

ಬೆಂಗಳೂರು: ಮುಜರಾಯಿ ಇಲಾಖೆ ವ್ಯಾಪ್ತಿಗೆ ಒಳಪಡುವ ದೇವಾಲಯಗಳ ನೌಕರರು ಹಾಗೂ ಅರ್ಚಕರಿಗೆ ಆರನೇ ವೇತನ ಆಯೋಗದ ಶಿಫಾರಸು ಜಾರಿ ಮಾಡುವ ಜತೆಗೆ ವಿಮೆ ಸೌಲಭ್ಯ ಒದಗಿಸುವ ನಿರ್ಧಾರದೊಂದಿಗೆ ರಾಜ್ಯ ಸರ್ಕಾರ ದಸರಾ ಕೊಡುಗೆ ನೀಡಿದೆ. ಸುಮಾರು 37 ಸಾವಿರ ಜನರಿಗೆ ಈ ತೀರ್ವನದಿಂದ ಅನುಕೂಲವಾಗಲಿದೆ. ದೇವಾಲಯಗಳ ಅರ್ಚಕರು, ನೌಕರರು ಆರೋಗ್ಯ ಸಮಸ್ಯೆಗೆ ಒಳಗಾದರೆ ಅವರಿಗೆ ರಕ್ಷಣೆ ಒದಗಿಸಲು ವಿಮೆ ಯೋಜನೆ ಜಾರಿ ಚಿಂತನೆಯನ್ನು ಸರ್ಕಾರ ಈ ಹಿಂದೆಯೇ ನಡೆಸಿತ್ತು. ಅದರಂತೆ ಈಗ ಆರೋಗ್ಯ ವಿಮೆ ಜಾರಿ ಮಾಡಿದೆ. ರಾಜ್ಯದ ಎ ಮತ್ತು ಬಿ ಗ್ರೇಡ್ ದೇವಾಲಯಗಳ ಅರ್ಚಕರು ಹಾಗೂ ನೌಕರರು 5ನೇ ವೇತನ ಆಯೋಗದ ವೇತನ ಪಡೆಯುತ್ತಿದ್ದಾರೆ, ಅವರಿಗೆ ಅ.1ರಿಂದಲೇ ಜಾರಿಗೆ ಬರುವಂತೆ 6ನೇ ವೇತನ ಆಯೋಗದ ಶಿಫಾರಸು ಜಾರಿಯಾಗಲಿದೆ. ದೇವಾಲಯದ ವಾರ್ಷಿಕ ಆದಾಯದಲ್ಲಿ ನೌಕರರ ವೇತನ ಶೇ.35 ಮೀರದಂತೆ 6ನೇ ವೇತನ ಆಯೋಗದ ವ್ಯಾಪ್ತಿಗೆ ಒಳಪಡಿಸುವ ಷರತ್ತು ಬೀಳಲಿದೆ.
ಈ ತೀರ್ಮಾನದಿಂದ ಮುಜರಾಯಿ ಇಲಾಖೆಯ ಸುಮಾರು 1034 ಸಿಬ್ಬಂದಿ- ಅರ್ಚಕರಿಗೆ ಅನುಕೂಲವಾಗಲಿದೆ. ಇದಕ್ಕೆ 20 ಕೋಟಿ ರೂ. ಹೆಚ್ಚುವರಿ ಆರ್ಥಿಕ ಹೊರೆಯಾಗಲಿದೆ. ಈ ವೇತನವನ್ನು ಆಯಾ ದೇವಸ್ಥಾನಗಳ ಆದಾಯದಿಂದಲೇ ಭರಿಸುವುದರಿಂದ ಸರ್ಕಾರಕ್ಕೆ ಆರ್ಥಿಕ ಹೊರೆಯಾಗುವುದಿಲ್ಲ.
ಆನ್ಲೈನ್ ಸೇವೆ: ಮುಜರಾಯಿ ದೇಗುಲಗಳ ಮಾಹಿತಿಯನ್ನು ಆನ್ಲೈನ್ ಮೂಲಕ ನೀಡುವ ಇಂಟಿಗ್ರೇಟೆಡ್ ಡೆವಲಪ್ವೆುಂಟ್ ಮ್ಯಾನೇಜ್ವೆುಂಟ್ ವ್ಯವಸ್ಥೆ ಜಾರಿಗೂ ಸರ್ಕಾರ ಮುಂದಾಗಿದೆ. ಇದರಿಂದ ದೇವಾಲಯಗಳ ಆದಾಯ ವೃದ್ಧಿಗೂ ಸಹಕಾರಿಯಾಗಲಿದೆ. ಇಲಾಖೆಯಲ್ಲಿನ ಸಿಬ್ಬಂದಿ ಕೊರತೆ ಸಂಬಂಧ ಸೂಕ್ತ ಪ್ರಸ್ತಾವನೆ ಸಲ್ಲಿಸುವಂತೆ ಆಯುಕ್ತರಿಗೆ ಸರ್ಕರ ಸೂಚನೆ ನೀಡಿದೆ.
ಮಕ್ಕಳ ಆರೋಗ್ಯಕ್ಕೆ ವಿಶೇಷ ಪೂಜೆ: ಸಂಭಾವ್ಯ ಕರೊನಾ 3ನೇ ಅಲೆಯಲ್ಲಿ ಮಕ್ಕಳ ಆರೋಗ್ಯಕ್ಕೆ ತೊಂದರೆಯಾಗಬಹುದೆಂಬ ತಜ್ಞರ ವರದಿ ಹಿನ್ನೆಲೆಯಲ್ಲಿ ವಿಜಯದಶಮಿ ದಿನ ಎಲ್ಲ ಮಕ್ಕಳ ಆರೋಗ್ಯ ರಕ್ಷಣೆಗಾಗಿ ಮುಜರಾಯಿ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಸಲ್ಲಿಸಲು ಸರ್ಕಾರ ಸುತ್ತೋಲೆ ಹೊರಡಿಸಿದೆ.
ತಸ್ತಿಕ್ ಬಿಡುಗಡೆ: ಪ್ರತಿ ವರ್ಷವೂ ದೇಗುಲಗಳ ನಿರ್ವಹಣೆಗೆ ಬಿಡುಗಡೆ ಮಾಡುವ ತಸ್ತಿಕ್ ಅನುದಾನ ತಾಂತ್ರಿಕ ಕಾರಣದಿಂದ ವಿಳಂಬವಾಗಿದೆ. ಈ ಯೋಜನೆಯಡಿ 2021-22ನೇ ಸಾಲಿನಲ್ಲಿ 134.62 ಕೋಟಿ ರೂ. ಒದಗಿಸಲಾಗಿದ್ದು, ಮೊದಲ 2 ತ್ರೖೆಮಾಸಿಕದಲ್ಲಿ 67.31 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಆನ್ಲೈನ್ ಮೂಲಕ ನೇರವಾಗಿ ಫಲಾನುಭವಿಗಳ ಖಾತೆಗೆ ಹಣ ವರ್ಗಾವಣೆ ಮಾಡುವ ಕುರಿತು ಸರ್ಕಾರದ ಮಟ್ಟದಲ್ಲಿ ಚರ್ಚೆ ನಡೆದಿದೆ.