ಆರ್‌ಎಸ್‌ಎಸ್ ನಿಷೇಧಕ್ಕೆ ದಸಂಸ ಆಗ್ರಹ

ಪಿರಿಯಾಪಟ್ಟಣದ ತಾಲೂಕು ಕಚೇರಿಯ ಮುಂಭಾಗ ದಸಂಸ ಮುಖಂಡರು ಪ್ರತಿಭಟನೆ ನಡೆಸಿ ಉಪ ತಹಸೀಲ್ದಾರ್ ವಿನೋದ್ ಕುಮಾರ್ ಅವರಿಗೆ ಮನವಿ ಪತ್ರ ಸಲ್ಲಿಸಿದರು. ಎಸ್.ರಾಮು, ಧನರಾಜ್, ತಮ್ಮಣ್ಣಯ್ಯ, ಕಾಮರಾಜು, ಪುಟ್ಟರಾಜು, ಹೊನ್ನೂರಯ್ಯ, ಚೆಲುವಯ್ಯ ಇತರರು ಇದ್ದರು.
ಪಿರಿಯಾಪಟ್ಟಣದ ತಾಲೂಕು ಕಚೇರಿಯ ಮುಂಭಾಗ ದಸಂಸ ಮುಖಂಡರು ಪ್ರತಿಭಟನೆ ನಡೆಸಿ ಉಪ ತಹಸೀಲ್ದಾರ್ ವಿನೋದ್ ಕುಮಾರ್ ಅವರಿಗೆ ಮನವಿ ಪತ್ರ ಸಲ್ಲಿಸಿದರು. ಎಸ್.ರಾಮು, ಧನರಾಜ್, ತಮ್ಮಣ್ಣಯ್ಯ, ಕಾಮರಾಜು, ಪುಟ್ಟರಾಜು, ಹೊನ್ನೂರಯ್ಯ, ಚೆಲುವಯ್ಯ ಇತರರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಮುಖಂಡರಿಂದ ಪಿರಿಯಾಪಟ್ಟಣದಲ್ಲಿ ಪ್ರತಿಭಟನೆ
ಪಿರಿಯಾಪಟ್ಟಣ: ದೇಶದಲ್ಲಿ ಕೋಮು ಸೌಹಾರ್ದತೆಗೆ ಧಕ್ಕೆ ಉಂಟುಮಾಡಿ ಜನರನ್ನು ಧರ್ಮದ ಆಧಾರದ ಮೇಲೆ ವಿಭಜನೆ ಮಾಡುತ್ತಿರುವ ಆರ್‌ಎಸ್‌ಎಸ್ ಸಂಘಟನೆಯನ್ನು ಶಾಶ್ವತವಾಗಿ ನಿಷೇಧಿಸಬೇಕು ಎಂದು ಒತ್ತಾಯಿಸಿ ತಾಲೂಕಿನ ದಸಂಸ ಮುಖಂಡರು ಸೋಮವಾರ ಪ್ರತಿಭಟನೆ ನಡೆಸಿದರು.
ಪಟ್ಟಣದ ತಾಲೂಕು ಕಚೇರಿಯ ಮುಂಭಾಗ ಜಮಾವಣೆಗೊಂಡ ಪ್ರತಿಭಟನಾಕಾರರು, ಆರ್‌ಎಸ್‌ಎಸ್ ಹಾಗೂ ವಿಶ್ವ ಹಿಂದು ಮಹಾಸಭಾದಂತಹ ಸಂಘಟನೆಗಳಿಗೆ ಸರ್ಕಾರ ಯಾವುದೇ ರೀತಿಯ ಸಹಕಾರ ನೀಡಬಾರದು ಎಂದು ಅಗ್ರಹಿಸಿದರು. ದಸಂಸ ಸಂಚಾಲಕ ಎಸ್.ರಾಮು ಮಾತನಾಡಿ, 1950ರ ದಶಕದಲ್ಲಿಯೇ ಡಾ.ಬಿ.ಆರ್.ಅಂಬೇಡ್ಕರ್ ಅವರು ಯಾವುದೇ ಕಾರಣಕ್ಕೂ ಆರ್‌ಎಸ್‌ಎಸ್ ಹಾಗೂ ವಿಶ್ವ ಹಿಂದು ಮಹಾಸಭಾ ಸಂಘಟನೆಗಳೊಂದಿಗೆ ಹೊಂದಾಣಿಕೆ ಮಾಡಿಕೊಳ್ಳದಂತೆ ಅಖಿಲ ಭಾರತ ಪರಿಶಿಷ್ಟ ಜಾತಿಗಳ ಒಕ್ಕೂಟದ ಪ್ರಣಾಳಿಕೆಯಲ್ಲಿ ಎಚ್ಚರಿಕೆ ನೀಡಿದ್ದರು ಹಾಗೂ ಆರ್‌ಎಸ್‌ಎಸ್ ಎಂಬುದು ಅಪಾಯಕಾರಿ ಸಂಘಟನೆ ಎಂದು ತಮ್ಮ ಅಭಿಪ್ರಾಯವನ್ನು ತಿಳಿಸಿದ್ದರು ಎಂದರು.
