.ಎನ್.ವೀಣಾ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಕಿಯರಾದ ಲೀನಾ ಡಿಸೋಜ, ಶುಭಾ, ಆರ್‌ಎಲ್ಎಚ್‌ಪಿ ಸಂಸ್ಥೆಯ ಸರಸ್ವತಿ ಇತರರು ಇದ್ದರು.
    ‘ಆರೋಗ್ಯ ಮತ್ತು ಪರಿಸರ ಸಂರಕ್ಷಣೆ’ಯ ವಿಚಾರದಡಿ ಸರ್ಕಾರಿ ಶಾಲೆ ಮಕ್ಕಳಿಗಾಗಿ ದಶಕದಿಂದ ಕಾಲ ಈ ಬೇಸಿಗೆ ಶಿಬಿರವು ನಡೆಸಿಕೊಂಡು ಬರಲಾಗುತ್ತಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts