

ಮಂಡ್ಯ: ಶ್ರೀರಂಗಪಟ್ಟಣ ದಸರಾ (Dasara) ಮಹೋತ್ಸವಕ್ಕೆ ಆಗಮಿಸಿದ ದಸರಾ ಆನೆಗಳ ಪೈಕಿ ಲಕ್ಷ್ಮೀ ಆನೆ (Elephant) ಬೆದರಿ, ಮನಸ್ಸೋ ಇಚ್ಛೆ ಅಡ್ಡಾದಿಡ್ಡಿ ಓಡಾಡಿದ್ದು, ಸ್ಥಳೀಯರು ಆನೆ ರಂಪಾಟಕ್ಕೆ ದಿಕ್ಕಾಪಾಲಾಗಿ ಕಾಲ್ಕಿತ್ತ ಘಟನೆ ಕ್ಯಾಮರಾದಲ್ಲಿ ಸೆರೆಯಾಗಿದೆ.
ನಿನ್ನೆಯಷ್ಟೇ ಶ್ರೀರಂಗಪಟ್ಟಣಕ್ಕೆ ಆಗಮಿಸಿರುವ ಮೂರು ಆನೆಗಳಲ್ಲಿ ಇಂದು ಬನ್ನಿಮಂಟಪಕ್ಕೆ ತೆರಳುವಾಗ ಲಕ್ಷ್ಮೀ ಆನೆ ದಿಢೀರ್ ಬೆದರಿದೆ.
ಶ್ರೀರಂಗಪಟ್ಟಣದ ಮಿನಿ ವಿಧಾನಸೌಧದ ಬಳಿ ಈ ಘಟನೆ ಸಂಭವಿಸಿದೆ. ಬನ್ನಿಮಂಟಪದಿಂದ ರಂಗನಾಥ ಮೈದಾನದವರೆಗೆ ಅಂಬಾರಿ ಜತೆ ಹಿರಣ್ಯ ಆನೆ ಹೆಜ್ಜೆ ಹಾಕಲಿದೆ. ಮರದ ಅಂಬಾರಿ ಹೊರಲಿರುವ ಮಹೇಂದ್ರ ಆನೆಗೆ ಕುಮ್ಕಿ ಆನೆಯಾಗಿ ಲಕ್ಷ್ಮೀ, ಹಿರಣ್ಯ ಹೆಜ್ಜೆ ಹಾಕಲಿದ್ದಾರೆ.
ಆನೆಗಳಿಗೆ ಚಿತ್ರಾಲಂಕಾರ ಮಾಡುವ ವೇಳೆ ಲಕ್ಷ್ಮೀ ಬೆದರಿ, ಸ್ಥಳದಿಂದ ಅಡ್ಡಾದಿಡ್ಡಿ ಓಡಾಡಿದ್ದಾಳೆ. ತಕ್ಷಣವೇ ಎಚ್ಚೆತ್ತುಕೊಂಡ ಮಾವುತರು, ಕಾವಾಡಿಗರಿಂದ ಭಾರೀ ಅನಾಹುತ ತಪ್ಪಿತು.