ಭಾರತ ಸಂವಿಧಾನ ಜಾರಿಗೊಂಡಾಗ ಆರ್‌ಎಸ್‌ಎಸ್ ಪತ್ರಿಕೆಯಾದ ಆರ್ಗನೇಜರ್‌ನಲ್ಲಿ ಭಾರತ ಸಂವಿಧಾನದ ಬಗ್ಗೆ ಕೀಳು ಅಭಿಪ್ರಾಯ ವ್ಯಕ್ತಪಡಿಸಲಾಗಿತ್ತು. ಮನುವಾದಿಗಳು ಮನುಸ್ಮೃತಿಯನ್ನು ಪೂಜಿಸಿ ಭಾರತದ ಸಂವಿಧಾನವನ್ನು ಅಂದಿನಿಂದಲೂ ತಿರಸ್ಕಾರದ ಮನೊಭಾವದಿಂದಲೇ ನೋಡುತ್ತಾ ಬಂದಿದ್ದಾರೆ. ಇತ್ತಿಚಿಗೆ ಭಾರತದ ಮುಖ್ಯ ನ್ಯಾಯಾಧೀಶ ಗವಾಯಿ ಅವರತ್ತ ಶೂ ಎಸೆಯಲಾಗಿತ್ತು. ಈ ಕೃತ್ಯ ಮಾಡಿದ ವಕೀಲ ರಾಕೇಶ ಕಿಶೋರ ಎಂಬಾತ ಸನಾತನ ಧರ್ಮ ಉಳಿಸಲು ಶೂ ಎಸೆದೆ ಎಂದು ಹೇಳುತ್ತಾನೆ. ದೇಶದಲ್ಲಿ ಆತ ವಕೀಲನಾಗಿದ್ದು ಮನುಸ್ಮೃತಿಯಿಂದಲೋ ಅಥವಾ ಸಂವಿಧಾನದಿಂದಲೋ ಎಂಬುದನ್ನು ಅರ್ಥಮಾಡಿಕೊಳ್ಳಬೇಕು ಎಂದರು.
ದಸಂಸ ಮುಖಂಡ ಧನರಾಜ್ ಬೆಣಗಾಲು ಮಾತನಾಡಿ, ಇತ್ತಿಚಿಗೆ ಆರ್‌ಎಸ್‌ಎಸ್ 100 ವರ್ಷ ಪೂರೈಸಿದೆ ಎಂಬ ಕಾರಣವನ್ನು ಇಟ್ಟುಕೊಂಡು ಕಾನೂನು ಬಾಹಿರವಾಗಿ ದೊಣ್ಣೆ ಹಿಡಿದು ತನಗೆ ಬೇಕಾದ ಹಾಗೆ ಸಂಭ್ರಮಾಚರಣೆಯಲ್ಲಿ ತೊಡಗಿದೆ. ಆರ್‌ಎಸ್‌ಎಸ್ ಸಂಘಟನೆಯು ಮುಂಗಡವಾಗಿ ಯಾವುದೇ ರೀತಿಯ ಅನುಮತಿ ಇಲ್ಲದೆ ತನಗೆ ಬೇಕಾದ ಸ್ಥಳಗಳಲ್ಲಿ ಪಥ ಸಂಚಲನ ಮಾಡಿ ತೊಂದರೆ ಕೊಡುತ್ತಿರುವ ಕ್ರಮ ಖಂಡಿಸಿ ಸಚಿವ ಪ್ರಿಯಾಂಕ್ ಖರ್ಗೆ ಸರ್ಕಾರಕ್ಕೆ ಪತ್ರ ಬರೆದಿದ್ದರು. ಹೀಗಾಗಿ ಅವರ ವಿರುದ್ಧ ಆರ್‌ಎಸ್‌ಎಸ್ ಕಾರ್ಯಕರ್ತರು ಸಾಮಾಜಿಕ ಜಾಲತಾಣಗಳಲ್ಲಿ ಅಶ್ಲೀಲ ಪದಗಳನ್ನು ಬಳಿಸಿ ನಿಂದಿಸುತ್ತಿರುವುದು ಅವರ ಕೀಳು ಮಟ್ಟದ ಮನಸ್ಥಿತಿ ತೋರಿಸುತ್ತಿದೆ ಎಂದು ಟೀಕಿಸಿದರು.
ದೇಶದ ಜನತೆಯಲ್ಲಿ ಕೋಮು ದ್ವೇಷ ತುಂಬಿ, ಜಾತಿ ಜಾತಿಗಳ ನಡುವೆ ಕೋಮು ಗಲಭೆ ಉಂಟು ಮಾಡುತ್ತಿರುವ ಆರ್‌ಎಸ್‌ಎಸ್ ಸಂಘಟನೆಯನ್ನು ಸರ್ಕಾರ ರದ್ದುಗೊಳಿಸಬೇಕು ಹಾಗೂ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಜೀವ ಬೆದರಿಕೆ ಹಾಕಿದವರನ್ನು ಕಾನೂನು ಪ್ರಕಾರ ಶಿಕ್ಷೆಗೆ ಗುರಿಪಡೆಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿ ಉಪ ತಹಸೀಲ್ದಾರ್ ವಿನೋದ್ ಕುಮಾರ್ ಅವರ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ಪುರಸಭಾ ಸದಸ್ಯ ತಮ್ಮಣ್ಣಯ್ಯ, ಮುಖಂಡರಾದ ಕಾಮರಾಜು, ಪುಟ್ಟರಾಜು, ಹೊನ್ನೂರಯ್ಯ, ಚೆಲುವಯ್ಯ, ಶಿವರಾಜು, ದೇವೇಂದ್ರ, ರವಿ, ಮಹೇಶ್, ಭದ್ರ, ಜಗದೀಶ್, ಶಿವದೇವಪ್ಪ, ಮಹದೇವ್, ರಾಜೇಶ್, ಗಣೇಶ್, ಮರಿಯಣ್ಣ, ನಾಗರಾಜ್ ಸೇರಿದಂತೆ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net